ರಾಯಚೂರು: ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ನಟಿ ಸುಮಲತಾ ಅಂಬರೀಶ್ ಸ್ಪರ್ಧಿಸಿದಲ್ಲಿ ಕೇವಲ ನಾನು ಮಾತ್ರವಲ್ಲ ಇಡೀ ಚಿತ್ರರಂಗ ಬೆಂಬಲಿಸುತ್ತದೆ ಎಂದು ನಟ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಟ ದೊಡ್ಡಣ್ಣ ತಿಳಿಸಿದರು. 

ಮಂತ್ರಾಲಯದ ರಾಯರ ಗುರು ವೈಭವೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಶ್ರೀಮಠಕ್ಕೆ ಭೇಟಿ ನೀಡಿದ್ದ ವೇಳೆ ರಾಕ್‌ಲೈನ್ ವೆಂಕಟೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ನಾನು ರಾಜಕೀಯಕ್ಕೆ ಬರುವುದಿಲ್ಲ. 

ಆದರೆ,  ಅಂಬರೀಷ್ ಕುಟುಂಬ ನಮಗೆ ಮುಖ್ಯ. ಆ ಕುಟುಂಬ ಎಲ್ಲಿರುವುದೋ ನಾನು ಅಲ್ಲೇ ಇರುತ್ತೇನೆ. ಸುಮಲತಾರಿಗೆ ನನ್ನ ಬೆಂಬಲ ಸದಾ ಇರಲಿದೆ ಎಂದರು. 

ಹಿರಿಯ ನಟ ದೊಡ್ಡಣ್ಣ ಮಾತನಾಡಿ, ಚಿತ್ರರಂಗದ ಮೇಲೆ ಅಂಬರೀಷ್ ಕುಟುಂಬದ ಋಣ ಸಾಕಷ್ಟಿದೆ. ಅದನ್ನು ತೀರಿಸಲಾದರೂ ನಾವೆಲ್ಲ ಸುಮಲತಾ ಅವರಿಗೆ ಬೆಂಬಲ ನೀಡುತ್ತೇವೆ. ಅವರ ಅನುಕೂಲಕ್ಕೆ ತಕ್ಕಂತೆ ನಾವು ಪ್ರಚಾರ ನಡೆಸುವುದಾಗಿ ಹೇಳಿದರು.