ಹೈದರಾಬಾದ್(ಸೆ. 17): ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣ ಸದ್ದು ಮರೆಯಾಗುವ ಮುನ್ನವೇ ಅದೇ ಹೈದರಾಬಾದ್ ಯೂನಿವರ್ಸಿಟಿಯಲ್ಲಿ ಮತ್ತೊಂದು ಆತ್ಮಹತ್ಯೆ ಪ್ರಕರಣ ಶನಿವಾರ ಘಟಿಸಿದೆ. 20 ವರ್ಷದ ಎಂಎ ವಿದ್ಯಾರ್ಥಿ ನೆಲ್ಲಿ ಪ್ರವೀಣ್ ಕುಮಾರ್ ತನ್ನ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ಯತ್ನಿಸಲಾಯಿತಾದರೂ ಬದುಕುಳಿಯಲಿಲ್ಲ.

Add Asianetnews Kannada as a Preferred SourcegooglePreferred

ಪ್ರವೀಣ್ ಆತ್ಮಹತ್ಯೆಗೆ ಏನು ಕಾರಣವೆಂಬುದು ಖಚಿತವಾಗಿ ತಿಳಿದಿಲ್ಲ. ಅವರು ಯಾವುದೇ ಪತ್ರ ಬರೆದಿಟ್ಟಿಲ್ಲವೆನ್ನಲಾಗಿದೆ. ಪ್ರವೀಣ್'ಗೆ ಸೇರಿದ್ದೆನ್ನಲಾದ ದಿನಚರಿ ಪುಸ್ತಕವೊಂದು ಪೊಲೀಸರ ಕೈಗೆ ಸಿಕ್ಕಿದ್ದು, ಅದರಲ್ಲಿ ಆತ ಮಾನಸಿಕ ಖಿನ್ನತೆಗೊಳಗಾಗಿರುವ ಅಂಶ ವೇದ್ಯವಾಗುತ್ತಿದೆಯಂತೆ.

ಫೈನ್ ಆರ್ಟ್ಸ್'ನಲ್ಲಿ ಮೊದಲ ವರ್ಷದ ಸ್ನಾತಕೋತ್ತರ ಪದವಿ ಶಿಕ್ಷಣಕ್ಕಾಗಿ ಪ್ರವೀಣ್ ಈ ಯೂನಿವರ್ಸಿಟಿಗೆ ಕೆಲ ತಿಂಗಳ ಹಿಂದಷ್ಟೇ ಸೇರಿಕೊಂಡಿದ್ದರು. ಮೆಹಬೂಬ್'ನಗರ್ ಜಿಲ್ಲೆಯ ಶಾದ್'ನಗರ್'ನವರಾದ ನೆಲ್ಲಿ ಪ್ರವೀಣ್ ಕುಮಾರ್ ಅವರು ಕುರುಬ ಸಮುದಾಯದ ಕುಟುಂಬದಿಂದ ಬಂದವರು. ತನ್ನ ಶೈಕ್ಷಣಿಕ ಹಿನ್ನೆಲೆ ಬಗ್ಗೆ ಅವರಿಗೆ ಕೀಳರಿಮೆ ಇತ್ತೆನ್ನಲಾಗಿದೆ. ಇದೇ ಅವರ ಆತ್ಮಹತ್ಯೆಗೆ ಕಾರಣವಿದ್ದಿರಬಹುದೆಂದು ಸದ್ಯಕ್ಕೆ ಶಂಕಿಸಲಾಗಿದೆ. ಆದರೆ, ಪ್ರವೀಣ್ ಅವರ ಸೋದರ ನವೀನ್ ಹೇಳುವ ಪ್ರಕಾರ, ಆತ ಆತ್ಮಹತ್ಯೆ ಮಾಡಿಕೊಳ್ಳುವಂಥ ದುರ್ಬಲ ಮನಸ್ಸಿನವನಲ್ಲ. ಎರಡು ದಿನಗಳ ಹಿಂದಷ್ಟೇ ತಮ್ಮೊಂದಿಗೆ ಫೋನ್'ನಲ್ಲಿ ಚೆನ್ನಾಗಿ ಮಾತನಾಡಿದ್ದರೆಂದು ಸಹೋದರನು ಹೇಳಿದ್ದಾನೆ. ಇದೇ ವೇಳೆ, ರೋಹಿತ್ ವೇಮುಲಾರಂತೆ ಪ್ರವೀಣ್ ಯಾವುದಾದರೂ ಸಂಘಟನೆಗೆ ಸೇರಿದವರಾ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.