ಮುಖ್ಯಮಂತ್ರಿಯಾಗಿವ ದುರಾಸೆಯಿಂದ ಸಚಿವ ಡಿ.ಕೆ ಶಿವಕುಮಾರ್ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಜಗದ್ಗುರು ಮಹಾಂತ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. 

ಕಲಬುರಗಿ :  ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರವಾಗಿ ಸಚಿವ ಡಿ.ಕೆ. ಶಿವಕುಮಾರ್ ಕ್ಷಮೆಯಾಚನೆ ವಿಚಾರವಾಗಿ ಶ್ರೀಶೈಲ ಸಾರಂಗಧರ ಮಠದ ಜಗದ್ಗುರು ಮಹಾಂತ ಶಿವಾಚಾರ್ಯ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. 

ಸಚಿವ ಡಿ.ಕೆ.ಶಿವಕುಮಾರ್ ಗೆ ಅವನತಿ ಕಾಲ ಬಂದಿದೆ. ಸಚಿವ ಡಿ.ಕೆ.ಶಿವಕುಮಾರ್‌ಗೂ ಲಿಂಗಾಯತ ಧರ್ಮಕ್ಕೂ ಯಾವುದೇ ಸಂಬಂಧವಿಲ್ಲ. ಸಚಿವ ಡಿ.ಕೆ.ಶಿವಕುಮಾರ್ ಒಕ್ಕಲಿಗ ಸಮಾಜದಲ್ಲಿ ಎಷ್ಟು ಕಾಂಗ್ರೆಸ್‌ಗೆ ವೋಟ್ ತಂದಿದ್ದಾರೆ ಎಂದು ತಿಳಿದುಕೊಳ್ಳಬೇಕು. 

ಉತ್ತರ ಕರ್ನಾಟಕದಲ್ಲಿ 60 ಲಿಂಗಾಯತ ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ. ಆದರೆ ವೈದಿಕ ಸ್ವಾಮೀಜಿಗಳ ಒತ್ತಡಕ್ಕೆ ಡಿಕೆಶಿ ಹೀಗೆ ಮಾತನಾಡುತ್ತಾನೆಂದರೆ ಅದು ಅವಿವೇಕಿತನ ಎಂದು ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. 

ಸಚಿವ ಡಿ.ಕೆ.ಶಿವಕುಮಾರ್ ಅನಂತ ಹಗರಣಗಳಲ್ಲಿ ಭಾಗಿಯಾಗಿದ್ದು, ತನ್ನ ಹಗರಣಗಳನ್ನು ತಾನು ಮುಗಿಸಿಕೊಳ್ಳಬೇಕು. ಹೊರತಾಗಿ ಮತ್ತೊಬ್ಬರ ವಿಚಾರದಲ್ಲಿ ಕೈ ಹಾಕುವ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದ್ದಾರೆ. 

ಅಲ್ಲದೇ ಲಿಂಗಾಯತ ಧರ್ಮ ವಿಚಾರದ ಹೇಳಿಕೆ ಸಂಬಂಧ ಡಿ.ಕೆ.ಶಿವಕುಮಾರ್‌ ಕ್ಷಮೆ ಕೇಳಬೇಕು. ಲಿಂಗಾಯತ ಧರ್ಮದ ವಿಚಾರದಲ್ಲಿ ಕೈ ಹಾಕಬಾರದು. ಸಿಎಂ ಆಗಬೇಕೆಂಬ ದುರಾಸೆಯಿಂದ ಸ್ವಾಮೀಜಿಯೊಬ್ಬರನ್ನ ಒಲಿಸಿಕೊಳ್ಳಬೇಕೆಂದು ಅವರು ಇಂತಹ ಹೇಳಿಕೆ ಕೊಟ್ಟಿದ್ದಾರೆ. ಸಚಿವ ಡಿಕೆಶಿ ಈ ರೀತಿ ಹೇಳಿಕೆ ನೀಡಿದರೆ ಉತ್ತರ ಕರ್ನಾಟಕಕ್ಕೆ ಬರದಂತೆ ಬಹಿಷ್ಕಾರ ಹಾಕಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. 

ಪ್ರತ್ಯೇಕ ಲಿಂಗಾಯತ ಧರ್ಮ ಶಿಫಾರಸು‌ ಅಪರಾಧ ಆಗಿದ್ದರೆ ಕ್ಯಾಬಿನೆಟ್‌ನಲ್ಲಿ ಸಹಿ ಯಾಕೆ ಮಾಡಿದರು. ಕ್ಯಾಬಿನೆಟ್‌ನಲ್ಲಿ‌ ಸಹಿ ಮಾಡಬೇಕಾದರೆ ಡಿಕೆಶಿ ಏನು ಮಾಡುತ್ತಿದ್ದರು. ಸಚಿವ ಡಿಕೆಶಿಗೆ ಬುದ್ಧಿಭ್ರಮೆಯಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾನೆ ಎಂದು ವಾಗ್ದಾಳಿ ನಡೆಸಿದ್ದಾರೆ.