ಮುಂಬೈ[ಜು.20]: ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕರ್ನಾಟಕದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಅವರನ್ನು ಭೇಟಿ ಮಾಡುವ ಸಲುವಾಗಿ ಮಹಾರಾಷ್ಟ್ರದ ಕಾಂಗ್ರೆಸ್ ಶಾಸಕಿ ಹಾಗೂ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಯಶೋಮತಿ ಠಾಕೂರ್ ಬಲವಂತವಾಗಿ ಆಸ್ಪತ್ರೆಗೆ ನುಗ್ಗಿದ ದಾಂಧಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಅನಾರೋಗ್ಯದ ಕಾರಣಕ್ಕಾಗಿ ಶಾಸಕ ಪಾಟೀಲ್ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ವಿಧಾನಸಭಾ ಕಲಾಪಕ್ಕೆ ಗೈರು ಹಾಜರಾಗಿ ಇಲ್ಲಿನ ಸೇಂಟ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ವಿಚಾರಿಸುವ ಸಲುವಾಗಿ ಶಾಸಕಿ ಯಶೋ ಮತಿ ಅವರು ಶುಕ್ರವಾರ ಆಸ್ಪತ್ರೆಗೆ ಆಗಮಿಸಿ ಪಾಟೀಲ್ ಭೇಟಿಗೆ ಅನುಮತಿ ಕೋರಿದ್ದಾರೆ. ಆದರೆ, ಇದಕ್ಕೆ ನಿರಾಕರಿಸಿದ ಪೊಲೀಸರು, ಭದ್ರತಾ ಸಿಬ್ಬಂದಿ ಹಾಗೂ ಶಾಸಕ ಪಾಟೀಲ್ ಪುತ್ರ ಶ್ರೀನಿವಾಸ್ ಜೊತೆ ಭಾರೀ ಮಾತಿನ ಚಕಮಕಿ ನಡೆಸಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಲ್ಲದೆ, ಶಾಸಕನ ಭೇಟಿಗೆ ನಿರಾಕರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯಶೋಮತಿ ಠಾಕೂರ್ ಅವರು, ‘ನಮ್ಮ ಶಾಸಕನನ್ನು ಭೇಟಿ ಮಾಡಲು ನಮಗೆ ಅನುಮತಿಸುವುದಿಲ್ಲವೇ. ನಿನ್ನ ತಂದೆಯನ್ನು ಇನ್ನೂ ಒಳ್ಳೇ ಆಸ್ಪತ್ರೆಗೆ ನಾನು ಸೇರಿಸುತ್ತೇನೆ. ನೀನು ಶಾಸಕ ನಾಗುವ ಬಯಕೆಯಿಂದ ಹೀಗೆಲ್ಲಾ ಮಾಡುತ್ತಿದ್ದೀಯಾ’ ಎಂದು ಯಶೋಮತಿ ಅವರು ಶ್ರೀನಿವಾಸ್ ಅವರನ್ನು ತರಾಟೆಗೆ ತೆಗೆದುಕೊಂಡರು’ ಎಂದು ಹೇಳಲಾಗಿದೆ.