ಚುನಾವಣಾ ಸಮಯದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದಕ್ಕೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಉಸ್ತುವಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಬೆಂಗಳೂರು : ಅತ್ತ ಕಾಂಗ್ರೆಸ್ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ತಂದು ಮುಖಭಂಗ ಮಾಡಿಸಿಕೊಂಡ ಬೆನ್ನಲ್ಲೇ, ಇತ್ತ ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡಲು ಹೊರಟ ಬಿಜೆಪಿಗೆ ತಕ್ಕ ಶಿಕ್ಷೆಯಾಗುತ್ತಿದೆ. ಎಲ್ಲರೊಡನೆ ಬಗೆಹರಿಸಬೇಕಾದ ವಿಷಯಕ್ಕೆ, ಎಲ್ಲವೂ ಬಗೆಹರಿಯಿತು ಎಂಬಂತೆ ಫೋಸ್ ನೀಡಿದ ರಾಜ್ಯ ಬಿಜೆಪಿಗೆ ಇದೀಗ ಈ ವಿಷಯ ನುಂಗಲಾರದ ತುತ್ತಾಗಿದೆ. ಬಿಜೆಪಿ ಕಚೇರಿ ಮುಂದೆಯೇ ಮಹದಾಯಿ ಹೋರಾಟಗಾರರು ಜಮಾಯಿಸಿದ್ದು, ವಿವಾದಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಕೂಡಲೇ ಸ್ಪಷ್ಟನೆ ನೀಡಬೇಕೆಂದು ಪಟ್ಟು ಹಿಡಿದಿದ್ದಾರೆ.
ಚುನಾವಣಾ ಸಮಯದಲ್ಲಿ ಪರಿಸ್ಥಿತಿ ಕೈ ಮೀರಿ ಹೋಗುತ್ತಿರುವುದಕ್ಕೆ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯ ಉಸ್ತುವಾರಿಗಳಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಸೂಕ್ಷ್ಮವಾದ ಈ ವಿಚಾರದಲ್ಲಿ ಬಿಜೆಪಿ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ವಿಫಲವಾಗಿದ್ದು, ಪಕ್ಷದ ರಾಜ್ಯ ಉಸ್ತುವಾರಿಗಳಾದ ಪ್ರಕಾಶ್ ಜಾವೇಡ್‌ಕರ್, ಪಿಯೂಶ್ ಗೋಯಲ್‌ಗೆ ತರಾಟೆ ತೆಗೆದುಕೊಂಡಿದ್ದಾರೆ.
ಈ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಅತ್ತ ಗೋವಾ ಪರ ಒಲವು ತೋರಿದರೆ, ಇತ್ತ ಕರ್ನಾಟಕ ಜನತೆಯ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ, ಇತ್ತ ಕರ್ನಾಟಕದ ಪರ ಒಲವು ತೋರಿದರೆ, ಅತ್ತ ಗೋವಾದಲ್ಲಿ ಆಡಳಿತ ನಡೆಸುತ್ತಿರುವ ಮನೋಹರ್ ಪರಿಕರ್ ನೇತೃತ್ವದ ಸರಕಾರದ ಕೆಂಗಣ್ಣಿಗೆ ಗುರಿಯಾಗಬೇಕು. ಈ ಎಲ್ಲವನ್ನೂ ನಿರ್ವಹಿಸಿಕೊಂಡು ಈ ವಿಚಾರವನ್ನು ಬಗೆಹರಿಸಬೇಕೆಂದು ಶಾ ರಾಜ್ಯ ಉಸ್ತುವಾರಿ ಹಾಗೂ ಯಡಿಯೂರಪ್ಪ ಸೂಚಿಸಿದ್ದಾರೆ, ಎನ್ನಲಾಗಿದೆ.
