ಮಂಡ್ಯ: ಜೆಡಿಎಸ್‌ನ ಭದ್ರಕೋಟೆಯಾಗಿರುವ ಮಂಡ್ಯ ಜಿಲ್ಲೆಯಿಂದ ಭವಿಷ್ಯದಲ್ಲಿ ದೇವೇಗೌಡರ ಕುಟುಂಬದವರು ಲೋಕಸಭೆ ಅಥವಾ ವಿಧಾನಸಭೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಊಹಾಪೋಹಗಳು ಹರಿದಾಡುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರು ಪದೇ ಪದೇ ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.

ಮಂಗಳವಾರ ಮಂಡ್ಯ ಜಿಲ್ಲೆ ತೊಪ್ಪನಹಳ್ಳಿ ಗ್ರಾಮಕ್ಕೆ ಕುಮಾರಸ್ವಾಮಿ ಅವರ ಜತೆ ಭೇಟಿ ನೀಡಿದ ನಿಖಿಲ್‌ ಅವರು, ಹತ್ಯೆಗೀಡಾದ ಜೆಡಿಎಸ್‌ ಮುಖಂಡ ಪ್ರಕಾಶ್‌ ಪ್ರಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಈ ವೇಳೆ ಮೃತನ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಸಿನಿಮಾದಲ್ಲಿ ಬ್ಯುಸಿಯಾಗಿರುವ ನಿಖಿಲ್‌ ಕುಮಾರಸ್ವಾಮಿ ಈ ರೀತಿ ಮಂಡ್ಯಕ್ಕೆ ದಿಢೀರ್‌ ಆಗಿ ಭೇಟಿ ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕನಕನಮರಡಿ ಬಸ್‌ ದುರಂತದ ವೇಳೆಯೂ ಜಿಲ್ಲೆಗೆ ಆಗಮಿಸಿ ಕುಟುಂಬ ವರ್ಗಕ್ಕೆ ಧೈರ್ಯ ತುಂಬಿದ್ದರು. ಅದಕ್ಕೂ ಮೊದಲು ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾಗ, ಮಂಡ್ಯ ನಗರದಲ್ಲಿ ಲಾರಿ ಹರಿದು ಕಾರ್ಯಕರ್ತನೊಬ್ಬ ಮೃತಪಟ್ಟಾಗ ಜಿಲ್ಲೆಗೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದರು. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು.