ಬೆಂಗಳೂರು :  ಕಾಂಗ್ರೆಸ್‌ನ ಹಾಲಿ ಸಂಸದರಾದ ವೀರಪ್ಪ ಮೊಯ್ಲಿ, ಕೆ.ಎಚ್‌.ಮುನಿಯಪ್ಪ, ಮುದ್ದಹನುಮೇಗೌಡರು ಪ್ರತಿನಿಧಿಸುವ ಕ್ಷೇತ್ರಗಳು ಸೇರಿದಂತೆ ಹಳೇ ಮೈಸೂರು ಭಾಗದ ಕೈ ಬಲಾಢ್ಯವುಳ್ಳ ಕ್ಷೇತ್ರಗಳತ್ತ ಜೆಡಿಎಸ್‌ ಕಣ್ಣು ಹಾಕಿದ್ದು, ಲೋಕಸಭೆ ಚುನಾವಣೆಯ ಸೀಟು ಹಂಚಿಕೆಯಲ್ಲಿ ಈ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಕಾಂಗ್ರೆಸ್‌ ವರಿಷ್ಠರ ಮೇಲೆ ಒತ್ತಡ ಹೇರುವಂತೆ ಮಂಗಳವಾರ ನಡೆದ ಜೆಡಿಎಸ್‌ ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕರು ಒತ್ತಾಯಿಸಿದ್ದಾರೆ.

ಆದರೆ, ಹಾಲಿ ಕಾಂಗ್ರೆಸ್‌ ಸದಸ್ಯರಿರುವ ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡುವಂತೆ ಕೇಳುವುದು ಅಷ್ಟುಸುಲಭವಲ್ಲ. ಇದನ್ನು ಉಭಯ ಪಕ್ಷಗಳ ನಾಯಕರು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುತ್ತೇವೆ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರು ತಮ್ಮ ಶಾಸಕರಿಗೆ ಸಮಾಧಾನದ ಮಾತು ಹೇಳಿದ್ದಾರೆ.

ಮೈಸೂರು, ಮಂಡ್ಯ, ಹಾಸನ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಶಿವಮೊಗ್ಗ, ಬೀದರ್‌, ವಿಜಯಪುರ ಸೇರಿದಂತೆ ಸುಮಾರು 12 ಲೋಕಸಭಾ ಕ್ಷೇತ್ರಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಬಗ್ಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಜತೆ ಚರ್ಚಿಸಿ ಒತ್ತಡ ಹೇರಬೇಕು ಎಂದು ಶಾಸಕರು ಸಭೆಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ.

ರಾಜ್ಯಮಟ್ಟದ ಕಾಂಗ್ರೆಸ್‌ ನಾಯಕರ ಜತೆ ಮಾತುಕತೆ ನಡೆಸುವುದಕ್ಕಿಂತ ನೇರವಾಗಿ ರಾಹುಲ್‌ ಗಾಂಧಿ ಜತೆ ಸಮಾಲೋಚನೆ ನಡೆಸುವುದು ಸೂಕ್ತ. ಲೋಕಸಭೆ ಚುನಾವಣೆಯಲ್ಲಿ ಒಮ್ಮತದ ಸೀಟು ಹಂಚಿಕೆ ಮಾಡಿಕೊಳ್ಳಬೇಕು ಎಂಬ ಸಲಹೆಗಳು ಸಭೆಯಲ್ಲಿ ವ್ಯಕ್ತವಾದವು.

ಶಾಸಕರ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡಿದ ದೇವೇಗೌಡರು, ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ನ ಹಾಲಿ ಸಂಸದರು ಇದ್ದಾರೆ. ಅವರನ್ನು ಬದಲಿಸುವಂತೆ ಕೇಳುವುದು ಸಮಂಜಸವಲ್ಲ. ಬದಲಿಗೆ ಸರ್ಕಾರದ ಮಟ್ಟದಲ್ಲಿ ಸಚಿವ ಸ್ಥಾನ ಹಂಚಿಕೆ ಮಾಡಿಕೊಂಡಂತೆ ಮೂರನೇ ಒಂದು ಭಾಗವನ್ನು ಜೆಡಿಎಸ್‌ಗೆ ನೀಡುವಂತೆ ಕೇಳುವುದು ಸೂಕ್ತ. ಹಳೇ ಮೈಸೂರು ಭಾಗದಲ್ಲಿ ಮಾತ್ರವಲ್ಲ, ಉತ್ತರ ಕರ್ನಾಟಕದಲ್ಲಿಯೂ ಜೆಡಿಎಸ್‌ ಪ್ರಾಬಲ್ಯ ಹೊಂದಿದೆ. ಹೀಗಾಗಿ ಆ ಭಾಗದ ಕೆಲವು ಕ್ಷೇತ್ರಗಳನ್ನು ನೀಡುವಂತೆ ಕೋರುವುದು ಸೂಕ್ತ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದು ತಿಳಿದುಬಂದಿದೆ.

ಅಂತಿಮವಾಗಿ ಲೋಕಸಭೆ ಚುನಾವಣೆಯ ಸೀಟು ಹಂಚಿಕೆಯ ವಿಚಾರವನ್ನು ಅಂತಿಮಗೊಳಿಸುವ ತೀರ್ಮಾನವನ್ನು ಜೆಡಿಎಸ್‌ ಎಚ್‌.ಡಿ.ದೇವೇಗೌಡರ ಹೆಗಲಿಗೆ ಪಕ್ಷದ ಮುಖಂಡರು ಹಾಕಿದರು. ದೇವೇಗೌಡರ ತೀರ್ಮಾನವೇ ಅಂತಿಮ. ಈ ವಿಚಾರದಲ್ಲಿ ಯಾರು ಮಧ್ಯಪ್ರವೇಶಿಸುವುದಿಲ್ಲ ಎಂಬ ಭರವಸೆಯನ್ನು ನೀಡಿದರು ಎಂದು ಹೇಳಲಾಗಿದೆ.