ಸುಸ್ತಿದಾರರಾಗಿರುವುದರಿಂದ 10 ಸಾವಿರ ಕೋಟಿ ಆಸ್ತಿ ಬಳಕೆಗೆ ಲಂಡನ್ ಕೋರ್ಟ್ ನಿರ್ಬಂಧ ಕೋಟಿ ಕೋಟಿ ಖರ್ಚು ಮಾಡುತ್ತಿದ್ದ ಮದ್ಯದ ದೊರೆಗೆ ಕೋರ್ಟ್‌ನಿಂದ ಮಿತಿ ಹೇರಿಕೆ, 18 ಲಕ್ಷಕ್ಕೆ ಹೆಚ್ಚಿಸಲು ಮನವಿ
ಲಂಡನ್: ಭಾರತೀಯ ಬ್ಯಾಂಕುಗಳಿಗೆ 9 ಸಾವಿರ ಕೋಟಿ ರು. ಸಾಲ ಮರುಪಾವತಿಸಲು ಆಗದೇ ಲಂಡನ್ಗೆ ಪರಾರಿಯಾಗಿರುವ ‘ಮದ್ಯದ ದೊರೆ ವಿಜಯ್ ಮಲ್ಯಗೆ ಈಗ ಹೊಸದೊಂದು ಸಂಕಷ್ಟ ಎದುರಾಗಿದೆ. ಭಾರತಕ್ಕೆ ಗಡೀಪಾರಾಗುವುದನ್ನು ತಪ್ಪಿಸಿಕೊಳ್ಳಲು ಮಲ್ಯ ಅವರು ಕಾನೂನು ಹೋರಾಟ ನಡೆಸುತ್ತಿರುವಾಗಲೇ, ಅವರಿಗೆ ಸೇರಿದ ಸುಮಾರು 10 ಸಾವಿರ ಕೋಟಿ ರು. ಆಸ್ತಿ ಯನ್ನು ಉಪಭೋಗಿಸದಂತೆ ನಿರ್ಬಂಧ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಹೀಗಾಗಿ ಆ ಆದೇಶ ರದ್ದಾಗುವಂತೆ ನೋಡಿಕೊಳ್ಳಲು ಮಲ್ಯಗೆ ಸೇರಿದ ಮತ್ತೊಂದು ಕಾನೂನು ತಂಡ ಹೆಣಗಾಡುತ್ತಿದೆ.
ಈ ಮಧ್ಯೆ, ಆಸ್ತಿ ಜಪ್ತಿ ಆದೇಶ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಮಲ್ಯ ಅವರು ವಾರಕ್ಕೆ 4.5 ಲಕ್ಷ ರುಪಾಯಿಯೊಳಗೆ ಜೀವನ ನಡೆಸಬೇಕಾಗಿದೆ. ಇದನ್ನು 18 ಲಕ್ಷ ರು.ಗೆ ಏರಿಸಬೇಕು ಎಂಬ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ಮುಂದಕ್ಕೆ ಹೋಗಿದೆ. ಐಷಾರಾಮಿ ಜೀವನ ನಡೆಸುವ ಮಲ್ಯಗೆ ಇದು ಸಾಕಾಗುತ್ತೋ ಇಲ್ಲವೋ ಎಂಬುದು ಸದ್ಯದ ಪ್ರಶ್ನೆ.
ಬ್ರಿಟನ್ನಲ್ಲಿ ಮಲ್ಯ ಹೊಂದಿರುವ ಆಸ್ತಿಯ ಉಪಭೋಗದ ಮೇಲೆ ನಿರ್ಬಂಧ ಹೇರಬೇಕು ಎಂದು ಜನವರಿಯಲ್ಲಿ ಭಾರತೀಯ ನ್ಯಾಯಾಲಯವೊಂದು ಆದೇಶ ಮಾಡಿತ್ತು. ಮಲ್ಯ ಗಡೀಪಾರು ಪ್ರಕರಣದ ವಿಚಾರಣೆ ಆರಂಭವಾಗುವ ಒಂದು ದಿನ ಮುನ್ನ ಅಂದರೆ, ಡಿ.3ರಂದು ಭಾರತೀಯ ಕೋರ್ಟ್ ಆದೇಶಕ್ಕೆ ಮನ್ನಣೆ ನೀಡಿ ಬ್ರಿಟನ್ ನ್ಯಾಯಾಲಯ ಮಲ್ಯ ಆಸ್ತಿಯ ಬಳಕೆಗೆ ನಿರ್ಬಂಧಿಸಿದೆ.
ಬ್ಯಾಂಕುಗಳ ಪ್ರಕಾರ, ಮಲ್ಯ ಅವರು ಸದ್ಯ ಇಂಗ್ಲೆಂಡ್ನ ಹರ್ಟ್ಫೋರ್ಡ್ಶೈರ್ನಲ್ಲಿ ವಾಸ ಮಾಡುತ್ತಿದ್ದಾರೆ. ಆ ಬಂಗಲೆಯ ಮೌಲ್ಯ 100 ಕೋಟಿ . ಲೇಡಿವಾಕ್ ಎಂಬ ಕಂಪನಿ 2015ರಲ್ಲಿ ಅದನ್ನು ಖರಿದಿಸಿದೆಯಾದರೂ ಆ ಕಂಪನಿಯ ಹಿಂದೆ ಮಲ್ಯ ಇದ್ದಾರೆ. ಇದರ ಜತೆಗೆ ಬಂಗಲೆ ಪಕ್ಕದಲ್ಲೇ 13 ಕೋಟಿ ರು. ಮೌಲ್ಯದ ಲಾಡ್ಜ್ ಇದೆ. ಮಲ್ಯ ಜತೆ ನಂಟು ಹೊಂದಿರುವ ಕಂಪನಿಯೊಂದು 2005ರಲ್ಲಿ ಕೇಂದ್ರ ಲಂಡನ್ನಲ್ಲಿ 47.5 ಕೋಟಿ ರು. ಮೌಲ್ಯದ ಆಸ್ತಿಯೊಂದನ್ನು ಖರೀದಿ ಮಾಡಿದೆ ಎಂದು ಹೇಳಲಾಗಿದೆ. ಮಲ್ಯ ಅವರು ಇಲ್ಲಿ ಹೆಸರಾಂತ ಫಾರ್ಮುಲಾ-1 ಕಾರು ಚಾಲಕ ಲೂಯಿಸ್ ಹ್ಯಾಮಿಲ್ಟನ್ ಅವರ ತಂದೆಯ ತಂದೆಯ ಒಡೆತನದಲ್ಲಿದ್ದ ಬಂಗಲೆಯನ್ನು ಖರೀದಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ಅಲ್ಲದೆ, ತಮ್ಮ ಅಕ್ಕಪಕ್ಕದವರು ಹಾಗೂ ತಾವು ಹೋಗುವ ಹೋಟೆಲ್ನ ಸಿಬ್ಬಂದಿಗೆ ಮನೆಯಲ್ಲೇ ದೊಡ್ಡ ಪ್ರಮಾಣದ ದೀಪಾವಳಿ ಪಾರ್ಟಿ ಕೊಟ್ಟಿದ್ದರು ಹಾಗೂ ವಿದೇಶಿ ಕಾರುಗಳಲ್ಲಿ ಸುತ್ತಾಡುತ್ತ ಐಷಾರಾಮಿ ಜೀವನ ನಡೆಸುತ್ತಿದ್ದಾರೆ ಎಂದು ಇತ್ತೀಚೆಗೆ ಗೊತ್ತಾಗಿತ್ತು.
