ಸಿಎಂ, ಸಚಿವ ಶರಣ್, ಅಧಿಕಾರಿಗಳ ವಿರುದ್ಧದ 288 ಕೇಸು ಕೈಬಿಟ್ಟ ಲೋಕಾ ನ್ಯಾ| ವಿಶ್ವನಾಥ ಶೆಟ್ಟಿ | ಪ್ರಕರಣ ಕೈಬಿಡಲು ನಾನಾ ಕಾರಣ
ಬೆಂಗಳೂರು: ಲೋಕಾಯುಕ್ತದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಶರಣ್‌ಪ್ರಕಾಶ್ ಪಾಟೀಲ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಐಎಎಸ್, ಐಪಿಎಸ್ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಪೈಕಿ ಸುಮಾರು 288 ಪ್ರಕರಣಗಳಿಗೆ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ್ ಶೆಟ್ಟಿ ಅವರು ಇತಿಶ್ರೀ ಹಾಡಿದ್ದಾರೆ.
ಸೂಕ್ತ ದಾಖಲೆ ಇಲ್ಲದಿರುವುದು, ವಿಚಾರಣೆಗೆ ಅರ್ಹ ಇಲ್ಲ, ಸಾಕ್ಷ್ಯ ಕೊರತೆ ಸೇರಿದಂತೆ ನಾನಾ ಕಾರಣಗಳನ್ನು ತಿಳಿಸಿ ಪ್ರಕರಣಗಳನ್ನು ವಿಚಾರಣೆಯಿಂದ ಕೈಬಿಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದಾಖಲಾಗಿದ್ದ ನಾಲ್ಕು ಪ್ರಕರಣಗಳಿಗೆ ಲೋಕಾಯುಕ್ತರು ಮುಕ್ತಿ ನೀಡಿದ್ದಾರೆ. ಅಲ್ಲದೇ, ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ವಿರುದ್ಧ ದಾಖಲಾದ ಪ್ರಕರಣವನ್ನು ಸಹ ಮುಕ್ತಾಯಗೊಳಿಸಲಾಗಿದೆ.
ಮುಖ್ಯಮಂತ್ರಿ, ಸಚಿವರು ಮಾತ್ರವಲ್ಲದೇ ವಿವಿಧ ಪ್ರಕರಣಗಳಲ್ಲಿ ಮುಖ್ಯ ಕಾರ್ಯದರ್ಶಿ, ಬಿಬಿಎಂಪಿ ಆಯುಕ್ತ, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಐಎಎಸ್, ಐಪಿಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಸಂಸ್ಥೆಯಲ್ಲಿ ದೂರು ದಾಖಲಾಗಿದ್ದವು. ಅವುಗಳನ್ನು ಲೋಕಾಯುಕ್ತರು ಇತ್ಯರ್ಥ ಗೊಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಕಾರ್ಯಕರ್ತ ರಾಮಮೂರ್ತಿ ಗೌಡ, ರೇವಣ್ಣ ಸಿದ್ಧಪ್ಪ, ಕೆ.ಆರ್.ರವೀಂದ್ರ, ಪೊಲೀಸ್ ಮಹಾಸಭಾದ ಅಧ್ಯಕ್ಷ ವಿ. ಶಶಿಧರ್ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದು, ಇವರ ದೂರುಗಳನ್ನು ಕೈಬಿಡಲಾಗಿದೆ.
ಮುಖ್ಯಮಂತ್ರಿಗಳ ವಿರುದ್ಧ 57 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 27 ಪ್ರಕರಣಗಳು ಇನ್ನೂ ತನಿಖಾ ಹಂತದಲ್ಲಿವೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ. ಲೋಕಾಯುಕ್ತ ಸಂಸ್ಥೆಯಲ್ಲಿನ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ನ್ಯಾ.ಭಾಸ್ಕರ್ ರಾವ್ ಅವರು ಲೋಕಾಯುಕ್ತ ಹುದ್ದೆ ತ್ಯಜಿಸಿದ ಬಳಿಕ ಕೆಲ ತಿಂಗಳುಗಳ ಕಾಲ ಲೋಕಾಯುಕ್ತರೇ ಇರಲಿಲ್ಲ. ಈ ವೇಳೆ ದಾಖಲಾಗುತ್ತಿದ್ದ ಪ್ರಕರಣಗಳು ಇತ್ಯರ್ಥಗೊಳ್ಳುತ್ತಿರಲಿಲ್ಲ. ಹೀಗಾಗಿ ದೂರುಗಳು ಸಹ ದಾಖಲಾಗುತ್ತಿರಲಿಲ್ಲ.
ಆದರೆ, ನ್ಯಾ.ಪಿ.ವಿಶ್ವನಾಥ್ ಶೆಟ್ಟಿ ಅವರು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ 938 ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ 288 ಪ್ರಕರಣ ಗಳನ್ನು ಅವರು ಮುಕ್ತಾಯಗೊಳಿಸಿದ್ದಾರೆ ಎಂದು ಹೇಳಲಾಗಿದೆ.
2017ರ ಫೆ.1ರಿಂದ ಸೆ.21ರವರೆಗೆ ಲೋಕಾಯುಕ್ತ ಸಂಸ್ಥೆಯಲ್ಲಿ 2952 ಪ್ರಕರಣಗಳು ದಾಖಲಾಗಿದ್ದು, ಒಟ್ಟು 10126 ಪ್ರಕರಣಗಳಿದ್ದವು. 3832 ಪ್ರಕರಣಗಳನ್ನು ವಿಚಾರಣೆ ನಡೆಸಲಾಗಿದೆ. ಇನ್ನೂ 6294 ಪ್ರಕರಣಗಳು ಬಾಕಿ ಇವೆ. ಲೋಕಾಯುಕ್ತರು, ಉಪಲೋಕಾಯುಕ್ತ-1 ಮತ್ತು ಉಪಲೋಕಾಯುಕ್ತ-2 ಅವರಲ್ಲಿ ದಾಖಲಾಗಿರುವ ಒಟ್ಟು ಪ್ರಕರಣ ಇವುಗಳಾಗಿವೆ. ನ್ಯಾ.ಪಿ.ವಿಶ್ವನಾಥಶೆಟ್ಟಿ ಅವರ ಬಳಿ 900 ದೂರುಗಳು ದಾಖಲಾಗಿದ್ದು, ಒಟ್ಟು 3313 ಪ್ರಕರಣಗಳಿದ್ದವು. ಈ ಪೈಕಿ 941 ದೂರುಗಳ ವಿಚಾರಣೆ ನಡೆಸಿದ್ದು, ಇನ್ನೂ 2372 ದೂರಗಳು ಬಾಕಿ ಇವೆ.
ಉಪಲೋಕಾಯುಕ್ತ -1 ನ್ಯಾ.ಆನಂದ್ ಅವರ ಬಳಿ 757 ಪ್ರಕರಣಗಳು ದಾಖಲಾಗಿದ್ದು, ಒಟ್ಟು 2033 ಪ್ರಕರಣಗಳಿವೆ. ಇವು ಗಳಲ್ಲಿ 912 ಪ್ರಕರಣಗಳ ವಿಚಾರಣೆ ನಡೆಸಿದ್ದು, 1221 ಪ್ರಕರಣಗಳು ಬಾಕಿ ಇವೆ.
ಅಂತೆಯೇ, ಉಪಲೋಕಾಯುಕ್ತ-2 ನ್ಯಾ. ಬಿ.ಅಡಿ ಅವರಲ್ಲಿ 1295 ಪ್ರಕರಣಗಳು ದಾಖಲಾಗಿದ್ದು, 4780 ಪ್ರಕರಣಗಳಿವೆ. ಈ ಪೈಕಿ 1979 ಕೇಸ್ ವಿಚಾರಣೆ ನಡೆಸಲಾಗಿದ್ದು, 2801 ಪ್ರಕರಣಗಳು ಬಾಕಿ ಇವೆ ಎಂದು ಮೂಲಗಳು ತಿಳಿಸಿವೆ.
