ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೊಸ ಸುಳಿವೊಂದನ್ನು ನೀಡಿದ್ದಾರೆ. 

ನವದೆಹಲಿ: ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಗುತ್ತದೆಯೇ ಎಂಬ ಬಗ್ಗೆ ಕಾಂಗ್ರೆಸ್‌ ಪಕ್ಷದಲ್ಲೇ ಪುನಃ ಅಪಸ್ವರಗಳು ಕೇಳಲಾರಂಭಿಸಿವೆ. ರಾಹುಲ್‌ರನ್ನು ಪ್ರಧಾನಿ ಅಭ್ಯರ್ಥಿ ಎಂದು ಪಕ್ಷ ಬಿಂಬಿಸಲ್ಲ ಎಂಬ ಹಿರಿಯ ಮುಖಂಡ ಪಿ.ಚಿದಂಬರಂ ಹೇಳಿಕೆಯ ಬಳಿಕ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಕೂಡ ಈ ಹೇಳಿಕೆಯನ್ನು ಅನುಮೋದಿಸಿದ್ದಾರೆ.

‘2019ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮೈತ್ರಿಕೂಟದ ಪ್ರಧಾನಿ ಉಮೇದುವಾರಿಕೆಯು ಸಮಗ್ರ ನಿರ್ಧಾರವಾಗಿರುತ್ತದೆ. ಆದರೆ ಅದು ರಾಹುಲ್‌ ಗಾಂಧಿ ಆಗಿರಲಿಕ್ಕಿಲ್ಲ’ ಎಂದು ತರೂರ್‌ ಭಾನುವಾರ ಹೇಳಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಸಾಕಷ್ಟುನಾಯಕರಿದ್ದರು. ಪ್ರಣಬ್‌ ಮುಖರ್ಜಿ, ಪಿ.ಚಿದಂಬರಂ ಅವರಂತಹ ಅದ್ಭುತ ‘ಟ್ರ್ಯಾಕ್‌ ರೆಕಾರ್ಡ್‌’ ಹೊಂದಿದವರಿದ್ದರು ಎಂದ ತರೂರ್‌, ಆದಾಗ್ಯೂ ರಾಹುಲ್‌ ಗಾಂಧಿ ಅವರು ಕಾಂಗ್ರೆಸ್‌ನಲ್ಲಿ ಪ್ರಶ್ನಾತೀತ ಆಯ್ಕೆ. ಕಾಂಗ್ರೆಸ್‌ನಲ್ಲೇ ಕಾರ್ಯಕರ್ತರನ್ನು ಮತದಾರರನ್ನಾಗಿಸಿ ಚುನಾವಣೆ ನಡೆದರೆ ರಾಹುಲ್‌ ಅವರೇ ಆಯ್ಕೆಯಾಗುತ್ತಾರೆ ಎಂದು ತರೂರ್‌ ನುಡಿದರು.

ಕಳೆದ ತಿಂಗಳು ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ‘ಮುಂದಿನ ಚುನಾವಣೆಯಲ್ಲಿ ಮೈತ್ರಿಕೂಟ ಸರ್ಕಾರ ರಚಿಸಿದರೆ, ರಾಹುಲ್‌ ಗಾಂಧೀ ಅವರೇ ಪ್ರಧಾನಿಯಾಗಬೇಕು ಎಂದು ಕಾಂಗ್ರೆಸ್‌ ಎಲ್ಲೂ ಅಧಿಕೃತವಾಗಿ ಹೇಳಿಲ್ಲ. ಪಕ್ಷದ ಒಂದಿಬ್ಬರು ನಾಯಕರು ರಾಹುಲ್‌ ನಾಯಕತ್ವದ ಬಗ್ಗೆ ಮಾನತಾಡಿದಾಗ, ಅಂಥ ವಿಷಯದ ಬಗ್ಗೆ ಸದ್ಯಕ್ಕೆ ಚರ್ಚಿಸದಂತೆ ಪಕ್ಷದ ನಾಯಕತ್ವ ಸೂಚನೆ ರವಾನಿಸಿತ್ತು. ಮೊದಲು ಮೈತ್ರಿಕೂಟ ರಚನೆಯಾಗಬೇಕು, ಆ ಮೈತ್ರಿಕೂಟ ಗೆಲುವು ಸಾಧಿಸಬೇಕು ಮತ್ತು ಆ ಗೆದ್ದ ಪಕ್ಷಗಳೇ ಪ್ರಧಾನಿಯನ್ನು ಆರಿಸಬೇಕು ಎಂಬ ಸಂದೇಶವನ್ನು ರವಾನಿಸಲಾಗಿತ್ತು’ ಎಂದು ಚಿದಂಬರಂ ಹೇಳಿದ್ದರು.