ವಯನಾಡು[ಏ.28]: ಪ್ರೇಮಿಗಳು ಅಥವಾ ಭಗ್ನಪ್ರೇಮಿಗಳು ವಿಷ ಸೇವಿಸಿ, ನೇಣುಹಾಕಿಕೊಂಡು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದನ್ನು ನೋಡಿದ್ದೇವೆ. ಆದರೆ ಕೇರಳದ ವ್ಯಕ್ತಿಯೊಬ್ಬ ತಾನು ಹೊಂದಿದ್ದ ಅಕ್ರಮ ಸಂಬಂಧಕ್ಕೆ ಆಕ್ಷೇಪ ವ್ಯಕ್ತವಾದುದರಿಂದ ಬೇಸತ್ತು, ಮೈಗೆ ಬಾಂಬ್‌ ಕಟ್ಟಿಕೊಂಡು ಅದನ್ನು ಸ್ಫೋಟಿಸಿಕೊಳ್ಳುವ ಮೂಲಕ ಸಾವನ್ನಪ್ಪಿದ್ದಾನೆ. ಆದರೆ ಇಂಥ ಕೃತ್ಯದ ವೇಳೆ ತನ್ನ ಪ್ರೇಯಸಿಯನ್ನೂ ಆತ ಗಟ್ಟಿಯಾಗಿ ಹಿಡಿದಿಟ್ಟುಕೊಂಡಿದ್ದ ಕಾರಣ ಆಕೆ ಕೂಡಾ ಸಾವನ್ನಪ್ಪಿದ್ದಾಳೆ. ಸ್ಫೋಟದ ತೀವ್ರತೆಗೆ ಇಬ್ಬರ ದೇಹಗಳೂ ಛಿದ್ರಛಿದ್ರವಾಗಿವೆ.

ಪ್ರಕರಣ ಹಿನ್ನೆಲೆ: ವಯನಾಡು ಜಿಲ್ಲೆಯ ಸುಲ್ತಾನ್‌ ಬಥೇರಿಯ ಬೆನ್ನಿ (45) ಎಂಬ ವಿವಾಹಿತನಿಗೆ, ಸಮೀಪದ ನೈಕ್ಕಟ್ಟಿಯ ಅಮ್ಲಾ ಎಂಬ ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧವಿತ್ತು. ಈ ಬಗ್ಗೆ ಎರಡೂ ಕುಟುಂಬಗಳ ಸದಸ್ಯರು ಹಲವು ಬಾರಿ ಎಚ್ಚರಿಕೆ ನೀಡಿದ ಹೊರತಾಗಿಯೂ ಇಬ್ಬರು ತಮ್ಮ ಚಟುವಟಿಕೆ ಮುಂದುವರೆಸಿದ್ದರು.

ಈ ನಡುವೆ ಶುಕ್ರವಾರ ತನ್ನ ಮೈಗೆ ಜಿಲೆಟಿನ್‌ ಕಡ್ಡಿಗಳನ್ನು ಕಟ್ಟಿಕೊಂಡು ಬಂದಿದ್ದ ಬೆನ್ನಿ, ಅಮ್ಲಾಳನ್ನು ಗಟ್ಟಿಯಾಗಿ ಹಿಡಿದುಕೊಂಡು ಬಳಿಕ ಜಿಲೆಟಿನ್‌ ಕಡ್ಡಿಗೆ ಬೆಂಕಿ ಹಚ್ಚಿಕೊಂಡು ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಇಬ್ಬರ ದೇಹಗಳೂ ಛಿದ್ರವಾಗಿವೆ.