ಬೆಂಗಳೂರು: ‘ನಾನು ಭ್ರಷ್ಟ ಅಧಿಕಾರಿಗಳ ವಿರುದ್ಧ ಸಾಕ್ಷಿ ಸಮೇತ ದೂರು ದಾಖಲಿಸಿದರೂ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಲಿಲ್ಲ. ಈ ಬೆಳವಣಿಗೆಯಿಂದ ಬೇಸರಗೊಂಡು ಲೋಕಾಯುಕ್ತರಿಗೆ ಚಾಕುವಿನಿಂದ ಇರಿದೆ..!’ ಇದು ಲೋಕಾಯುಕ್ತರ ಮೇಲೆ ಚಾಕುವಿನಿಂದ ದಾಳಿ ನಡೆಸಿರುವ ರಾಜಸ್ಥಾನ ಮೂಲದ ಪೀಠೋಪಕರಣ ವ್ಯಾಪಾರಿ ತೇಜ್‌ರಾಜ್ ಶರ್ಮಾ ನೀಡಿರುವ ತಪ್ಪೊಪ್ಪಿಗೆ ಹೇಳಿಕೆ. ಭ್ರಷ್ಟ ವ್ಯವಸ್ಥೆ ವಿರುದ್ಧ ಜಿಗುಪ್ಸೆ ಮೂಡಿತು.

ನ್ಯಾಯಕ್ಕಾಗಿ ಲೋಕಾಯುಕ್ತರಿಗೆ ದೂರು ನೀಡಿದೆ. ಆದರೆ ಸಾಕ್ಷ್ಯ ನೀಡಿದರೂ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ. ಹಲವು ಬಾರಿ ಲೋಕಾಯುಕ್ತ ಸಂಸ್ಥೆಗೆ ಭೇಟಿ ನೀಡಿ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ ಎಂದು ವಿಚಾರಣೆ ವೇಳೆ ಆರೋಪಿ ಹೇಳಿರುವುದಾಗಿ ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ.

ತುಮಕೂರಿನ ಮನೆಯಿಂದ ಹೊರಡುವಾಗಲೇ ಬ್ಯಾಗ್‌ನಲ್ಲಿ ಚಾಕು ಇಟ್ಟುಕೊಂಡು ಬಂದಿದ್ದಾಗಿ ಆರೋಪಿ ಹೇಳಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.