ಮಾಜಿ ಕೇಂದ್ರ ಸಚಿವ ಅಂಬರೀಷ್ ಅವರಿಗೆ ಲೋಕಸಭೆಯಲ್ಲಿ ಸಂತಾಪ| ಮೂರು ದಿನಗಳ ಬಳಿಕ ಅಂಬರೀಷ್ ಅವರಿಗೆ ಸಂತಾಪ ಸೂಚಿಸಿದ ಲೋಕಸಭೆ| ಅಂಬರೀಷ್ ಹೆಸರು ಸಂತಾಪ ಸೂಚಕ ಪಟ್ಟಿಯಲ್ಲಿ ಇರಲಿಲ್ಲ| ಅಂಬರೀಷ್ ಅವರಿಗೆ ಸಂತಾಪ ಸೂಚಿಸದ್ದಕ್ಕೆ ದೇವೇಗೌಡ ತೀವ್ರ ಅಸಮಾಧಾನ| ಇಂದು ಅಂಬರೀಷ್ ಗೆ ಸಂತಾಪ ಸೂಚಿಸಿದ ಸ್ಪೀಕರ್ ಸುಮಿತ್ರಾ ಮಹಾಜನ್

ನವದೆಹಲಿ(ಡಿ.13): ಇತ್ತೀಚಿಗಷ್ಟೇ ನಿಧನರಾದ ಮಾಜಿ ಕೇಂದ್ರ, ರಾಜ್ಯ ಸಚಿವ ಹಾಗೂ ಹಿರಿಯ ನಟ ಅಂಬರೀಷ್ ಅವರಿಗೆ ಇಂದು ಲೋಕಸಭೆಯಲ್ಲಿ ಸಂತಾಪ ಸೂಚಿಸಲಾಯಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಳೆದ ಮಂಗಳವಾರದಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಿದ್ದು, ಮೊದಲ ದಿನವೇ ಎನ್​.ಡಿ ತಿವಾರಿ, ಮದನ್​ ಲಾಲ್​ ಖುರಾನಾ, ಸಿ.ಕೆ. ಜಾಫರ್​ ಷರೀಫ್​, ಗುರುದಾಸ್​ ಕಾಮತ್​ ಮುಂತಾದವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. 

ಆದರೆ ಮಾಜಿ ಸಂಸದರೂ, ಮಾಜಿ ಕೇಂದ್ರ ಸಚಿವರೂ ಆಗಿದ್ದ ಅಂಬರೀಷ್​ ಅವರ ಹೆಸರು ಈ ಪಟ್ಟಿಯಲ್ಲಿ ಇಲ್ಲದೇ ಇರುವುದಕ್ಕೆ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. 

ಅಲ್ಲದೆ ಈ ವಿಚಾರವನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರ ಗಮನಕ್ಕೆ ತಂದಿದ್ದರು. ಬಳಿಕ ಎಚ್ಚೆತ್ತುಕೊಂಡಿದ್ದ ಸ್ಪೀಕರ್​ ಸುಮಿತ್ರಾ ಮಹಾಜನ್​, ಬುಧವಾರ ಸಂತಾಪ ಸೂಚಿಸುವುದಾಗಿ ಹೇಳಿದ್ದರು. ಆದರೆ, ಬುಧವಾರವೂ ಅಂಬರೀಷ್​ ಅವರಿಗೆ ಸಂತಾಪ ಸೂಚಿಸಲಿಲ್ಲ. 

ಮೂರನೆ ದಿನವಾದ ಇಂದು ಕಲಾಪ ಆರಂಭವಾಗುತ್ತಿದ್ದಂತೆ ಸುಮಿತ್ರ ಮಹಾಜನ್ ನವೆಂಬರ್ 24ರಂದು ನಿಧನರಾದ ಅಂಬರೀಷ್ ಅವರಿಗೆ ಸಂತಾಪ ಸೂಚಿಸಿ, ರಾಜಕೀಯ ಕ್ಷೇತ್ರಕ್ಕೆ ಅವರು ನೀಡಿದ ಸೇವೆಯನ್ನು ಸ್ಮರಿಸಿದರು.