ಬೆಂಗಳೂರು(ಸೆ. 07): ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ದಶಕಗಳಿಂದ ಬಂದಿರುವ ನ್ಯಾಯತೀರ್ಮಾನಗಳು ಕರ್ನಾಟಕಕ್ಕೆ ನಿರಾಶೆ ತರುತ್ತಲೇ ಇವೆ. ನ್ಯಾಯಾಲಯದಲ್ಲಿ ಕರ್ನಾಟಕದ ಪರವಾಗಿ ಯಾಕೆ ಒಂದೂ ತೀರ್ಪು ಬರಲಿಲ್ಲ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ. ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ಮಾಡಿದ ತಪ್ಪೇನು? ರೈತರಿಗೆ ಬೆಳೆ ಬೆಳೆಯಬೇಡಿ ಎಂದಿದ್ದ ಸರ್ಕಾರ ಸುಪ್ರೀಂಕೋರ್ಟ್‌'ಗೆ ನಮ್ಮಲ್ಲಿ ನೀರಿಲ್ಲ ಎಂದು ಮನವರಿಕೆ ಮಾಡಿಕೊಡುವಲ್ಲಿ ಮಾಡಿದ ಯಡವಟ್ಟು ಏನು? ಮೈಸೂರು, ಮಂಡ್ಯ, ರಾಮನಗರ ಮತ್ತು ಬೆಂಗಳೂರು ಜನರಿಗಿದ್ದ ಕುಡಿಯೋ ನೀರಿನ್ನೂ, ತಮಿಳುನಾಡಿಗೆ ನೀರು ಬಿಡಬೇಕಾದ ಪರಿಸ್ಥಿತಿ ಬಂದದ್ದು ಯಾಕೆ?

ಕರ್ನಾಟಕ ಸರ್ಕಾರ ಎಡವಿದ್ದೆಲ್ಲಿ?
1) ಪ್ರತಿನಿತ್ಯ 10 ಸಾವಿರ ಕ್ಯೂಸೆಕ್ ನೀರು ಬಿಡೋದಾಗಿ ಕರ್ನಾಟಕ ವಾದ ಮಂಡಿಸಿದ್ದೇ ತಪ್ಪಾಯ್ತಾ?
2) ಕಾವೇರಿ ಮೇಲ್ವಿಚಾರಣಾ ಸಮಿತಿ ಅಸ್ತಿತ್ವದಲ್ಲಿರುವಾಗ ಸುಪ್ರೀಂಕೋರ್ಟ್ ನಲ್ಲಿ ಸರ್ಕಾರ ನೀರು ಬಿಡಲು ಒಪ್ಪುವ ಅಗತ್ಯವೇನಿತ್ತು?
3) ಮೇಲ್ವಿಚಾರಣಾ ಸಮಿತಿ ಇರುವಾಗ ನೀರು ಬಿಡಲು ಆದೇಶಿಸುವ ಅಧಿಕಾರ ಸುಪ್ರೀಂಕೋರ್ಟ್‌ಗೆ ಇದೆಯೇ?
4) ರಾಜ್ಯದಲ್ಲಿ ಈ ಬಾರಿ ಕುಡಿಯಲು ಮಾತ್ರ ಕಾವೇರಿ ನದಿ ನೀರು ಬಳಕೆ ಮಾಡೋ ವಾದವನ್ನು ಸಮರ್ಥವಾಗಿ ಮಂಡಿಸಿಲ್ಲವಾ?
5) ನಮ್ಮ ರಾಜ್ಯದಲ್ಲಿ ಮುಂಗಾರು ಬೆಳೆಗೆ ನೀರು ಬಿಡುವ ಪರಿಸ್ಥಿತಿಯಿಲ್ಲ ಅನ್ನುವುದನ್ನು ಸುಪ್ರೀಂಕೋರ್ಟ್‌ಗೆ ಮನವರಿಕೆ ಮಾಡಿಕೊಡಲಿಲ್ಲವಾ?
6) ಹಿಂದೆ ಜಯಲಲಿತಾ ಪರ ವಕೀಲರಾಗಿದ್ದ ನ್ಯಾ.ಉದಯ್ ಲಲಿತ್ ಈಗ ಕಾವೇರಿ ವಿವಾದದ ವಿಚಾರಣೆಯಿಂದ ಹಿಂದೆ ಸರಿಯಬೇಕಿತ್ತೇ?
7) ತಮಿಳುನಾಡಿನಿಂದ ಕರ್ನಾಟಕಕ್ಕೆ ರೈತರ ತಂಡ ಬಂದಿತ್ತು.. ಆದ್ರೆ ರಾಜ್ಯದಿಂದ ವಸ್ತುಸ್ಥಿತಿ ಅಧ್ಯಯನಕ್ಕೆ ತಮಿಳುನಾಡಿಗೆ ತಂಡ ಕಳಿಸಿಲ್ಲವೇಕೆ?
8) ಮೆಟ್ಟೂರು ಜಲಾಶಯದಲ್ಲಿ ಆಗಸ್ಟ್ ಅಂತ್ಯಕ್ಕೆ 35.17 ಟಿಎಂಸಿ ನೀರಿದ್ದರೂ ಈಗಲೇ 12 ಟಿಎಂಸಿ ನೀರು ಬಿಡುವ ತುರ್ತು ಏನಿತ್ತು?
9) ತಮಿಳುನಾಡಿನ ಹಿಂದಿನ ಮುಖ್ಯಕಾರ್ಯದರ್ಶಿ ಪತ್ರದಂತೆ ರೈತರ ಬೆಳೆಗೆ ದಿನಕ್ಕೆ 1 ಟಿಎಂಸಿ ನೀರು ಸಾಕು. ಹೀಗಿದ್ದಾಗ ಒಂದು ತಿಂಗಳ ನೀರು ಲಭ್ಯವಿದ್ದರೂ ಈಗಲೇ ನೀರು ಬಿಡಬೇಕಿದ್ದ ಅವಶ್ಯಕತೆಯೇನು?
10) ನೀರಾವರಿ ವಿಚಾರದಲ್ಲಿ ಪದೇ ಪದೇ ವಿಫಲವಾಗುತ್ತಿರುವ ರಾಜ್ಯದ ಪರ ವಕೀಲರ ತಂಡವನ್ನು ಬದಲಿಸಲು ಇದು ಸಕಾಲವೇ?

ಹೀಗೆ ಉತ್ತರವಿಲ್ಲದ ಹಲವು ಪ್ರಶ್ನೆಗಳು ಕರ್ನಾಟಕದ ಜನತೆಯನ್ನ ಕಾಡುತ್ತಿವೆ.. ಇದಕ್ಕೆಲ್ಲ ಉತ್ತರ ಯಾವಾಗ ಸಿಗುತ್ತೋ.. ಅಷ್ಟರಲ್ಲಿ ಕಾವೇರಿಯ ಬಯಲು ಬರಿದಾಗುವುದರಲ್ಲಿ ಸಂಶಯವೇ ಇಲ್ಲ...

- ನ್ಯೂಸ್ ಡೆಸ್ಕ್, ಸುವರ್ಣನ್ಯೂಸ್