ಬೆಂಗಳೂರು :  ಸಮ್ಮಿಶ್ರ ಸರ್ಕಾರ ರಚನೆ ವೇಳೆ ಒಪ್ಪಿಕೊಂಡಿದ್ದ ಮೂರನೇ ಒಂದು ಸ್ಥಾನಗಳನ್ನು ಹಂಚಿಕೊಳ್ಳುವ ಸೂತ್ರ ಲೋಕಸಭೆ ಚುನಾವಣಾ ಟಿಕೆಟ್‌ಗೂ ಅನ್ವಯವಾಗಬೇಕು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 10ರಿಂದ 11 ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ಅನ್ನು ಆಗ್ರಹಿಸಿದ್ದಾರೆ. ಈ ಮೂಲಕ ಲೋಕಸಭೆ
ಟಿಕೆಟ್ ಹಂಚಿಕೆ ವೇಳೆ ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ ಮಧ್ಯೆ ಮತ್ತೊಂದು ಸುತ್ತಿನ ಜಂಗೀ ಕುಸ್ತಿ ನಡೆಯುವ ಸಾಧ್ಯತೆ ದಟ್ಟವಾಗಿದೆ.

ದೆಹಲಿಯಲ್ಲಿರುವ ತಮ್ಮ ಸರ್ಕಾರಿ ನಿವಾಸದಲ್ಲಿ ಮಂಗಳವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಸಚಿವ ಸಂಪುಟ ರಚನೆ, ನಿಗಮ ಮಂಡಳಿ ನೇಮಕ ಸೇರಿ ಎಲ್ಲ ಪ್ರಕ್ರಿಯೆಗಳಲ್ಲೂ ಮೂರನೇ ಒಂದು ಸ್ಥಾನ ಜೆಡಿಎಸ್‌ಗೆ ನೀಡಬೇಕು ಎಂಬ ಸೂತ್ರವನ್ನು ಸಮ್ಮಿಶ್ರ ಸರ್ಕಾರ ರಚನೆ ಮಾಡುವಾಗ ಹೆಣೆಯಲಾಗಿತ ಅದರಂತೆ ಸಚಿವ ಸಂಪುಟ ರಚನೆ, ನಿಗಮ-ಮಂಡಳಿಗಳ ನೇಮಕ ನಡೆದಿದೆ. ಈಗ ಲೋಕಸಭಾ ಚುನಾವಣೆಗೂ ಈ ಸೂತ್ರವೇ ಅನ್ವಯವಾಗಬೇಕು. 

ಈ ಮೂಲಕ 10 ರಿಂದ 11 ಸ್ಥಾನಗಳು ಜೆಡಿಎಸ್‌ಗೆ ನೀಡಬೇಕು ಎಂದು ದೇವೇಗೌಡ ಅಭಿಪ್ರಾಯಪಟ್ಟರು. ಲೋಕಸಭೆ ಸೀಟ್ ಹಂಚಿಕೆ ಬಗ್ಗೆ ಕಾಂಗ್ರೆಸ್ ಜೊತೆಗೆ ಇನ್ನೂ ಮಾತುಕತೆ ನಡೆದಿಲ್ಲ. ಮೊದಲು ರಾಜ್ಯಮಟ್ಟದಲ್ಲಿ ಸಮನ್ವಯ ಸಮಿತಿ ಸಭೆ ನಡೆಯಬೇಕು. ಅಲ್ಲಿ ತೀರ್ಮಾನವಾದ ಬಳಿಕ ಕಾಂಗ್ರೆಸ್‌ನ ಹಿರಿಯ ನಾಯಕರಾದ ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್ ಮತ್ತಿತರರ ಜೊತೆ ಚರ್ಚಿಸಿ ನಿರ್ಧಾರವೊಂದಕ್ಕೆ ಬರಲಾಗುವುದು. 

ಈ ಎಲ್ಲ ಪ್ರಕ್ರಿಯೆಗಳನ್ನು ಜನವರಿಯೊಳಗೆ ಮುಗಿಸಿದರೆ ಒಳ್ಳೆಯದು. ಏಕೆಂದರೆ ಬಳಿಕ ಚುನಾವಣಾ ತಯಾರಿ ಕೆಲಸವಿದೆ ಎಂದು ದೇವೇಗೌಡ ತಿಳಿಸಿದರು. ಇದೇ ವೇಳೆ, ಈ ಹಿಂದೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರವಿದ್ದ ಸಂದರ್ಭದಲ್ಲೂ ಬಿಜೆಪಿಯವರು ನಮಗೆ ಹೆಚ್ಚಿನ ಸ್ಥಾನಮಾನ ನೀಡಿದ್ದರು ಎಂದು ಸ್ಮರಿಸಿದರು.