ನವದೆಹಲಿ(ಆ.10): ದೇಶಕ್ಕೆ ಹೊಸ ಸಂಸತ್ತಿನ ಅವಶ್ಯಕತೆ ಇದೆ ಎಂಬ ಪ್ರಸ್ತಾವನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಲೋಕಸಭೇ ಸ್ಪೀಕರ್ ಓಂ ಬಿರ್ಲಾ ಹೇಳುವ ಮೂಲಕ ಹೊಸದೊಂದು ಚರ್ಚೆಗೆ ನಾಂದಿ ಹಾಡಿದ್ದಾರೆ.

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿರ್ಲಾ, ದೇಶಕ್ಕೆ ನೂತನ ಸಂಸತ್ತಿನ ಅವಶ್ಯಕತೆ ಇದೆ ಎಂಬ ಪ್ರಸ್ತಾವನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಈಗಿರುವ ಕಟ್ಟಡವನ್ನು ನವೀಕರಣಗೊಳಿಸುವ ಮೂಲಕ ಆಧುನಿಕ ರೂಪ ನೀಡುವ ಕುರಿತೂ ಆಲೋಚಿಸಲಾಗುವುದು ಎಂದು ಬಿರ್ಲಾ ತಿಳಿಸಿದ್ದಾರೆ.

ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ವೇಳೆಗೆ ಹೊಸ ಸಂಸತ್ತು ಮತ್ತು ಪ್ರಸಕ್ತ ಸಂಸತ್ತಿನ ಆಧುನೀಕರಣಕ್ಕೆ ಸರ್ಕಾರ ಮುಂದಾಗಬೇಕು ಎಂದು ಬಿರ್ಲಾ ಸಂಸತ್ತಿನ ಅಧಿವೇಶನ ಮುಕ್ತಾಯಗೊಳಿಸಿ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದಾರೆ.