ಕೊಡಗಿನಲ್ಲಿ ಸಂಭವಿಸಿದ ಭಾರೀ ಪ್ರಾಕೃತಿಕ ವಿಕೋಪದಲ್ಲಿ ಮನೆಮಾರು ಕಳೆದುಕೊಂಡು ಬರಿಗೈಯಲ್ಲಿ ನಿರಾಶ್ರಿತರ ಕೇಂದ್ರ ಸೇರಿದ ಕುಟುಂಬಗಳ ಮದುವೆಗೆ ಇದೀಗ ನೆರವು ನೀಡಲು ಲಯನ್ಸ್ ಕ್ಲಬ್ ಮುಂದಾಗಿದೆ.

ಮಡಿಕೇರಿ: ಮಗಳ ಮದುವೆಗೆ ಇನ್ನೇನು ವಾರ ಇದೆ ಎನ್ನುವಾಗ ಕೊಡಗಿನಲ್ಲಿ ಸಂಭವಿಸಿದ ಭಾರೀ ಪ್ರಾಕೃತಿಕ ವಿಕೋಪದಲ್ಲಿ ಮನೆಮಾರು ಕಳೆದುಕೊಂಡು ಬರಿಗೈಯಲ್ಲಿ ನಿರಾಶ್ರಿತರ ಕೇಂದ್ರ ಸೇರಿದ ಬೇಬಿ ಅವರ ನೋವಿನ ಧ್ವನಿ ಸಹೃದಯಿಗಳ ಹೃದಯ ತಟ್ಟಿದೆ. ಈ ಹಿಂದೆ ನಿಶ್ಚಯಿಸಿದ ದಿನದಂದೇ ಬೇಬಿ ಅವರ ಪುತ್ರಿಯ ಮದುವೆ ನಡೆಸಲು ಎಲ್ಲಾ ರೀತಿಯ ನೆರವು ನೀಡುವುದಾಗಿ ಲಯನ್ಸ್‌ ಕ್ಲಬ್‌ನವರು ಭರವಸೆ ನೀಡಿದ್ದಾರೆ.

ಮಡಿಕೇರಿ ತಾಲೂಕಿನ ಮಕ್ಕಂದೂರಿನ ರಾಟೆಮನೆ ಪೈಸಾರಿಗೆಯ ನಿವಾಸಿ ಬೇಬಿ ಅವರ ಪುತ್ರಿ ಮಂಜುಳಾಗೆ ಆ.26ರಂದು ಮಕ್ಕಂದೂರಿನಲ್ಲಿ ವಿವಾಹ ನಿಶ್ಚಯವಾಗಿತ್ತು. ಆದರೆ ಕಳೆದ ವಾರ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ಬೇಬಿ ಕುಟುಂಬ ಇದ್ದ ಮನೆ, ಕೂಡಿಟ್ಟಿದ್ದ ಹಣ, ಒಡವೆಯನ್ನು ಕಳೆದುಕೊಂಡು ಬರಿಗೈಯಲ್ಲೇ ಮಡಿಕೇರಿಯ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುವಂತಾಯಿತು. ಇದೀಗ ದಾನಿಗಳ ನೆರವಿನಿಂದ ನಿಗದಿಯಾದ ದಿನದಂದೇ ಕೇರಳದ ರಜೀಶ್‌ನೊಂದಿಗೆ ಮಡಿಕೇರಿಯ ಓಂಕಾರೇಶ್ವರ ದೇವಾಲಯದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ.

ಕನ್ನಡಪ್ರಭ ವರದಿ ಪರಿಣಾಮ: ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಬೇಬಿ ಅವರ ನೋವಿನ ಕಥೆ ‘ಮಗಳ ಮದುವೆಗೆ 5 ದಿನ ಇದೆ, ಏನು ಮಾಡಲಿ?’ ಎಂಬ ಶೀರ್ಷಿಕೆಯಡಿ ‘ಕನ್ನಡಪ್ರಭ’ದಲ್ಲಿ ಆ.21ರಂದು ವಿಶೇಷ ವರದಿ ಪ್ರಕಟಗೊಂಡಿತ್ತು. ಇದನ್ನು ಗಮನಿಸಿದ ಮಡಿಕೇರಿ ಲಯನ್ಸ್‌ ಕ್ಲಬ್‌ ಪದಾಧಿಕಾರಿಗಳು ಬೇಬಿ ಅವರ ನೋವಿಗೆ ಸ್ಪಂದಿಸಲು ಮುಂದೆ ಬಂದಿದ್ದಾರೆ. ಮಡಿಕೇರಿಯ ಲಯನ್ಸ್‌ ಕ್ಲಬ್‌ ಅಧ್ಯಕ್ಷ ದಾಮೋದರ್‌, ಸದಸ್ಯ ಕೆ.ಟಿ. ಬೇಬಿ ಮ್ಯಾಥ್ಯು ಹಾಗೂ ಸೇವಾ ಭಾರತಿಯ ಪ್ರಮುಖರು ಮದುವೆಗೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ. ಬುಧವಾರ ಮಡಿಕೇರಿಯ ಪರಿಹಾರ ಕೇಂದ್ರದಲ್ಲಿ ವಧುವಿನ ಕುಟುಂಬವನ್ನು ಭೇಟಿ ಮಾಡಿದ ಲಯನ್ಸ್‌ ಪದಾಧಿಕಾರಿಗಳು ವಿವಾಹದ ಖರ್ಚುವೆಚ್ಚಗಳನ್ನು ಭರಿಸುವುದಾಗಿ ತಿಳಿಸಿದ್ದಾರೆ.

ಸುಮಿತ್ರಾ ಪುತ್ರಿ ಮದುವೆಗೂ ನೆರವು

ಮಂಜುಳಾ ಮಾತ್ರವಲ್ಲದೆ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಮತ್ತೊಬ್ಬ ಯುವತಿಯ ವಿವಾಹಕ್ಕೂ ನೆರವು ನೀಡಲೂ ದಾನಿಗಳು ಮುಂದೆ ಬಂದಿದ್ದಾರೆ.

ಮಕ್ಕಂದೂರಿನ ರಾಟೆಮನೆ ಪೈಸಾರಿಯ ಸುಮಿತ್ರಾ ಅವರ ಪುತ್ರಿ ರಂಜಿತಾಗೆ ಕೇರಳದ ಯುವಕನೊಂದಿಗೆ ಸೆ.2ರಂದು ಮದುವೆ ಮಾಡಿಕೊಡಲು ನಿಶ್ಚಯ ಮಾಡಲಾಗಿತ್ತು. ಮಗಳ ಮದುವೆಗಾಗಿ ಸುಮಿತ್ರಾ ಅವರು ತಾವು ಕೆಲಸ ಮಾಡುತ್ತಿದ್ದ ತೋಟದ ಮಾಲೀಕರ ಬಳಿ ಸಾಲವನ್ನೂ ಮಾಡಿಕೊಂಡಿದ್ದರು. ಒಂದಷ್ಟುಒಡವೆಗಳನ್ನೂ ಮಾಡಿಸಿಟ್ಟುಕೊಂಡಿದ್ದರು. ಈಗ ಸುಮಿತ್ರಾ ಅವರ ಕುಟುಂಬ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದಿದೆ. ಪುತ್ರಿಯ ಮದುವೆ ಮಾಡುವುದು ಹೇಗೆನ್ನುವ ಚಿಂತೆಯಲ್ಲಿದೆ. ಸೇವಾ ಭಾರತಿ ಸಂಸ್ಥೆಯವರು ಈಗ ರಂಜಿತಾಳ ಮದುವೆಗೂ ನೆರವು ನೀಡುವ ಭರವಸೆ ನೀಡಿದ್ದಾರೆ.

ಮನೆ ಕಳೆದುಕೊಂಡು ನಿರಾಶ್ರಿತರ ಕೇಂದ್ರದಲ್ಲಿದ್ದ ಮಂಜುಳಾ ವಿವಾಹ ಆ.26ರಂದು ನಿಗದಿಯಾಗಿದೆ. ಆದರೆ ಮಹಾ ಮಳೆಯಿಂಯಾಗಿ ಆಕೆಯ ಕುಟುಂಬ ಎಲ್ಲವನ್ನೂ ಕಳೆದುಕೊಂಡಿದೆ. ಈಗ ಅವರ ಬಳಿ ಏನೂ ಇಲ್ಲ ಎಂದು ಕನ್ನಡಪ್ರಭ ಪತ್ರಿಕೆ ಓದಿ ತಿಳಿಯಿತು. ಇದರಿಂದ ನಾವು ಲಯನ್ಸ್‌ ಕ್ಲಬ್‌ ವತಿಯಿಂದ ಆಕೆಯ ವಿವಾಹಕ್ಕೆ ನೆರವು ನೀಡಲು ಮುಂದೆ ಬಂದಿದ್ದೇವೆ.

- ಕೆ.ಟಿ. ಬೇಬಿ ಮ್ಯಾಥ್ಯು, ಸದಸ್ಯ ಲಯನ್ಸ್‌ ಕ್ಲಬ್‌ ಮಡಿಕೇರಿ

‘ನಮ್ಮ ನಿರಾಶ್ರಿತರ ಕೇಂದ್ರದಲ್ಲಿರುವ ವಧುವಿಗೆ ನಿಗದಿಯಾದ ದಿನದಂದೇ ವಿವಾಹ ಮಾಡಲು ನಾವು ಸಿದ್ಧರಿದ್ದೇವೆ. ಅಲ್ಲದೆ ಸೆ.2ಕ್ಕೆ ಮತ್ತೊಬ್ಬಳು ವಧುವಿನ ವಿವಾಹವೂ ನಿಶ್ಚಯವಾಗಿದೆ. ಆಕೆಯ ವಿವಾಹವನ್ನೂ ಮಾಡಿಸುತ್ತೇವೆ.

- ಮಹೇಶ್‌, ಪ್ರಮುಖ್‌, ಸೇವಾ ಭಾರತಿ, ಮಡಿಕೇರಿ