ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮಹಾರಾಷ್ಟ್ರ ಪೊಲೀಸ್ ಪೇದೆ ಲಲಿತಾ ಸಾಳ್ವೆ, ಶೀಘ್ರದಲ್ಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಕಳೆದ ಮೇ 25 ರಂದು ಲಲಿತಾ ಅವರಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಗಂಡಾಗಿ ಪರಿವರ್ತನೆಗೊಂಡು ಲಲಿತ್ ಕುಮಾರ್ ಆಗಿರುವ ಪೇದೆಯನ್ನು ಸ್ವಾಗತಿಸಲು ಬೀಡ್ ಪೊಲೀಸರು ಸಜ್ಜಾಗಿದ್ದಾರೆ.

ಮುಂಬೈ(ಜೂ.5): ಇತ್ತಿಚೀಗಷ್ಟೇ ಲಿಂಗ ಪರಿವರ್ತನೆ ಮಾಡಿಕೊಂಡಿದ್ದ ಮಹಾರಾಷ್ಟ್ರದ ಮಹಿಳಾ ಪೊಲೀಸ್ ಪೇದೆ, ಇದೀಗ ಕರ್ತವ್ಯಕ್ಕೆ ಹಾಜರಾಗಲು ಸಿದ್ದತೆ ನಡೆಸಿದ್ದಾರೆ. ಲಲಿತಾ ಸಾಲ್ವೆ ಎಂಬ ಮಹಿಳಾ ಪೇದೆ ಸ್ವಇಚ್ಛೆಯಿಂದ ಲಿಂಗ ಪರಿವರ್ತನೆ ಮಾಡಿಸಿಕೊಂಡು ಗಂಡಾಗಿ ಪರಿವರ್ತನೆ ಹೊಂದಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಲಲಿತ್ ಕುಮಾರ್ ಕೆಲವೇ ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲಿದ್ದು, ಪುರುಷ ಪೇದೆಗೆ ಸಿಗುವ ಎಲ್ಲ ಸವಲತ್ತುಗಳನ್ನೂ ಅವರಿಗೆ ನೀಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ತಗುಲಿದ ವೆಚ್ಛವನ್ನು ಅವರೇ ಭರಿಸಬೇಕಾಗುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಲಲಿತಾ ಅವರು ಕಳೆದ ಮೇ 25 ರಂದು ಮುಂಬೈನ ಜಾರ್ಜ್ ಆಸ್ಪತ್ರೆಯಲ್ಲಿ ಲಿಂಗ ಪರಿವರ್ತನೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದಾದ ಬಳಿಕ ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಬೀಡ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಲಲಿತ್ ಕುಮಾರ್ ಆಗಿ ಬದಲಾವಣೆ ಹೊಂದಿರುವ ಪೇದೆಗೆ ಕರ್ತವ್ಯಕ್ಕೆ ಹಾಜರಾಗಲು ಅನುಮತಿ ನೀಡಿ ಎಂದು ಸೂಚಿಸಿದ್ದರು.