ಹಿಂದು ಮೇಳಕ್ಕೆ ಮಕ್ಕಳ ಕರೆದೊಯ್ಯಿರಿ ಎಂಬ ರಾಜಸ್ಥಾನ ಸರ್ಕಾರದ ಸುತ್ತೋಲೆ ವಿವಾದ
ಜೈಪುರ: ಈಗಾಗಲೇ ‘ಪದ್ಮಾವತಿ’ ಸಿನಿಮಾ ವಿವಾದದಲ್ಲಿ ಮುಳುಗಿರುವ ರಾಜಸ್ಥಾನ ಸರ್ಕಾರ, ‘ಜೈಪುರದಲ್ಲಿ ಹಿಂದು ಸಂಘಟನೆಯೊಂದು ಹಮ್ಮಿಕೊಂಡಿರುವ ಹಿಂದು ಆಧ್ಯಾತ್ಮಿಕ ಮೇಳಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ’ ಎಂದು ಸರ್ಕಾರಿ ಶಾಲೆಗಳಿಗೆ ಸೂಚಿಸಿ ವಿವಾದಕ್ಕೀಡಾಗಿದೆ.
ಈ ಮೇಳದಲ್ಲಿ ಹಿಂದು ಧರ್ಮದ ಬಗ್ಗೆ ಅರಿವು ಮೂಡಿಸುವ ಹಾಗೂ ಇಸ್ಲಾಂ/ಕ್ರೈಸ್ತ ಧರ್ಮದ ವಿರುದ್ಧ ದ್ವೇಷ ಕಾರುವಂಥ ಕೆಲವು ಸಂಗತಿಗಳನ್ನು ಹೇಳಿಕೊಡಲಾಗುತ್ತದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ನ.16ರಿಂದ ಆರಂಭವಾಗಿರುವ ಈ ಮೇಳಕ್ಕೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಎಂಬ ಸರ್ಕಾರದ ನಿರ್ದೇಶನ ಸಮಂಜಸವೇ ಎಂಬ ಪ್ರಶ್ನೆ ಎದುರಾಗಿದೆ.
ಮೇಳದಲ್ಲಿ ಬಜರಂಗದಳದ ಮಳಿಗೆ ಇದ್ದು, ಅದರಲ್ಲಿ ‘ಲವ್ ಜಿಹಾದ್ ಮಾಡುತ್ತಿರುವುದು ಮುಸ್ಲಿಮರು. ಹಿಂದು ಯುವತಿಯರನ್ನು ಮುಸ್ಲಿಂ ಯುವಕರು ತಮ್ಮ ಜಾಲದಲ್ಲಿ ಬೀಳಿಸಿಕೊಳ್ಳುತ್ತಾರೆ..ಹುಷಾರಾಗಿರಿ’ ಎಂಬ ಕರಪತ್ರಗಳನ್ನು ಹಂಚಲಾಗುತ್ತಿದೆ.
ಜತೆಗೆ ಕ್ರೈಸ್ತ ಧರ್ಮದವರು ನಡೆಸುತ್ತಿದ್ದಾರೆ ಎನ್ನಲಾದ ಮತಾಂತರದ ವಿರುದ್ಧ ಹಾಗೂ ಮಾಂಸಾಹಾರದ ವಿರುದ್ಧವೂ ಬರಹಗಳಿವೆ. ಆದರೆ, ‘ಮೇಳಕ್ಕೆ ವಿದ್ಯಾರ್ಥಿ ಗಳನ್ನು ಕರೆದುಕೊಂಡು ಹೋಗುವುದು ಕಡ್ಡಾಯವಲ್ಲ. ಐಚ್ಛಿಕ. ಮೇಳದಲ್ಲಿ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆಯಷ್ಟೇ’ ಎಂದು ರಾಜಸ್ಥಾನದ ಶಿಕ್ಷಣ ಸಚಿವರು ಹಾರಿಕೆ ಉತ್ತರ ನೀಡಿದ್ದಾರೆ.
