ನವದೆಹಲಿ (ಅ. 18):  5 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದೆ. ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ, ಮಿಜೋರಂ ಹಾಗೂ ತೆಲಂಗಾಣದಲ್ಲಿ ನವೆಂಬರ್‌ ಹಾಗೂ ಡಿಸೆಂಬರ್‌ ತಿಂಗಳಿನಲ್ಲಿ ರಾಜಕೀಯದ ಮಾರುಕಟ್ಟೆಬಾಂಬೆ ಸ್ಟಾಕ್‌ ಎಕ್ಸ್‌ಚೇಂಜ್‌ಗಿಂತ ತುರುಸಾಗಲಿದೆ.

ಈ ಅವಧಿಯಲ್ಲಿ ಅಕ್ರಮ ಬೆಟ್ಟಿಂಗ್‌ ಏಜೆನ್ಸಿಗಳ ಚಟುವಟಿಕೆ ತೀವ್ರಗೊಳ್ಳುತ್ತದೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ಸುತ್ತ ಬಹುತೇಕ ಲೆಕ್ಕಾಚಾರಗಳು ಗಿರಕಿ ಹೊಡೆಯುತ್ತಿರುತ್ತವೆ. ಬಿಜೆಪಿಯ ಬಹಳಷ್ಟುಹಾಲಿ ಶಾಸಕರಿಗೆ ಈ ಬಾರಿ ಟಿಕೆಟ್‌ ಸಿಕ್ಕೇ ಸಿಗುತ್ತದೆ ಎಂಬ ಖಾತ್ರಿ ಇಟ್ಟುಕೊಳ್ಳಬೇಡಿ ಎಂಬ ಸಂದೇಶ ರವಾನೆಯಾಗಿದೆ. ಅವರೆಲ್ಲ ಅಮಿತ್‌ ಶಾ ಹೇಳಿದ್ದನ್ನು ಕೇಳುತ್ತಾರೆ. ಏಕೆಂದರೆ ಒಂದಲ್ಲಾ ಒಂದು ದಿನ ಮೋದಿಯವರಿಗೆ ಅಮಿತ್‌ ಶಾ ಅವರೇ ಉತ್ತರಾಧಿಕಾರಿಯಾಗಿ, ಪ್ರಧಾನಿಯೂ ಆಗಬಹುದು ಎಂಬ ನಿರೀಕ್ಷೆ ಅವರಿಗಿದೆ. ಅದೃಶ್ಯ ಆಟಗಾರನಾಗಿ ಈಗಾಗಲೇ ಅಮಿತ್‌ ಶಾ ತಮ್ಮ ಛಾಪು ಮೂಡಿಸಿದ್ದಾರೆ.

ಹೇಗಿದೆ ಪಂಚರಾಜ್ಯ ಚುನಾವಣೆ ಕಣ?

ರಾಜಕೀಯ ದಾಳಗಳು ಉರುಳಿವೆ. ದೇಶದಲ್ಲಿ ಚುನಾವಣಾ ರಾಜಕೀಯದ ಟ್ರೆಂಡ್‌ ಅಥವಾ ಮೂಡ್‌ ಯಾವ ದಿಕ್ಕಿನಲ್ಲಿದೆ ಎಂಬುದನ್ನು ಈ ಪಂಚರಾಜ್ಯ ಚುನಾವಣೆಗಳು ಹೇಳುತ್ತವೆ. ಚುನಾವಣಾ ಸಮೀಕ್ಷೆಗಳನ್ನು ನಡೆಸುವವರು, ಪ್ಯಾನಲಿಸ್ಟ್‌ಗಳು, ಟೀವಿ ಆ್ಯಂಕರ್‌ಗಳು, ವಿಶ್ಲೇಷಕರು, ಅಂಕಣಕಾರರು ಹಾಗೂ ವಿಮರ್ಶಕರು ಢಾಳಾಗಿ ಊಹೆಗಳನ್ನು ಹರಿಬಿಡಲು ಆರಂಭಿಸಿದ್ದಾರೆ. ಕೆಲವರು ಭ್ರಮೆಗಳನ್ನೂ ಹರಡುತ್ತಿದ್ದಾರೆ.

ನಮ್ದಲ್ಲಾ ರಫೆಲ್, ಹೆಚ್‌ಎಎಲ್ ಕೈಬಿಟ್ಟ ಯುಪಿಎನೇ ಫೇಲ್: ನಿರ್ಮಲಾ ಸೀತಾರಾಮನ್!

 

ಟೀವಿ ಚಾನಲ್ಲುಗಳ ಟಿಆರ್‌ಪಿಗಳು ಆ್ಯಂಕರ್‌ಗಳ ಧ್ವನಿಯ ತೀವ್ರತೆಯೊಂದಿಗೆ ನೇರ ಸಂಬಂಧ ಹೊಂದಿದೆ. ಇಂತಹ ರಾಜಕೀಯ ಚರ್ಚೆಗಳನ್ನು ಆಸಕ್ತಿಯಿಂದ ನೋಡುವ ದೊಡ್ಡ ವರ್ಗವೇ ನಮ್ಮಲ್ಲಿದೆ. ಈ ಚರ್ಚೆಗಳಲ್ಲಿ ಈಗಾಗಲೇ ಮಹಾಗಠಬಂಧನ ಛಿದ್ರವಾಗಿದೆ. ಹಾಗಾಗಿ ಸರಳವಾದ ಲೆಕ್ಕಾಚಾರೆ ಏನೆಂದರೆ, ಪಂಚರಾಜ್ಯ ಚುನಾವಣೆಯಲ್ಲಿ ವಿಪಕ್ಷಗಳ ಮತ ಕನಿಷ್ಠ 3 ರಾಜಕೀಯ ಪಕ್ಷಗಳಲ್ಲಿ ಹಂಚಿಹೋಗುತ್ತದೆ. ಅದರ ಲಾಭ ಬಿಜೆಪಿಗಾಗುತ್ತದೆ. ಈ ಲಾಭವು ಬಹುಮತವೇ ಆಗಿರಬೇಕಿಲ್ಲ. ಸದ್ಯದ ಲೆಕ್ಕಾಚಾರದ ಪ್ರಕಾರ ಬಿಜೆಪಿ ಸುಮಾರು ಶೇ.40ರಷ್ಟುಮತ ಪಡೆಯಬಹುದು.

ಕಾಂಗ್ರೆಸ್‌ ಮೇಲೆ ನೇರ ವಾಗ್ದಾಳಿ ನಡೆಸುವ ಮೂಲಕ ಮಾಯಾವತಿ ಅವರು ವಿಪಕ್ಷಗಳ ಒಗ್ಗಟ್ಟನ್ನು ಪಂಕ್ಚರ್‌ ಮಾಡಿದ್ದಾರೆ. ಅವರು ಛತ್ತೀಸ್‌ಗಢದಲ್ಲಿ ಅಜಿತ್‌ ಜೋಗಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌ ಕೂಡ ಕಾಂಗ್ರೆಸ್‌ ಜೊತೆ ಮೈತ್ರಿ ಕಡಿದುಕೊಂಡಂತಿದೆ.

ಪಟೇಲರ ಏಕತಾ ಪ್ರತಿಮೆ ಏಕೆ ಜಗತ್ತಿನ ಅದ್ಭುತ?

 

ಎನ್‌ಸಿಪಿಯ ಶರದ್‌ ಪವಾರ್‌ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ತಮಗೇನೂ ನೆಲೆಯಿಲ್ಲದಿದ್ದರೂ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ. ಇನ್ನು ಎಲ್ಲಾ ಕಡೆ ಒಂದಷ್ಟು‘ಹಣಕ್ಕಾಗಿ ನಿಲ್ಲುವ’ ಹಾಗೂ ಡಮ್ಮಿಯಾಗಿ ಸ್ಪರ್ಧಿಸುವ ಸ್ಪರ್ಧಿಗಳಿರುತ್ತಾರೆ. ಒಟ್ಟಿನಲ್ಲಿ ವಿಪಕ್ಷಗಳಲ್ಲಿ ಯಾವುದೇ ಒಗ್ಗಟ್ಟಿಲ್ಲದೆ ಮುಂದಿನ ಎರಡು ತಿಂಗಳಲ್ಲಿ ಐದು ರಾಜ್ಯಗಳ ಚುನಾವಣೆ ನಡೆಯುತ್ತದೆ.

ಹಿಂದಿನ ಸಮೀಕ್ಷೆಗಳ ಹಣೆಬರಹ

ಈಗ ಲೋಕಸಭೆಗೆ ಬರೋಣ. ವಿಪಕ್ಷಗಳ ಒಗ್ಗಟ್ಟು ಛಿದ್ರವಾಗಿರುವುದರಿಂದ ಮತ್ತು ಬಿಜೆಪಿ ಶಿಸ್ತುಬದ್ಧ ಪಕ್ಷವಾಗಿ ಬಂಡೆಯಂತಿರುವುದರಿಂದ ಬಿಜೆಪಿಯೇ ಗೆಲ್ಲುತ್ತದೆ ಎಂಬ ಸಹಜವಾದ ವಾದವೊಂದು ಕೇಳಿಬರುತ್ತಿದೆ. ಆದರೂ ವಿಶ್ವಾಸಾರ್ಹ ಸಮೀಕ್ಷಾ ಸಂಸ್ಥೆಗಳಾದ ಸಿಎಸ್‌ಡಿಎಸ್‌ನಂತಹವರು ಬಿಜೆಪಿಗೆ ಅಷ್ಟೇನೂ ಸುಲಭವಿಲ್ಲವೆಂದೂ, ಕಾಂಗ್ರೆಸ್ಸಿಗೂ ಅವಕಾಶವಿದೆಯೆಂದೂ ಹೇಳುತ್ತಿವೆ.

ಈಗಿನ ಪಂಚರಾಜ್ಯ ಚುನಾವಣೆಯು 2019ರ ಚುನಾವಣೆಗೆ ತಾಲೀಮಿನಂತಿರುವುದರಿಂದ ಮತ್ತು ಇವು ಮೋದಿ ಅವರ ಭವಿಷ್ಯವನ್ನು ನಿರ್ಧರಿಸುವುದರಿಂದ ಹಿಂದಿನ ಚುನಾವಣೆಗಳ ಫಲಿತಾಂಶ ಮತ್ತು ಚುನಾವಣಾ ಪೂರ್ವ ಸಮೀಕ್ಷೆಗಳ ಹಣೆಬರಹವನ್ನೊಮ್ಮೆ ನಾವು ನೋಡಬೇಕು.

ಚುನಾವಣಾ ಸಮೀಕ್ಷೆಗಳು ತಮ್ಮ ವಿರುದ್ಧ ಬಂದಾಗಲೆಲ್ಲ ರಾಜಕೀಯ ಪಕ್ಷಗಳು ಈ ಸಮೀಕ್ಷೆಯೇ ಸರಿಯಿಲ್ಲವೆಂದೋ ಅಥವಾ ಹಣ ತೆಗೆದುಕೊಂಡು ಸಮೀಕ್ಷೆ ನಡೆಸಿದ್ದಾರೆಂದೋ ದೂಷಿಸುತ್ತವೆ. ಆದರೂ ಸಮೀಕ್ಷೆ ನಡೆಸುವ ಸಂಸ್ಥೆಗಳು ಅಣಬೆಗಳಂತೆ ಹುಟ್ಟಿಕೊಂಡಿವೆ. ರಾಜಕೀಯ ಪಕ್ಷಗಳು ಅಥವಾ ಸ್ಥಳೀಯ ಅಭ್ಯರ್ಥಿಗಳು ಕೂಡ ಅವುಗಳಿಂದ ಆಂತರಿಕ ಸಮೀಕ್ಷೆ ಮಾಡಿಸುತ್ತಾರೆ.

ಇಲ್ಲಿ ಕೆಲವು ಪ್ರಶ್ನೆಗಳಿವೆ. ವಿಧಾನಸಭಾ ಚುನಾವಣೆಗಳು ದೇಶದ ಮನಸ್ಥಿತಿಯನ್ನು ಹೇಳುತ್ತವೆಯೇ? ಏಕೆ ಈ ಹಿಂದಿನ ಹಲವಾರು ಚುನಾವಣಾ ಸಮೀಕ್ಷೆಗಳು ಸಮೀಕ್ಷಾ ಸಂಸ್ಥೆಗಳ ಹಾಗೂ ರಾಜಕೀಯ ಪಂಡಿತರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿವೆ? ಮೋದಿ ಅಲೆ ತೀವ್ರವಾಗಿದ್ದ ಕಾಲದಲ್ಲಿ ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಆಮ್‌ ಆದ್ಮಿ ಪಕ್ಷಕ್ಕೆ 70ರಲ್ಲಿ 67 ಸೀಟು ಬರುತ್ತದೆ ಎಂದು ಭವಿಷ್ಯ ಹೇಳುವುದಕ್ಕೆ ಯಾರಿಗೂ ಏಕೆ ಸಾಧ್ಯವಾಗಲಿಲ್ಲ? ದೇಶದ ಎಲ್ಲೆಡೆ ಆಗುವುದು ಏಕೆ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಆಗುವುದಿಲ್ಲ? ಸರಿಯಾಗಿ ಒರಿಯಾ ಭಾಷೆಯನ್ನೇ ಮಾತನಾಡಲು ಬಾರದ ಒಡಿಶಾದ ಮುಖ್ಯಮಂತ್ರಿಯನ್ನು ಏಕೆ 20 ವರ್ಷದಿಂದ ಆಡಳಿತವಿರೋಧಿ ಅಲೆ ಕಾಡಿಲ್ಲ? ಇಂತಹ ಸಾಕಷ್ಟುಉದಾಹರಣೆಗಳಿವೆ.

ಅಮೆರಿಕದಲ್ಲಾಗಿದ್ದು ಉಲ್ಟಾಪಲ್ಟಾ

ಚುನಾವಣಾ ಪೂರ್ವ ಸಮೀಕ್ಷೆಗಳು ಭಯಂಕರವಾಗಿ ಉಲ್ಟಾಪಲ್ಟಾಆಗಿದ್ದು ಇಂತಹ ಸಮೀಕ್ಷೆಗಳನ್ನು ದೊಡ್ಡ ಪ್ರಮಾಣದಲ್ಲಿ ನಂಬುವ ಅಮೆರಿಕದಲ್ಲಿ. 2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಬಹುತೇಕ ಎಲ್ಲಾ ಸಮೀಕ್ಷೆಗಳೂ ಹಿಲರಿ ಕ್ಲಿಂಟನ್‌ ಅಧ್ಯಕ್ಷರಾಗುತ್ತಾರೆ ಎಂದು ಘೋಷಿಸಿಬಿಟ್ಟಿದ್ದವು.

ಡೊನಾಲ್ಡ್‌ ಟ್ರಂಪ್‌ ಗೆಲ್ಲುತ್ತಾರೆಂದು ಊಹಿಸುವುದಕ್ಕೂ ಅವುಗಳಿಗೆ ಸಾಧ್ಯವಾಗಿರಲಿಲ್ಲ. ಫಲಿತಾಂಶ ಬಂದ ನಂತರ ಖಿನ್ನತೆಗೆ ಜಾರಿದ ಅಲ್ಲಿನ ಸಮೀಕ್ಷಾ ಸಂಸ್ಥೆಗಳು ಹಾಗೂ ಮಾಧ್ಯಮಗಳು ಇನ್ನೂ ಅದರಿಂದ ಹೊರಬಂದಿಲ್ಲ.

ಫಲಿತಾಂಶ ಬಂದ ನಂತರ ದಿ ನ್ಯೂಯಾರ್ಕ್ ಟೈಮ್ಸ್‌ ಮತ್ತು ದಿ ನ್ಯೂಯಾರ್ಕರ್‌ ಪತ್ರಿಕೆಗಳು ತಾವು ಜನರ ನಾಡಿಮಿಡಿತ ಅರಿಯುವಲ್ಲಿ ಹಾಗೂ ಸೋಕಾಲ್ಡ್‌ ಉದಾರವಾದಿ ನಿರ್ಧಾರಗಳ ವಿರುದ್ಧ ಜನರಿಗಿರುವ ಸಿಟ್ಟನ್ನು ಅಳೆಯುವಲ್ಲಿ ವಿಫಲವಾಗಿದ್ದನ್ನು ಒಪ್ಪಿಕೊಂಡವು.

1948 ರಷ್ಟುಹಿಂದೆ ಕೂಡ ಡೆಮಾಕ್ರೆಟಿಕ್‌ ಪಕ್ಷದ ಹ್ಯಾರಿ ಟ್ರೂಮನ್‌ ಸೋಲುತ್ತಾರೆಂದು ಹೇಳುವ ಮೂಲಕ ಮಾಧ್ಯಮಗಳು ಮತ್ತು ಸಮೀಕ್ಷಾ ಸಂಸ್ಥೆಗಳು ಮುಗ್ಗರಿಸಿ ಬಿದ್ದಿದ್ದವು. ಆದರೆ, 70 ವರ್ಷಗಳ ಹಿಂದೆ ಸೆಫಾಲಜಿ (ಚುನಾವಣಾ ಅಂಕಿಅಂಶಗಳ ಅಧ್ಯಯನ ಶಾಸ್ತ್ರ) ಎಂಬುದು ಈಗಿನಂತೆ ತಂತ್ರಜ್ಞಾನ ಆಧರಿತ ‘ವಿಜ್ಞಾನ’ವಾಗಿ ರೂಪುಗೊಂಡಿರಲಿಲ್ಲ ಬಿಡಿ.

ಅಮೆರಿಕದಲ್ಲಿ ಸಮೀಕ್ಷೆಗಳನ್ನು ನಡೆಸುವುದಕ್ಕಿಂತ ಭಾರತದಲ್ಲಿ ನಡೆಸುವುದು ಕಷ್ಟ. ಏಕೆಂದರೆ ಅಮೆರಿಕದಲ್ಲಿರುವವರು ಏಕಭಾಷಿಕ, ಏಕಧರ್ಮದ, ಏಕಸಂಸ್ಕೃತಿಯ ಮತದಾರರು. ಭಾರತದಲ್ಲಿ ಪರಿಸ್ಥಿತಿ ತದ್ವಿರುದ್ಧ.

#MeToo ನಿಂದ ಬಿತ್ತು ಏಟು : ಕೇಂದ್ರ ಸಚಿವ ಎಂ.ಜೆ. ಅಕ್ಬರ್ ರಾಜೀನಾಮೆ

 

ಚುನಾವಣಾ ಸಮೀಕ್ಷೆ ನಂಬಬಹುದೇ?

2019ರ ಲೋಕಸಭೆ ಚುನಾವಣೆಯ ಬಗ್ಗೆ ಹಲವು ಲಕ್ಷಗಳಷ್ಟುಸ್ಯಾಂಪಲ್‌ ಸಂಗ್ರಹಿಸಿ, ದೇಶಾದ್ಯಂತ ಸುತ್ತಾಡಿ, ಎಲ್ಲಾ ಧರ್ಮಗಳನ್ನೂ ಒಳಗೊಂಡು ಸಮೀಕ್ಷೆ ನಡೆಸಿರುವ ಖ್ಯಾತ ರಾಜಕೀಯ ತಂತ್ರಗಾರ ಹಾಗೂ ಸಮೀಕ್ಷಾ ತಜ್ಞರೊಬ್ಬರು ಮೋದಿ ಖಂಡಿತವಾಗಿ ಗೆಲ್ಲುತ್ತಾರೆಂದು ಭವಿಷ್ಯ ಹೇಳಿದ್ದಾರೆ. ಅಮಿತ್‌ ಶಾ 350 ಸೀಟು ಬಿಜೆಪಿಗೆ ನಿಶ್ಚಿತ ಎಂದಿದ್ದಾರೆ. ಕುತೂಹಲಕರ ಸಂಗತಿಯೆಂದರೆ ಕಾಂಗ್ರೆಸ್‌ ಅಥವಾ ಇನ್ನಾವುದೇ ಪಕ್ಷಗಳು ತಾವು ಇಂತಿಷ್ಟೇ ಸೀಟು ಗೆಲ್ಲುತ್ತೇವೆಂದು ಇಲ್ಲಿಯವರೆಗೂ ಹೇಳಿಕೊಂಡಿಲ್ಲ.

ಮೋದಿ 80ರಿಂದ 120 ಸೀಟು ಕಳೆದುಕೊಳ್ಳುತ್ತಾರೆ ಎಂದಷ್ಟೇ ಇತರ ರಾಜಕೀಯ ಪಕ್ಷಗಳು ಹೇಳುತ್ತಿವೆ ಅಥವಾ ನಿರೀಕ್ಷಿಸುತ್ತಿವೆ. ಅದು ನಿಜವಾದರೆ ಬಿಜೆಪಿ ಬಲ 2014ರ ಚುನಾವಣೆಯಲ್ಲಿದ್ದ 282 ಸೀಟುಗಳಿಂದ 160-200 ಸೀಟುಗಳಿಗೆ ಕುಸಿಯುತ್ತದೆ. ಮೋದಿಯವರ ಕಾರ್ಯವೈಖರಿಯಿಂದಾಗಿ ಹಲವು ಬಿಜೆಪಿ ಮುಖಂಡರು ಚುನಾವಣೆಗೂ ಮುನ್ನ ಬೇರೆ ಪಕ್ಷ ಸೇರುತ್ತಾರೆಂದು ಅನೇಕರು ನಂಬಿದ್ದಾರೆ.

ಇಷ್ಟಾಗಿಯೂ ಬಹುತೇಕ ಎಲ್ಲಾ ರಾಜಕೀಯ ಪಂಡಿತರು ಹಾಗೂ ನಾಯಕರು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂಬುದನ್ನು ಒಪ್ಪುತ್ತಾರೆ. ಆಗ ರಾಷ್ಟ್ರಪತಿಗಳು ಬಿಜೆಪಿಯನ್ನೇ, ಅಂದರೆ ಮೋದಿ ಎಂದು ಓದಿಕೊಳ್ಳಿ, ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ. ಆಗ ಕುರ್ಚಿ ಆಟ ಶುರುವಾಗುತ್ತದೆ. ಹೊಸ ಎನ್‌ಡಿಎ, ಹೊಸ ಯುಪಿಎ, ಹೊಸ ತೃತೀಯ ರಂಗ ಹಾಗೂ ಬಹುಶಃ ಹೊಸ ಬಿಜೆಪಿ ಕೂಡ ಆಗ ಮುನ್ನೆಲೆಗೆ ಬರಬಹುದು.

ಒಂದು ಸಂಗತಿ ಮಾತ್ರ ನಿಶ್ಚಿತ. 2019ರ ಚುನಾವಣೆ ಹಣಾಹಣಿ ರಾಹುಲ್‌ ಹಾಗೂ ಮೋದಿ ನಡುವೆಯಾಗಲೀ, ಮಹಾಗಠಬಂಧನ ಮತ್ತು ಎನ್‌ಡಿಎ ನಡುವೆಯಾಗಲೀ, ಬಿಜೆಪಿ ಹಾಗೂ ಇತರ ಅಸಂಖ್ಯ ಪ್ರಾದೇಶಿಕ ಪಕ್ಷಗಳ ನಡುವೆಯಾಗಲೀ ನಡೆಯುವುದಿಲ್ಲ. ಅದು ನಡೆಯುವುದು ಚುನಾವಣಾ ಸಮೀಕ್ಷೆಗಳನ್ನು ನಡೆಸುವ ರಾಜಕೀಯ ಪಂಡಿತರು ಹಾಗೂ ಜನರ ನಡುವೆ.

ಕೃಪೆ: ದಿ ಪ್ರಿಂಟ್ 

ಕುಮಾರ್ ಕೇತ್ಕರ್, ಮಾಜಿ ಪತ್ರಕರ್ತ 

ಕಾಂಗ್ರೆಸ್ ರಾಜ್ಯಸಭಾ ಸದಸ್ಯ