ಹೈದರಾಬಾದ್(ನ.11): ಒಂದೇ ಟ್ರ್ಯಾಕ್‌ನಲ್ಲಿ ಸಂಚರಿಸಿದ ಪರಿಣಾಮ 2 ರೈಲು ಮುಖಾಮುಖಿ ಡಿಕ್ಕಿಯಾದ ಘಟನೆ ಹೈದರಾಬಾದ್ ಸಮೀಪದ ಕಚೇಗುಡಾ ರೈಲ್ವೇ ನಿಲ್ದಾಣದಲ್ಲಿ ಬೆಳಗ್ಗೆ 10.30ಕ್ಕೆ ನಡೆದಿದೆ. ಅಪಘಾತದದಲ್ಲಿ 12 ಮಂದಿಗೆ ಗಾಯಗೊಂಡಿದ್ದು, ಸಮೀಪದ ಒಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ: ಪ್ರಯಾಣಿಕರೇ ಗಮನಿಸಿ; ಯಲಚೇನಹಳ್ಳಿ- ಆರ್‌ವಿ ರೋಡ್ ಮೆಟ್ರೋ ರೈಲು 4 ದಿನ ಸ್ಥಗಿತ!

ಕಚೇಗುಡಾ ರೈಲ್ವೇ ನಿಲ್ದಾಣದಲ್ಲಿನ ಸಿಗ್ನಲ್ ವ್ಯವಸ್ಥೆ ಸಮರ್ಕವಾಗಿರದ ಕಾರಣ, ಎರಡು ರೈಲು ಒಂದೇ ಹಳಿಯಲ್ಲಿ ಸಂಚರಿಸಿದೆ. ಮುಖಾಮುಖಿ ಡಿಕ್ಕಿಯಿಂದ ರೈಲು ಚಾಲಕ ಸೇರಿದಂತೆ 12 ಮಂದಿ ಗಾಯಗೊಂಡಿದ್ದಾರೆ.  ನಿಲ್ದಾಣವಾದ ಕಾರಣ ರೈಲಿನ ವೇಗ ಕಡಿಮೆ ಇತ್ತು. ಹೀಗಾಗಿ ಹೆಚ್ಚಿನ ಅನಾಹುತ ಸಂಭವಿಸಿಲ್ಲ.

ಇದನ್ನೂ ಓದಿ: ಶೀಘ್ರ ಶಿವಮೊಗ್ಗದಿಂದ ಮತ್ತೊಂದು ಹೊಸ ರೈಲು.

ಘಟನೆ ನಡೆದ ತಕ್ಷಣವೇ ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಮುಖಾಮುಖಿ ಡಿಕ್ಕಿಯಿಂದ  ರೈಲು ಚಾಲಕ ಕೆಲ ಹೊತ್ತು ಅಪಘಾತದ ನಡುವೆ ಸಿಲುಕಿಕೊಂಡಿದ್ದ. ಬಳಿಕ ರಕ್ಷಣಾ ಕಾರ್ಯದಲ್ಲಿ ಅಧಿಕಾರಿಗಳು ಚಾಲಕನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಿದ್ದಾರೆ. ಇನ್ನು ಘಟನೆ ಕುರಿತು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್, ಸ್ಥಳೀಯ ರೈಲ್ವೇ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಗಾಯಗೊಂಡವರಿಗೆ ಚಿಕಿತ್ಸೆ ಹಾಗೂ ಎಲ್ಲಾ ರೀತಿಯ ನೆರವು ನೀಡಲು ಗೋಯಲ್ ಸೂಚಿಸಿದ್ದಾರೆ. ಈ ಕುರಿತು ಪಿಯೂಷ್ ಗೋಯಲ್ ಟ್ವೀಟ್ ಮೂಲಕ ಖಚಿತಪಡಿಸಿದ್ದಾರೆ.

ಎಂಎಂಟಿಎಸ್ ರೈಲು ಲಿಂಗಂಪಲ್ಲಿಯಿಂದ ಫಲ್ಕುನಮಾಗೆ ಸಂಚರಿಸುತ್ತಿತ್ತು. ಇತ್ತ ಇದೇ ಹಳಿಯಲ್ಲಿ ಕರ್ನೂಲ್‌ನಿಂದ ಸಿಕಂದರಾಬಾದ್ ಎಕ್ಸ್‌ಪ್ರೆಸ್ ರೈಲು ತೆರಳುತ್ತಿತ್ತು. ಕಚೇಗುಡಾ ರೈಲು ನಿಲ್ದಾಣದಲ್ಲಿ ಎರಡು ರೈಲುಗಳು ಮುಖಾಮುಖಿ ಡಿಕ್ಕಿಯಾಗಿದೆ.  ಎಂಎಂಟಿಎಸ್ ರೈಲಿನ 6 ಬೋಗಿಗಳು ಹಾಗೂ ಎಕ್ಸ್ ಪ್ರೆಸ್ ರೈಲಿನ 3 ಬೋಗಿಗಳು ಅಪಘಾತದಿಂದ ನಜ್ಜು ಗುಜ್ಜಾಗಿದೆ.  ರೈಲು ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ಬಹಿರಂಗಗೊಂಡಿದೆ.