ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಣ ಕಾಂಗ್ರೆಸ್ ಪಕ್ಷವನ್ನು ಆವರಿಸಿಕೊಳ್ಳುತ್ತಿರುವ ರೀತಿಯಿಂದ ಈಗಾಗಲೇ ತಳಮಳಕ್ಕೆ ಒಳಗಾಗಿರುವ ಕಾಂಗ್ರೆಸ್ಸಿಗರು, ಅದರಲ್ಲೂ ಬೆಂಗಳೂರು ಮೂಲದ ಘಟಾನುಘಟಿ ಕಾಂಗ್ರೆಸ್ಸಿಗರು ಹೊಸದೊಂದು ‘ಪೊಲಿಟಿಕಲ್ ಬಾಂಬ್’ ಬೀಳುವ ಭೀತಿಗೆ ಸಿಲುಕಿದ್ದಾರೆ.

ಬೆಂಗಳೂರು(ಸೆ.03): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಣ ಕಾಂಗ್ರೆಸ್ ಪಕ್ಷವನ್ನು ಆವರಿಸಿಕೊಳ್ಳುತ್ತಿರುವ ರೀತಿಯಿಂದ ಈಗಾಗಲೇ ತಳಮಳಕ್ಕೆ ಒಳಗಾಗಿರುವ ಕಾಂಗ್ರೆಸ್ಸಿಗರು, ಅದರಲ್ಲೂ ಬೆಂಗಳೂರು ಮೂಲದ ಘಟಾನುಘಟಿ ಕಾಂಗ್ರೆಸ್ಸಿಗರು ಹೊಸದೊಂದು ‘ಪೊಲಿಟಿಕಲ್ ಬಾಂಬ್’ ಬೀಳುವ ಭೀತಿಗೆ ಸಿಲುಕಿದ್ದಾರೆ.

ಅದು- ಸಿದ್ದರಾಮಯ್ಯ ಅವರ ಅತ್ಯಾಪ್ತ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಬೆಂಗಳೂರಿನ ಸಿ.ವಿ. ರಾಮನ್ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಪಡೆಯಲು ಪ್ರಯತ್ನ ತೀವ್ರಗೊಳಿಸಿರುವುದು. ಈ ಬೆಳವಣಿಗೆ ಸಿಎಂ ಅವರ ಮತ್ತೊಬ್ಬ ಆಪ್ತ ಕೆ.ಜೆ. ಜಾರ್ಜ್ ಸೇರಿದಂತೆ ಬೆಂಗಳೂರಿನ ಪ್ರಭಾವಿ ಕಾಂಗ್ರೆಸ್ ನಾಯಕರಿಗೆ ಹೊಸ ತಲೆಬಿಸಿಯಾಗಿದೆ.

ಇದಕ್ಕೆ ಕಾರಣ ಭವಿಷ್ಯದ ಚಿಂತೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಹದೇವಪ್ಪ ಬೆಂಗಳೂರಿನ ಸಿ.ವಿ. ರಾಮನ್ ನಗರದಲ್ಲಿ ಗೆದ್ದು ಶಾಸಕರಾಗುತ್ತಾರೆ ಎಂದಿಟ್ಟುಕೊಳ್ಳಿ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಹಾಗೂ ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿಯಾಗಿಬಿಡುತ್ತಾರೆ ಎಂದು ಭಾವಿಸಿ... ಆಗ ಬೆಂಗಳೂರು ಮೇಲಿನ ಹತೋಟಿ ಯಾರ ಪಾಲಾಗುತ್ತದೆ? ಇಂತಹದೊಂದು ಚಿಂತೆ ನಗರದ ಪ್ರಭಾವಿ ಕಾಂಗ್ರೆಸ್ ನಾಯಕರನ್ನು ಕಾಡತೊಡಗಿದೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ಇಷ್ಟಕ್ಕೂ ಮಹದೇವಪ್ಪ ಅವರು ಬೆಂಗಳೂರಿನ ಸಿ.ವಿ. ರಾಮನ್ ನಗರ ಕ್ಷೇತ್ರದತ್ತ ಕಣ್ಣುಹಾಕಲು ಕಾರಣ ಪುತ್ರವಾತ್ಸಲ್ಯ. ತಮ್ಮ ಪುತ್ರ ಸುನೀಲ್ ಬೋಸ್ ಅವರಿಗೆ ನಂಜನಗೂಡು ಉಪ ಚುನಾವಣೆಯಲ್ಲಿ ಟಿಕೆಟ್ ಕೊಡಿಸಲು ಮಹದೇವಪ್ಪ ಬಯಸಿದ್ದರು. ಆದರೆ, ಖುದ್ದು ಸಿದ್ದರಾಮಯ್ಯ ಅವರು ಮಹದೇವಪ್ಪ ಅವರ ಈ ಆಸೆಗೆ ಅಡ್ಡ ಬಂದರು. ನಂಜನಗೂಡು ಕ್ಷೇತ್ರ ಗೆದ್ದೇ ಗೆಲ್ಲಬೇಕು ಎಂಬ ಹಟವಿದ್ದುದರಿಂದ ಸುನೀಲ್ ಬೋಸ್ ಬದಲಿಗೆ ಗೆಲ್ಲಬಲ್ಲ ಅಭ್ಯರ್ಥಿ ಎನಿಸಿದ ಕಳಲೆ ಕೇಶವಮೂರ್ತಿ ಅವರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳಲಾಯಿತು.

ಕಳಲೆ ಕೇಶವಮೂರ್ತಿ ಅವರಿಗೆ ಉಪ ಚುನಾವಣೆಗೆ ಟಿಕೆಟ್ ನೀಡುವಾಗಲೇ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಹೀಗಾಗಿ ಸುನೀಲ್ ಬೋಸ್ ಪಾಲಿಗೆ ನಂಜನಗೂಡು ಕ್ಷೇತ್ರದ ಬಾಗಿಲು ಮುಚ್ಚಿತ್ತು. ಹೀಗಾಗಿ ಸುನೀಲ್ ಬೋಸ್ ಟಿ. ನರಸೀಪುರ ಕ್ಷೇತ್ರದಲ್ಲಿ ಸಕ್ರಿಯರಾದರು. ತಮ್ಮ ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಸುರಕ್ಷಿತ ಕ್ಷೇತ್ರವನ್ನು ನೀಡುವ ಬಯಕೆ ಹೊಂದಿರುವ ಮಹದೇವಪ್ಪ ಅವರು ಸಹಜವಾಗಿಯೇ ತಮ್ಮ ಕ್ಷೇತ್ರವನ್ನು ಬಿಟ್ಟುಕೊಡಲು ಮುಂದಾದರು ಹಾಗೂ ಈ ಬಗ್ಗೆ ಕಾಂಗ್ರೆಸ್ ನಾಯಕತ್ವದ ಮನವೊಲಿಸುವಲ್ಲೂ ಯಶಸ್ವಿಯಾಗಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತವೆ. ಹೀಗೆ ಪುತ್ರನಿಗೆ ಕ್ಷೇತ್ರ ಬಿಟ್ಟುಕೊಟ್ಟ ನಂತರ ಹೊಸ ಕ್ಷೇತ್ರದ ಹುಡುಕಾಟದಲ್ಲಿದ್ದ ಅವರು ಅನಿವಾರ್ಯವಾಗಿ ಮೈಸೂರು ನಗರ ಹಾಗೂ ಬೆಂಗಳೂರು ನಗರ (ಸಿ.ವಿ. ರಾಮನ್ ನಗರ)ದತ್ತ ದೃಷ್ಟಿ ಹಾಯಿಸಿದರು ಎನ್ನಲಾಗಿದೆ. ಮೈಸೂರಿನಲ್ಲಿ ಕ್ಷೇತ್ರಗಳು ಲಭ್ಯವಾಗುವುದು ಕಷ್ಟವಾಗಿರುವ ಹಿನ್ನೆಲೆಯಲ್ಲಿ ಅಂತಿಮವಾಗಿ ಎಸ್.ಸಿ. ಮೀಸಲು ಕ್ಷೇತ್ರವಾದ ಸರ್ ಸಿ.ವಿ.ರಾಮನ್ ನಗರದ ಬಗ್ಗೆ ಮಹದೇವಪ್ಪ ಅವರಿಗೆ ಹೆಚ್ಚಿನ ಒಲವಿದೆ ಎನ್ನಲಾಗುತ್ತಿದೆ.

ಇದಕ್ಕೆ ಕಾರಣ ಸಿ.ವಿ. ರಾಮನ್ ನಗರದಲ್ಲಿ ಕಾಂಗ್ರೆಸ್ ಇಬ್ಭಾಗವಾಗಿರುವುದು. ಕಳೆದ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಸಿ.ರಮೇಶ್ ಅವರು ಈ ಬಾರಿಯೂ ಸಿ.ವಿ. ರಾಮನ್ ನಗರ ಕ್ಷೇತ್ರದ ಆಕಾಂಕ್ಷಿಯಾಗಿದ್ದಾರೆ. ಆದರೆ, ಕ್ಷೇತ್ರದಲ್ಲೇ ಅವರ ವಿರೋಧಿ ಬಣವೂ ಪ್ರಬಲವಾಗಿದೆ. ಬ್ಲಾಕ್ ಕಾಂಗ್ರೆಸ್‌ನ ಹಲವು ನಾಯಕರು ರಮೇಶ್ ವಿರುದ್ಧವಿದ್ದಾರೆ. ಆದರೆ, ಮಹದೇವಪ್ಪ ಅವರು ಈ ಎರಡು ಗುಂಪುಗಳೊಂದಿಗೂ ಆಪ್ತತೆಯನ್ನು ಬೆಳೆಸಿಕೊಂಡಿದ್ದಾರೆ. ರಮೇಶ್ ಅವರಂತೂ ಮಹದೇವಪ್ಪ ಅವರ ಅತ್ಯಾಪ್ತರಾಗಿ ಪರಿಣಮಿಸಿದ್ದಾರೆ ಎನ್ನಲಾಗುತ್ತದೆ.

 ಒಂದು ಮೂಲದ ಪ್ರಕಾರ ಮಹದೇವಪ್ಪ ಅವರು ಈಗಾಗಲೇ ಈ ವಿಚಾರವನ್ನು ರಮೇಶ್ ಅವರೊಂದಿಗೆ ಪ್ರಸ್ತಾಪಿಸಿ, ಒಂದು ವೇಳೆ ತಾವು ಕ್ಷೇತ್ರಕ್ಕೆ ಬರುವುದಾದರೆ ಬೆಂಬಲಕ್ಕೆ ನಿಲ್ಲುವ ಭರವಸೆಯನ್ನು ಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ, ಮಹದೇವಪ್ಪ ಅವರು ಇನ್ನು ಮಾಡಬೇಕಿರುವುದು ಸಿ.ವಿ. ರಾಮನ್ ನಗರದಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ರಾಜ್ಯ ನಾಯಕತ್ವ ಹಾಗೂ ಹೈಕಮಾಂಡ್‌ನ ಒಪ್ಪಿಗೆ ಪಡೆಯುವುದು. ಈ ದಿಸೆಯಲ್ಲೂ ಅವರು ಪ್ರಾಥಮಿಕ ಪ್ರಯತ್ನ ಆರಂಭಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ಈ ಬಯಕೆಯನ್ನು ನಿವೇದಿಸಿಕೊಂಡಿದ್ದಾರೆ ಎಂದೂ ಹೇಳಲಾಗುತ್ತಿದೆ.

ಈ ಬೆಳವಣಿಗೆಗಳು ಕಾಂಗ್ರೆಸ್ ವಲಯದಲ್ಲಿ ಹಬ್ಬುತ್ತಿದ್ದಂತೆಯೇ ಬೆಂಗಳೂರಿನ ಕಾಂಗ್ರೆಸ್ ಘಟಾನುಘಟಿಗಳಿಗೆ ಆತಂಕ ಆರಂಭವಾಗಿದೆ. ಮಹದೇವಪ್ಪ ಅವರ ಪ್ರಯತ್ನಗಳು ಲಪ್ರದವಾದರೆ ಸಿದ್ದರಾಮಯ್ಯ ಅವರ ಬಣದ ಪ್ರಬಲ ವ್ಯಕ್ತಿಯೊಬ್ಬ ಬೆಂಗಳೂರನಲ್ಲಿ ಪ್ರತಿಷ್ಠಾಪಿತರಾದಂತಾಗುತ್ತದೆ. ಇದು ಬೆಂಗಳೂರಿನ ಘಟಾನುಘಟಿ ನಾಯಕರಿಗೆ ಮಗ್ಗುಲ ಮುಳ್ಳಾಗುವ ಚಿಂತೆಯಿದೆ ಎನ್ನಲಾಗುತ್ತಿದೆ.