ಮಹಾದಾಯಿ ವಿವಾದ ಬಗೆಹರಿಸಲು ಮಹಾರಾಷ್ಟ್ರ, ಗೋವಾ ಸಿಎಂಗಳ ಜೊತೆ ಮಾತುಕತೆಗೆ ಮುಂದಾಗಿದ್ದ ರಾಜ್ಯ ಬಿಜೆಪಿ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.
ಬೆಂಗಳೂರು (ಸೆ.19): ಮಹಾದಾಯಿ ವಿವಾದ ಬಗೆಹರಿಸಲು ಮಹಾರಾಷ್ಟ್ರ, ಗೋವಾ ಸಿಎಂಗಳ ಜೊತೆ ಮಾತುಕತೆಗೆ ಮುಂದಾಗಿದ್ದ ರಾಜ್ಯ ಬಿಜೆಪಿ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಭಿನ್ನಾಭಿಪ್ರಾಯ ತಲೆದೋರಿದ್ದು ಬಿಜೆಪಿ ವಿರುದ್ಧ ಮಹಾರಾಷ್ಟ್ರ ಕಾಂಗ್ರೆಸ್ ಘಟಕ ಹೋರಾಟಕ್ಕೆ ಅಣಿಯಾಗಿದೆ.
ಬಿಜೆಪಿ ರಾಜ್ಯದ ಹಿತಾಸಕ್ತಿ ವಿರುದ್ಧ ಇದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಜನಾಂದೋಲನಕ್ಕೆ ತಯಾರಿ ನಡೆಸಿದೆ. ಕಾಂಗ್ರೆಸ್ ತಂತ್ರದ ಬಗ್ಗೆ ಮಹಾರಾಷ್ಟ್ರ ಬಿಜೆಪಿ ನಾಯಕರು ರಾಜ್ಯ ಬಿಜೆಪಿ ನಾಯಕರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸೆಪ್ಟೆಂಬರ್ 2ನೇ ವಾರ ಮುಗಿದರೂ ಮಹಾದಾಯಿ ವಿಚಾರವಾಗಿ ಬಿಜೆಪಿ ಮಾತುಕತೆಗೆ ಮುಂದಾಗಿಲ್ಲ. ಸೆಪ್ಟೆಂಬರ್ ಮೊದಲ ವಾರದೊಳಗೆ ಮಾತುಕತೆಗೆ ಬಿಜೆಪಿ ನಿಯೋಗ ತೆರಳ ಬೇಕಿತ್ತು. ಆದರೆ ಕಾಂಗ್ರೆಸ್ ನಡೆಯಿಂದ ಏನೂ ಮಾಡಲಾಗದೆ ಸದ್ಯ ತಟಸ್ಥ ಸ್ಥಿತಿಯಲ್ಲಿ ಇರಲು ಬಿಜೆಪಿ ನಿರ್ಧಾರಿಸಿದೆ.
ಮಹಾದಾಯಿ ಸಮಸ್ಯೆ ಬಗೆಹರಿಸಿ ಚುನಾವಣೆಗೆ ಬಳಸಿಕೊಳ್ಳಲು ರಾಜ್ಯ ಬಿಜೆಪಿ ಅಣಿಯಾಗಿತ್ತು. ಮಹಾರಾಷ್ಟ್ರ ಮತ್ತು ಗೋವಾ ಸಿಎಂಗಳ ಜೊತೆ ಮಾತುಕತೆಗೆ ಮುಂದಾಗಿತ್ತು. ಹೀಗಾಗಿ ಸೆಪ್ಟೆಂಬರ್ ಎರಡನೇ ವಾರದೊಳಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮಾತುಕತೆಗೆ ತೆರಳಬೇಕಿತ್ತು. ಈಗ ಸಮಸ್ಯೆ ಬಗೆಹರಿಸಲು ಹೋದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ಪಕ್ಷಕ್ಕೆ ಪೆಟ್ಟು ಬೀಳಲಿದೆ. ಮಹಾದಾಯಿ ವಿಚಾರ ಸಮಸ್ಯೆ ಬಗೆಹರಿಸದೆ ಹೋದರೆ ಕರ್ನಾಟಕದಲ್ಲಿ ಬಿಜೆಪಿಗೆ ಹೊಡೆತ ಬೀಳಲಿದೆ.
