ಚಾಮರಾಜನಗರ (ಫೆ. 21): ಕರ್ನಾಟಕದ ದಕ್ಷಿಣ ಗಡಿ ಭಾಗದ ತುತ್ತತುದಿಯಲ್ಲಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರ ಶೇ.49ರಷ್ಟುಅರಣ್ಯ ಪ್ರದೇಶ ಹೊಂದಿದೆ. ಬಂಡೀಪುರ ಹಾಗೂ ಬಿಳಿಗಿರಿರಂಗ ಎಂಬ ಎರಡು ಹುಲಿ ಸಂರಕ್ಷಿತಾರಣ್ಯಗಳು ಮತ್ತು ಮಲೆಮಹದೇಶ್ವರ ವನ್ಯಜೀವಿಧಾಮವನ್ನು ಒಳಗೊಂಡ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಕ್ಷೇತ್ರ ಕಾಂಗ್ರೆ​ಸ್‌ನ ಭದ್ರ​ಕೋಟೆ.

ಟಿಕೆಟ್ ಫೈಟ್: ಡಿಕೆ+ಎಚ್‌ಡಿಕೆ ವರ್ಸಸ್‌ ಯೋಗಿ?

ಇಲ್ಲಿ ಒಮ್ಮೆಯೂ ‘ಕಮಲ’ ಅರ​ಳಿಲ್ಲ. ಸಾಮಾ​ನ್ಯ​ವಾಗಿ ಕಾಂಗ್ರೆಸ್‌ ಹಾಗೂ ಜೆಡಿ​ಎ​ಸ್‌ನ ಜಂಗೀ ಕುಸ್ತಿಯ ಅಖಾ​ಡ​ವಿದು. ಇವೆರಡೂ ಪಕ್ಷಗಳ ನಡುವೆ ಮೈತ್ರಿ ಏರ್ಪ​ಟ್ಟರೆ ಕಾಂಗ್ರೆ​ಸ್‌-ಜೆಡಿ​ಎಸ್‌ ಶಕ್ತಿ​ಯನ್ನು ಎಷ್ಟರ ಮಟ್ಟಿಗೆ ಬಿಜೆಪಿ ಎದು​ರಿ​ಸ​ಲಿದೆ ಎಂಬು​ದೇ ಈ ಬಾರಿಯ ಕುತೂ​ಹ​ಲ.

ಈ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಚಾಮರಾಜನಗರ ಜಿಲ್ಲೆಯ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ಹನೂರು ವಿಧಾನಸಭಾ ಕ್ಷೇತ್ರಗಳು ಮತ್ತು ಮೈಸೂರು ಜಿಲ್ಲೆಯ ನಂಜನಗೂಡು, ಎಚ್‌.ಡಿ. ಕೋಟೆ, ಟಿ. ನರಸೀಪುರ ಹಾಗೂ ವರುಣಾ ವಿಧಾನಸಭಾ ಕ್ಷೇತ್ರಗಳು ಸೇರಿ ಒಟ್ಟು ಎಂಟು ಕ್ಷೇತ್ರಗಳು ಬರುತ್ತವೆ. ಈ ಕ್ಷೇತ್ರದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳು ಪರಿಶಿಷ್ಟಜಾತಿ ಹಾಗೂ ಒಂದು ವಿಧಾನಸಭಾ ಕ್ಷೇತ್ರ ಪರಿಶಿಷ್ಟವರ್ಗಕ್ಕೆ ಮೀಸಲಾಗಿರುವುದು ವಿಶೇಷ.

ಟಿಕೆಟ್ ಫೈಟ್: ದಾವಣಗೆರೆಯಲ್ಲಿ ಕೈ-ಕಮಲ ನಡುವೆ ಪ್ರಬಲ ಪೈಪೋಟಿ

1962ರಲ್ಲಿ ರಚನೆಗೊಂಡ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರ ಆರಂಭದಿಂದಲೂ ಕಾಂಗ್ರೆಸ್‌ ಪಕ್ಷದ ಭದ್ರಕೋಟೆ. ಆದರೆ ಬದಲಾದ ರಾಜಕೀಯ ಸನ್ನಿವೇಶದ ಪರಿಣಾಮ 1996ರಿಂದ 2004ರವರೆಗೂ ಕ್ಷೇತ್ರದಲ್ಲಿ ಜನತಾದಳ ಪ್ರಭುತ್ವ ಸ್ಥಾಪಿಸಿತ್ತು. ಬಳಿಕ ಒಳಜಗಳದಿಂದಾಗಿ ಜನತಾದಳ ತನ್ನ ಅಸ್ತಿತ್ವ ಕಳೆದುಕೊಂಡಿತ್ತು. 2009ರ ಚುನಾವಣೆಯಿಂದ ಕಾಂಗ್ರೆಸ್‌ ಮತ್ತೆ ತನ್ನ ಹಿಡಿತಕ್ಕೆ ತೆಗೆದುಕೊಂಡಿತು.

ಸಿದ್ದುಗೆ ಪ್ರತಿಷ್ಠೆಯ ಕ್ಷೇತ್ರ

ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ನಾಲ್ಕು ಮಂದಿ ಕಾಂಗ್ರೆಸ್‌ ಶಾಸಕರು, ಇಬ್ಬರು ಬಿಜೆಪಿ ಹಾಗೂ ಜೆಡಿಎಸ್‌ ಮತ್ತು ಬಿಎಸ್‌ಪಿಯಿಂದ ತಲಾ ಒಬ್ಬರು ಶಾಸಕರಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ವಿ. ಶ್ರೀನಿವಾಸಪ್ರಸಾದ್‌, ಎಚ್‌.ಸಿ. ಮಹದೇವಪ್ಪ, ಗೀತಾ ಮಹಾದೇವ ಪ್ರಸಾದ್‌, ಹಾಲಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿಅವರಂತಹ ಪ್ರಭಾವಿ ನಾಯಕರು ಇದೇ ಲೋಕಸಭಾ ಕ್ಷೇತ್ರದವರಾಗಿರುವುದು ವಿಶೇಷ. ಅಲ್ಲದೆ ನಾಲ್ಕು ಮೀಸಲು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವುದು ಈ ಕ್ಷೇತ್ರದ ಪ್ರಮುಖ ಅಂಶವಾಗಿದೆ.

ಎದುರಾಳಿಯೇ ಈಗ ಜೊತೆಗಾರ

2009 ಮತ್ತು 2014ರಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಸತತ ಎರಡು ಬಾರಿ ಆಯ್ಕೆಯಾಗಿರುವ ಸಂಸದ ಆರ್‌. ಧ್ರುವನಾರಾಯಣ ಅವರೇ ಈ ಬಾರಿಯೂ ಕಾಂಗ್ರೆಸ್‌ ಅಭ್ಯರ್ಥಿ. ಇವರನ್ನು ಹೊರತುಪಡಿಸಿ ಪಕ್ಷದಲ್ಲಿ ಯಾರೂ ಟಿಕೆಟ್‌ ಕೇಳುತ್ತಿಲ್ಲ. ಅಷ್ಟರ ಮಟ್ಟಿಗೆ ಪ್ರಭಾವ ಬೆಳೆಸಿಕೊಂಡಿದ್ದಾರೆ.

2004ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ಸ್ಪರ್ಧಿಸಿ ಕೇವಲ ಒಂದು ಮತದ ಅಂತರದಿಂದ ಗೆದ್ದು ಇತಿಹಾಸ ಸೃಷ್ಟಿಸಿದ್ದ ಕಾಂಗ್ರೆಸ್‌ನ ಆರ್‌. ಧ್ರುವನಾರಾಯಣ, ಅದೇ ಒಂದು ಮತದ ಅಂತರದಿಂದ ಸೋತಿದ್ದ ಬಿಜೆಪಿಯ ಎ.ಆರ್‌.ಕೃಷ್ಣಮೂರ್ತಿ ವಿರುದ್ಧ 2009 ಹಾಗೂ 2014ರ ಲೋಕಸಭಾ ಚುನಾವಣೆಗಳಲ್ಲೂ ಗೆಲುವು ದಾಖಲಿಸಿದ್ದರು.

ಪ್ರಸ್ತುತ ಎ.ಆರ್‌.ಕೃಷ್ಣಮೂರ್ತಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಈ ಇಬ್ಬರು ಪ್ರಬಲ ನಾಯಕರು ಈಗ ಕಾಂಗ್ರೆಸ್‌ನಲ್ಲೇ ಇರುವುದು ಮತ್ತೊಂದು ವಿಶೇಷವಾಗಿದ್ದು, ಧ್ರುವನಾರಾಯಣಗೆ ಪ್ರಬಲ ಎದುರಾಳಿಗಳೇ ಇಲ್ಲವಾಗಿದೆ. 2004ರಲ್ಲಿ ಸಂತೇಮರಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಆರಿಸಿ ಹೋಗಿದ್ದ ಆರ್‌.ಧ್ರುವನಾರಾಯಣ 2008ರಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿ, 2009 ಹಾಗೂ 2014ರಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.

ಬಿಜೆಪಿಯಲ್ಲಿ ಡಜನ್‌ ಆಕಾಂಕ್ಷಿಗಳು

2009 ಮತ್ತು 2014ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಶಾಸಕ ಎ.ಆರ್‌. ಕೃಷ್ಣಮೂರ್ತಿ ಅವರು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದರು. ಹೀಗಾಗಿ ಬಿಜೆಪಿ ಹೊಸಬರನ್ನು ಕಣಕ್ಕಿಳಿಸುವುದು ಅನಿವಾರ್ಯವಾಗಿದ್ದು, ಡಜನ್‌ಗಟ್ಟಲೇ ಅಭ್ಯರ್ಥಿಗಳು ಟಿಕೆಟ್‌ಗಾಗಿ ಪೈಪೋಟಿ ನಡೆಸುತ್ತಿರುವುದು ಬಿಜೆಪಿಗೆ ತಲೆನೋವಾಗಿದೆ.

ಕೇಂದ್ರದ ಮಾಜಿ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಮಾಜಿ ಶಾಸಕರಾದ ಜಿ.ಎನ್‌.ನಂಜುಂಡಸ್ವಾಮಿ, ಸಿ.ರಮೇಶ್‌, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್‌. ಮಹದೇವಯ್ಯ, ನಿವೃತ್ತ ಐಎಎಸ್‌ ಅಧಿಕಾರಿ ಕೆ. ಶಿವರಾಂ, ಐಎಫ್‌ಎಸ್‌ ಅಧಿಕಾರಿ ರಾಜು, ಆಹಾರ ಇಲಾಖೆ ಉಪನಿರ್ದೇಶಕರಾಗಿದ್ದ ಎಸ್‌.ಇ.ಮಹದೇವಪ್ಪ, ವಕೀಲ ಅರುಣ್‌ ಕುಮಾರ್‌, ಡಾ.ಮೋಹನ್‌, ಡಾ.ಜ್ಯೋತಿಷ್‌ ಕುಮಾರ್‌ ಅವರು ಟಿಕೆಟ್‌ ರೇಸ್‌ನಲ್ಲಿದ್ದಾರೆ. ಇದರ ನಡುವೆ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಹೆಸರು ಕೇಳಿ ಬರುತ್ತಿದೆ.

ಬಿಎಸ್ಪಿ ಮಹೇಶ್‌ ನಿಲ್ತಾರಾ?

ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಮೈತ್ರಿ ಏರ್ಪಡದಿದ್ದರೆ ಜೆಡಿಎಸ್‌ನಿಂದ ಚುನಾವಣೆ ಎದುರಿಸಿ ಅನುಭವ ಹೊಂದಿರುವ ಚಾಮರಾಜನಗರದ ಸಿ.ಎಂ. ಕೃಷ್ಣಮೂರ್ತಿ, ಕೊಳ್ಳೇಗಾಲದ ಎನ್‌.ಶಿವಮಲ್ಲು ಅವರು ಟಿಕೆಟ್‌ ಬಯಸುವ ಸಾಧ್ಯತೆ ಇದೆ. ಬಿಎಸ್ಪಿಯಿಂದ ಈಗಾಗಲೇ ಶಾಸಕರಾಗಿರುವ ಎನ್‌.ಮಹೇಶ್‌ ಅವರು ಸ್ಪರ್ಧೆ ಮಾಡಿ ಗೆದ್ದರೆ, ಕೇಂದ್ರದಲ್ಲಿ ಮಾಯಾವತಿ ಕೈ ಬಲವಾಗುತ್ತದೆ. ಅದಕ್ಕಾಗಿ ಮಹೇಶ್‌ ಅವರನ್ನೇ ಕಣಕ್ಕಿಳಿಸಬೇಕು ಎಂಬ ಮಾತು ಪಕ್ಷದಲ್ಲಿ ಕೇಳಿ ಬರುತ್ತಿದೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ಅವರು ಸಹ ಟಿಕೆಟ್‌ ಬಯಸಿದ್ದಾರೆ.

ಶ್ರೀನಿವಾಸ ಪ್ರಸಾದ್‌ 5 ಬಾರಿ ಗೆದ್ದಿದ್ದ ಕ್ಷೇತ್ರ

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಬಿಜೆಪಿ ಖಾತೆ ತೆರೆದಿಲ್ಲ. 2009ರಲ್ಲಿ ಬಿಜೆಪಿ ಅಭ್ಯರ್ಥಿ ಕಡಿಮೆ ಅಂತರದಿಂದ ಪರಾಭವಗೊಂಡಿದ್ದರು. ಆದರೆ ಹಾಲಿ ಬಿಜೆಪಿ ನಾಯಕರಾಗಿರುವ ಶ್ರೀನಿವಾಸ ಪ್ರಸಾದ್‌ ಅವರು ಈ ಕ್ಷೇತ್ರವನ್ನು ಒಟ್ಟು 5 ಬಾರಿ ಲೋಕಸಭೆಯಲ್ಲಿ ಪ್ರತಿನಿಧಿಸಿದ್ದಾರೆ. ಅವರು ಈಗ ಬಿಜೆಪಿಯಲ್ಲಿರುವುದರಿಂದ, ಕ್ಷೇತ್ರ ವ್ಯಾಪ್ತಿಯಲ್ಲಿ ಇಬ್ಬರೂ ಶಾಸಕರೂ ಇರುವುದರಿಂದ ಬಿಜೆಪಿ ಜಾದೂ ನಿರೀಕ್ಷಿಸುತ್ತಿದೆ.

ಕಾಂಗ್ರೆಸ್‌+ಜೆಡಿಎಸ್‌ 5,

ಬಿಜೆಪಿಯ 2 ಶಾಸಕರು

ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚಾಮರಾಜನಗರ ಜಿಲ್ಲೆಯ 4 ಹಾಗೂ ಮೈಸೂರು ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳು ಇವೆ. ಆ ಪೈಕಿ ಚಾಮರಾಜನಗರ, ಹನೂರು, ವರುಣಾ ಮತ್ತು ಎಚ್‌.ಡಿ. ಕೋಟೆಯಲ್ಲಿ ಕಾಂಗ್ರೆಸ್‌ ಶಾಸಕರು, ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಬಿಜೆಪಿ ಶಾಸಕರು ಹಾಗೂ ಕೊಳ್ಳೇಗಾಲದಲ್ಲಿ ಬಿಎಸ್ಪಿ ಹಾಗೂ ಟಿ. ನರಸೀಪುರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ.

ರೇಸ್‌ನಲ್ಲಿ ಯಾರು?

ಕಾಂಗ್ರೆಸ್‌ - ಆರ್‌. ಧ್ರುವನಾರಾಯಣ

ಬಿಜೆಪಿ- ವಿ. ಶ್ರೀನಿವಾಸ ಪ್ರಸಾದ್‌, ಕಾಗಲವಾಡಿ ಎಂ. ಶಿವಣ್ಣ, ಕೋಟೆ ಎಂ. ಶಿವಣ್ಣ, ಜಿ.ಎನ್‌. ನಂಜುಂಡಸ್ವಾಮಿ, ಸಿ.ರಮೇಶ್‌, ಎಸ್‌. ಮಹದೇವಯ್ಯ, ಕೆ. ಶಿವರಾಂ, ರಾಜು, ಎಸ್‌.ಇ. ಮಹದೇವಪ್ಪ, ಅರುಣ್‌ ಕುಮಾರ್‌, ಡಾ. ಮೋಹನ್‌, ಡಾ. ಜ್ಯೋತಿಷ್‌ ಕುಮಾರ್‌, ಡಾ. ಎಚ್‌.ಸಿ. ಮಹದೇವಪ್ಪ

ಜೆಡಿಎಸ್‌- ಸಿ.ಎಂ. ಕೃಷ್ಣಮೂರ್ತಿ, ಎನ್‌. ಶಿವಮಲ್ಲು

ಬಿಎಸ್ಪಿ- ಎನ್‌. ಮಹೇಶ್‌, ಅರಕಲವಾಡಿ ನಾಗೇಂದ್ರ

- ದೇವರಾಜು ಕಪ್ಪಸೋಗೆ