Asianet Suvarna News Asianet Suvarna News

ಎಟಿಎಂ ಹಲ್ಲೆ ಕೃತ್ಯದ ಬೀಭತ್ಸ ಬಿಚ್ಚಿಟ್ಟ ಮಧುಕರರೆಡ್ಡಿ

ಆರೋಪಿ ಮಧುಕರರೆಡ್ಡಿ ಕೋರ್ಟಿಗೆ ಹಾಜರ್‌ | ಹಲ್ಲೆ ನಡೆದ ಎಟಿಎಂ ಕೇಂದ್ರ, ಕಬ್ಬನ್‌ಪಾರ್ಕ್ನಲ್ಲಿ ಮಹಜರ್‌

madhukar reddy speaks about his attack on jyoti uday

ಬೆಂಗಳೂರು(ಮಾ. 08): ಎಟಿಎಂ ಕೇಂದ್ರದಲ್ಲಿ ಬ್ಯಾಂಕ್‌ ಉದ್ಯೋಗಿ ಜ್ಯೋತಿ ಉದಯ್‌ ಮೇಲೆ ಭೀಕರ ಹಲ್ಲೆ ನಡೆಸಿ ರಾಷ್ಟ್ರ ಮಟ್ಟದಲ್ಲಿ ಆತಂಕ ಸೃಷ್ಟಿಸಿದ್ದ ಮಧುಕರರೆಡ್ಡಿ, ಮೂರು ವರ್ಷಗಳ ಬಳಿಕ ಮಂಗಳವಾರ ಅದೇ ಎಟಿಎಂ ಘಟಕಕ್ಕೆ ಬಂದು ತನ್ನ ಬೀಭತ್ಸ ಕೃತ್ಯದ ಬಗ್ಗೆ ಪೊಲೀಸರಿಗೆ ವಿವರಣೆ ನೀಡಿದ್ದಾನೆ.

ನ್ಯಾಯಾಲಯದ ಅನುಮತಿ ಮೇರೆಗೆ ವಶಕ್ಕೆ ಪಡೆದ ಪೊಲೀಸರು, ಘಟನಾ ಸ್ಥಳದ ಮಹಜರ್‌ಗೆ ಎಲ್‌ಐಸಿ ಕಟ್ಟಡದಲ್ಲಿರುವ ಎಟಿಎಂ ಕೇಂದ್ರಕ್ಕೆ ಸಂಜೆ ಆರೋಪಿ ಕರೆ ತಂದಿದ್ದಾರೆ. ಆ ವೇಳೆ ತಾನು 2013ರ ನವೆಂಬರ್‌ 19 ರಂದು ಮುಂಜಾನೆ ಎಟಿಎಂ ಕೇಂದ್ರದಲ್ಲಿ ಹಣ ಪಡೆಯಲು ಬಂದ ಜ್ಯೋತಿ ಉದಯ್‌ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾನೆ. ಅಲ್ಲದೆ ಈ ಹಲ್ಲೆಗೂ ಮುನ್ನ ಕಬ್ಬನ್‌ ಪಾರ್ಕ್ನಲ್ಲಿ ಎರಡು ದಿನಗಳು ತಾನು ಉಳಿದು ಕೊಂಡಿದ್ದ ಸ್ಥಳವನ್ನು ಅವನು ಪೊಲೀಸರಿಗೆ ತೋರಿಸಿದ್ದಾನೆ ಎಂದು ತಿಳಿದು ಬಂದಿದೆ. 

ತನಿಖೆಗೆ ಆರೋಪಿ ಪೂರಕವಾಗಿ ಸ್ಪಂದಿಸುತ್ತಿದ್ದು, ಘಟನಾ ಸ್ಥಳಕ್ಕೆ ಆತನನ್ನು ಕರೆದೊಯ್ದು ಒಂದು ಹಂತದ ಮಹಜರ್‌ ಪ್ರಕ್ರಿಯೆ ಮುಗಿದಿದೆ. ಉಪ ವಿಭಾಗಾಧಿಕಾರಿ ಸಮ್ಮುಖದಲ್ಲಿ ಹಲ್ಲೆಗೊಳಗಾಗಿದ್ದ ಜ್ಯೋತಿ ಉದಯ್‌ ಅವರನ್ನು ಕರೆಸಿ ಆರೋಪಿಯಿಂದ ಮತ್ತೆ ಮಹಜರ್‌ ನಡೆಯಲಿದೆ ಎಂದು ಅಧಿಕಾರಿಗಳು ‘ಕನ್ನಡಪ್ರಭ'ಕ್ಕೆ ಹೇಳಿದ್ದಾರೆ.

ಎಂಟು ದಿನ ವಶ: ಮಧುಕರ ರೆಡ್ಡಿಯನ್ನು ಎಂಟು ದಿನಗಳು ಪೊಲೀಸರ ವಶಕ್ಕೆ ನೀಡಿ ನಗರದ 6ನೇ ಎಸಿಎಂಎಂ ನ್ಯಾಯಾಲಯಕ್ಕೆ ಮಂಗಳವಾರ ಆದೇಶಿಸಿತು. ಆಂಧ್ರ ಪೊಲೀಸರ ವಶದಲ್ಲಿದ್ದ ಆರೋಪಿಯನ್ನು ಸೋಮವಾರ ರಾತ್ರಿ ನಗರಕ್ಕೆ ಕರೆ ತಂದಿದ್ದ ಎಸ್‌.ಜೆ. ಪಾರ್ಕ್ ಠಾಣೆ ಪೊಲೀಸರು, ಬೆಳಗ್ಗೆ ನ್ಯಾಯಾಲಯಕ್ಕೆ ಆತನನ್ನು ಹಾಜರುಪಡಿಸಿದರು. ಈ ವೇಳೆ ಎಟಿಎಂ ಕೇಂದ್ರದ ಮಹಿಳೆ ಮೇಲಿನ ಹಲ್ಲೆ ಪ್ರಕರಣದ ತನಿಖೆ ಸಲುವಾಗಿ ಆರೋಪಿಯನ್ನು ವಶಕ್ಕೆ ನೀಡುವಂತೆ ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಧೀಶ ರಾಘವೇಂದ್ರ ಅವರು, ಆರೋಪಿಗೆ ಮಾ.13 ವರೆಗೆ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದರು. ರೆಡ್ಡಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದರು. ಬಳಿಕ ವಿಲ್ಸನ್‌ ಗಾರ್ಡನ್‌ ಠಾಣೆಯಲ್ಲಿ ಕೆಲ ಹೊತ್ತು ವಿಚಾರಣೆ ನಡೆಸಿದ ಪೊಲೀಸರು, ಆನಂತರ ಬಿಗಿ ಭದ್ರತೆಯಲ್ಲಿ ನ್ಯಾಯಾಲಯಕ್ಕೆ ಕರೆತಂದಿದ್ದರು. 

ನಾನೇ ವಕಾಲತ್ತು ವಹಿಸುವೆ: ರೆಡ್ಡಿ
ಹಲ್ಲೆ ಪ್ರಕರಣದಲ್ಲಿ ತನ್ನ ಪರವಾಗಿ ವಕೀಲರ ನೇಮಕಕ್ಕೆ ವಿರೋಧಿಸಿರುವ ರೆಡ್ಡಿ, ನ್ಯಾಯಾಲಯದಲ್ಲಿ ಸ್ವಯಂ ವಾದ ಮಂಡಿಸುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಜೈಲಿನಲ್ಲಿ ಆತನಿಗೆ ಸಹ ಕೈದಿಗಳಿಂದ ಕಾನೂನಿನ ಪಾಠವಾಗಿದೆ. ಹೀಗಾಗಿಯೇ ಯಾವ್ಯಾವ ಸೆಕ್ಷನ್‌ಗಳಡಿ ಪ್ರಕರಣ ದಾಖಲಾದರೆ ಶಿಕ್ಷೆ ಪ್ರಮಾಣ ಹಾಗೂ ಕಾನೂನು ಪ್ರಕ್ರಿಯೆ ಹೇಗಿರುತ್ತದೆ ಎಂಬುದನ್ನು ಪರಿಣಿತ ವಕೀಲನಂತೆ ಮಾತನಾಡುತ್ತಾನೆ. ವಿಚಾರಣೆ ಸಂದರ್ಭದಲ್ಲಿ ಅವನ ಮಾತಿನ ವೈಖರಿ ಅಚ್ಚರಿ ಮೂಡಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಣಕ್ಕಾಗಿ ಹಲ್ಲೆ ನಡೆಸಿದ್ದೆ:
ತಾನು ಹಣಕ್ಕಾಗಿ ಹಲ್ಲೆ ನಡೆಸಿದ್ದಾಗಿ ಬೆಂಗಳೂರು ಪೊಲೀಸರಲ್ಲಿ ಮಧುಕರ ರೆಡ್ಡಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಗಿ ತಿಳಿದು ಬಂದಿದೆ. ಕದಿರಿಯಲ್ಲಿ ವೃದ್ಧೆ ಕೊಲೆ ಮಾಡಿದ ನಂತರ ತಲೆಮರೆಸಿಕೊಂಡು ಬೆಂಗಳೂರಿಗೆ ಬಂದಿದ್ದೆ. ಎರಡು ದಿನ ಹೊಟ್ಟೆಗೆ ಅನ್ನವಿಲ್ಲದೆ ನಾನು ಕಂಗಾಲಾದೆ. ಕಬ್ಬನ್‌ಪಾರ್ಕ್ನಲ್ಲೇ ಉಳಿದುಕೊಂಡಿದ್ದ ನಾನು, ಆ ದಿನ ರಾತ್ರಿ ಸುಲಿಗೆಗೆ ಯತ್ನಿಸಿ ವಿಫಲನಾದೆ. ಅಲ್ಲದೆ ಕದ್ರಿಯಲ್ಲಿ ವೃದ್ಧೆ ಕೊಲೆ ಬಳಿಕ ತೆಗೆದುಕೊಂಡು ದೋಚಿದ್ದ ಆಕೆಯ ಎಟಿಎಂ ಕಾರ್ಡ್‌ ಬಳಸಿ ಎಲ್‌ಐಸಿ ಕಟ್ಟಡದ ಕಾರ್ಪೋರೇಷನ್‌ ಬ್ಯಾಂಕ್‌ ಎಟಿಎಂ ಘಟಕದಲ್ಲಿ ಹಣ ಪಡೆಯಲು ಯತ್ನಿಸಿದೆ. ಆದರೆ ಹಣ ಬರಲಿಲ್ಲ. ಕೊನೆಗೆ ಇಡೀ ರಾತ್ರಿ ಅದೇ ಎಟಿಎಂ ಕೇಂದ್ರ ಬಳಿ ಹಣ ದೋಚಲು ಹೊಂಚು ಹಾಕಿದ್ದೆ. ಬೆಳಗ್ಗೆ ಹಣ ಪಡೆಯಲು ಬಂದ ಜ್ಯೋತಿ ಉದಯ್‌ ಅವರಲ್ಲಿ ಹಣ ನೀಡುವಂತೆ ಆಗ್ರಹಿಸಿದೆ. ಆದರೆ, ಅವರು ಕಿರುಚಿಕೊಳ್ಳಲು ಮುಂದಾದಾಗ ಹೊರಗಿನವರು ಬರಬಹುದು ಎಂಬ ಭಯದಿಂದ ಅವರ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿ ಹೇಳಿಕೆ ನೀಡಿರುವುದಾಗಿ ಮೂಲಗಳು ಮಾಹಿತಿ ನೀಡಿವೆ.

ಕನ್ನಡಪ್ರಭ ವಾರ್ತೆ
epaper.kannadaprabha.in

Latest Videos
Follow Us:
Download App:
  • android
  • ios