ಬೆಳಗಾವಿ[ಡಿ.13]: ಚಳಿಗಾಲದ ಅಧಿವೇಶನದೊಳಗೆ ಮಹದಾಯಿ ಯೋಜನೆಯ ಅನುಷ್ಠಾನದ ಕುರಿತು ಸರ್ವ ಪಕ್ಷಗಳ ಸಭೆ ಕರೆದು ಸೂಕ್ತ ತೀರ್ಮಾನ ತಗೆದುಕೊಳ್ಳುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಖಂಡಿಸಿ ಗುರುವಾರ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಮಹದಾಯಿ ಮತ್ತು ಕಳಸಾ​-ಬಂಡೂರಿ ಸಮನ್ವಯ ಸಮಿತಿ ತಿಳಿಸಿದೆ.

ಹುಬ್ಬಳ್ಳಿಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಚಾಲಕ ಅಮೃತ ಇಜಾರಿ, ಮಹದಾಯಿ ನ್ಯಾಯಾಧಿಕರಣ ನೀಡಿದ ತೀರ್ಪಿನಂತೆ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರದಿಂದ ನಿರಾಕ್ಷೇಪಣಾ ಪತ್ರ ತರುವಂತೆ ಡಿಸೆಂಬರ್‌ 3ರಂದು ನಾವು ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಗೆ ಆಗ್ರಹ ಮಾಡಿದ್ದೆವು. ಡಿ.8ರಂದು ರಾಜ್ಯದ ಎಲ್ಲ ಲೋಕಸಭಾ ಸದಸ್ಯರ ಸಭೆಯನ್ನು ಕರೆಯಲಾಗಿತ್ತು. ಅಲ್ಲಿ ಕಾವೇರಿ ವಿವಾದ ಮತ್ತು ಮೇಕೆದಾಟು ಕಾಮಗಾರಿ ಬಗ್ಗೆ ಮಾತ್ರ ಚರ್ಚಿಸಲಾಯಿತು. ಮಹದಾಯಿ ಯೋಜನೆ ಅನುಷ್ಠಾನವಾಗಲಿ ಅಥವಾ ಕೃಷ್ಣಾ ನದಿಯ ವಿವಾದದ ಕುರಿತು ಒಂದು ಮಾತನ್ನು ಯಾರೂ ಪ್ರಸ್ತಾಪ ಮಾಡಲಿಲ್ಲ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದರು.

ನಾವು ಈಗಾಗಲೇ ಹಳ್ಳಿ ಹಳ್ಳಿಗೆ ಹೋಗಿ ಜನರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದೇವೆ. ಎಲ್ಲರೂ ಸೇರಿ ಸುವರ್ಣಸೌಧ ಮುತ್ತಿಗೆ ಹಾಕಲು ತೀರ್ಮಾನ ತೆಗೆದುಕೊಂಡಿದ್ದೇವೆ. ಒಟ್ಟು 500 ಜನ ರೈತರು ಬೆಳಗಾವಿಗೆ ಹೊರಟಿದ್ದು, ಬೆಳಗ್ಗೆ 10.30ಕ್ಕೆ ಸುವರ್ಣಸೌಧ ಮುತ್ತಿಗೆ ಹಾಕಲಿದ್ದಾರೆ. ಹುಬ್ಬಳ್ಳಿ, ನವಲಗುಂದ, ನರಗುಂದ ಹಾಗೂ ಸವದತ್ತಿ ರೈತರೂ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಪಾದಯಾತ್ರೆ:

ಕಳಸಾ- ಬಂಡೂರಿ ಯೋಜನೆ ಅನುಷ್ಠಾನ, ಕಬ್ಬಿನ ಬಾಕಿ ಬಿಲ್‌ ಪಾವತಿ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉತ್ತರ ಕರ್ನಾಟಕ ರೈತ ಸಂಘದ ಕಾರ್ಯಕರ್ತರು ಬುಧವಾರ ಬಾಗಲಕೋಟೆ ಜಿಲ್ಲೆ ಹನುಗುಂದ ತಾಲೂಕಿನ ಕಮತಗಿ ಗ್ರಾಮದಿಂದ ಪಾದಯಾತ್ರೆ ಮೂಲಕ ಬೆಳಗಾವಿ ಸುವರ್ಣ ಗಾರ್ಡನ್‌ಗೆ ಆಗಮಿಸಿ ಪ್ರತಿಭಟನೆ ನಡೆಸಿದರು.

ರೈತರ ಹೋರಾಟಕ್ಕೆ ವಕೀಲರ ಸಾಥ್‌

ಕಬ್ಬಿನ ಬಾಕಿ ಬಿಲ… ಪಾವತಿ, ಎಕ್ಸ್‌ಫೀಲ್ಡ್‌ ಆಧಾರದಲ್ಲಿ ಎಫ್‌ಆರ್‌ಪಿ ದರ ಘೋಷಣೆ ಹಾಗೂ ಕಬ್ಬಿನ ಉಪ ಉತ್ಪನ್ನಗಳಲ್ಲಿನ ಲಾಭಾಂಶ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ ಐದನೇ ದಿನವೂ ಮುಂದುವರಿದಿದೆ. ಆದರೂ ಸರ್ಕಾರ ಎಚ್ಚೆತ್ತುಕೊಳ್ಳದಿರುವ ಹಿನ್ನೆಲೆಯ ಡಿ.13ರಿಂದ ಪ್ರತಿಭಟನಾ ಸ್ಥಳವನ್ನು ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಸುವರ್ಣ ಸೌಧದ ಬಳಿಯಿರುವ ಕೊಂಡಸಕೊಪ್ಪಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ. ಇದೇವೇಳೆ ರೈತರ ಹೋರಾಟಕ್ಕೆ ಸಾಥ್‌ ನೀಡಿರುವ ವಕೀಲರ ಸಂಘ ಸಮಸ್ಯೆ ಬಗೆಹರಿಸದಿದ್ದರೆ ತಾವೇ ಮುಂದೆ ನಿಂತು ರೈತರ ಪರವಾಗಿ ಕಾನೂನು ಹೋರಾಟ ರೂಪಿಸುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿ ವಕೀಲರ ಸಂಘದ ಸದಸ್ಯರು ನ್ಯಾಯಾಲಯದ ಕಲಾಪಗಳಿಂದ ದೂರ ಉಳಿಯುವ ಮೂಲಕ ಬೆಂಬಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ವಕೀಲರ ಸಂಘಗಳು ಸಂಪೂರ್ಣ ಬೆಂಬಲ ನೀಡಿವೆ.

ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಅತಿಥಿ ಉಪನ್ಯಾಸಕರು, ವಿಕಲಚೇತನರು, ಪೊಲೀಸ್‌ ಇಲಾಖೆಯಿಂದ ಕೆಲಸದಿಂದ ತೆಗೆದುಹಾಕಿದ ಜಾಡಮಾಲಿ ಕೆಲಸಗಾರರು, ಪೌರ ಕಾರ್ಮಿಕರ ಬಾಕಿ ವೇತನ ಪಾವತಿಸುವಂತೆ ಪೌರ ಕಾರ್ಮಿರು, ಕಳಸಾ- ಬಂಡೂರಿ ಯೋಜನೆ ಅನುಷ್ಠಾನ ಗೊಳಿಸಬೇಕು ಎಂದು ಉತ್ತರ ಕರ್ನಾಟಕ ರೈತರ ಸಂಘಟನೆ ಹಾಗೂ ವಿಕಲಚೇತನರು ಸಹ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುಧವಾರ ಪ್ರತಿಭಟನೆ ನಡೆಸಿದರು.