Asianet Suvarna News Asianet Suvarna News

ಲಿಂಗಾಯತ ಧರ್ಮ : ಇಂದು ಮಹತ್ವದ ಸಭೆ

ವೀರಶೈವ ಹಾಗೂ ಲಿಂಗಾಯತ ಸಮುದಾಯಗಳ ನಡುವಿನ ಧರ್ಮ ಸಂಘರ್ಷ ಬಗೆಹರಿಸುವ ನಿಟ್ಟಿನಲ್ಲಿ ಪ್ರತ್ಯೇಕ ಧರ್ಮದ ಸ್ಥಾನಮಾನ ಬೇಡಿಕೆ ಕುರಿತಂತೆ ಅಧ್ಯಯನ ನಡೆಸಲು ರಾಜ್ಯ ಅಲ್ಪಸಂಖ್ಯಾತರ ಆಯೋಗ ರಚಿಸಿರುವ ತಜ್ಞರ ಸಮಿತಿಯ ಮೊದಲ ಸಭೆ ಇಂದು ನಡೆಯಲಿದೆ.

Lingayat Religion Meeting Today

ಬೆಂಗಳೂರು(ಜ.06): ವೀರಶೈವ ಹಾಗೂ ಲಿಂಗಾಯತ ಸಮುದಾಯಗಳ ನಡುವಿನ ಧರ್ಮ ಸಂಘರ್ಷ ಬಗೆಹರಿಸುವ ನಿಟ್ಟಿನಲ್ಲಿ ಪ್ರತ್ಯೇಕ ಧರ್ಮದ ಸ್ಥಾನಮಾನ ಬೇಡಿಕೆ ಕುರಿತಂತೆ ಅಧ್ಯಯನ ನಡೆಸಲು ರಾಜ್ಯ ಅಲ್ಪಸಂಖ್ಯಾತರ ಆಯೋಗ ರಚಿಸಿರುವ ತಜ್ಞರ ಸಮಿತಿಯ ಮೊದಲ ಸಭೆ ಇಂದು ನಡೆಯಲಿದೆ.

ನಿವೃತ್ತ ನ್ಯಾಯಾಧೀಶ ನ್ಯಾ.ಎಚ್. ಎನ್.ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಈ ಸಮಿತಿಯ ಸಭೆ ಬೆಳಗ್ಗೆ  11ಕ್ಕೆ ವಿಕಾಸಸೌಧದಲ್ಲಿ ನಿಗದಿಯಾಗಿದೆ. ಸಿ.ಎಸ್. ದ್ವಾರಕಾನಾಥ್, ಎಸ್.ಜಿ. ಸಿದ್ದರಾಮಯ್ಯ, ಮುಜಾಫರ್ ಅಸಾದಿ, ಪುರುಷೋತ್ತಮ ಬಿಳಿಮಲೆ, ರಾಮಕೃಷ್ಣ ಮರಾಠೆ ಹಾಗೂ ಸರಜೂ ಕಾಟ್ಕರ್ ಅವರು ಈ ಸಮಿತಿಯ ಸದಸ್ಯರಾಗಿದ್ದಾರೆ. ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ನಡುವೆ ಉಂಟಾಗಿರುವ ಭಿನ್ನಾಭಿಪ್ರಾಯ ಹಾಗೂ ಹೊಸ ಧರ್ಮದ ಮಾನ್ಯತೆ ನೀಡುವ ವಿಚಾರವಾಗಿ ಈ ಸಮಿತಿ ಅಧ್ಯಯನ ನಡೆಸಲಿದೆ.

ಒಂದು ತಿಂಗಳ ಒಳಗಾಗಿ ವರದಿ ನೀಡುವಂತೆ ಆಯೋಗ ಸೂಚಿಸಿದೆ. ಶನಿವಾರ ನಡೆಯುವ ಮೊದಲ ಸಭೆಯ ಬಳಿಕ ವೀರಶೈವ ಮತ್ತು ಲಿಂಗಾಯತ ಸಮುದಾಯಗಳ ಮುಖಂಡರನ್ನೂ ಆಹ್ವಾನಿಸಿ ಸಮಿತಿಯು ಅಭಿಪ್ರಾಯ ಪಡೆಯುವ ಸಾಧ್ಯತೆಗಳಿವೆ. ಆದರೆ ಸ್ವತಂತ್ರ ಧರ್ಮ ವಿಚಾರವನ್ನು ರಾಜ್ಯ ಸರ್ಕಾರ ಆಯೋಗಕ್ಕೆ ಶಿಫಾರಸು ಮಾಡಿರುವುದು ಹಾಗೂ ಆಯೋಗ ತಜ್ಞರ ಸಮಿತಿ ರಚಿಸಿರುವುದನ್ನು ಈಗಾಗಲೇ ಅಖಿಲ ಭಾರತ ವೀರಶೈವ ಮಹಾಸಭೆಯು ತೀವ್ರವಾಗಿ ವಿರೋಧಿಸಿದೆ. ಶನಿವಾರ ನಡೆಯುವ ತಜ್ಞರ ಸಮಿತಿಗೆ ಯಾವುದೇ ಮಾನ್ಯತೆ ಇಲ್ಲ. ಈ ಸಮಿತಿ ಆಯೋಗಕ್ಕೆ ನೀಡುವ ವರದಿ ಹಾಗೂ ಆಯೋಗ ಸರ್ಕಾರಕ್ಕೆ ನೀಡುವ ಶಿಫಾರಸನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಮಹಾಸಭೆ ಹೇಳಿದೆ.

ಆದರೆ ಸಚಿವ ಎಂ.ಬಿ.ಪಾಟೀಲ್ ನೇತೃತ್ವದ ಲಿಂಗಾಯತ ಸ್ವತಂತ್ರ ಹೋರಾಟ ಸಮಿತಿಯು ಸರ್ಕಾರದ ನಿಲುವನ್ನು ಸ್ವಾಗತಿಸಿದ್ದು, ಯಾವುದೇ ಸಂದರ್ಭದಲ್ಲೂ ತಜ್ಞರ ಸಮಿತಿ ಎದುರು ತನ್ನ ಅಭಿಪ್ರಾಯ ಮಂಡಿಸಲು ಸಿದ್ಧವಿರುವುದಾಗಿ ಪ್ರಕಟಿಸಿದೆ.

ತಜ್ಞರ ಸಮಿತಿಯಲ್ಲಿ ಈ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಗಳಿವೆ. ವೀರಶೈವ ಹಾಗೂ ಲಿಂಗಾಯತ ಧರ್ಮದ ತಳಹದಿ, ಈ ಪೈಕಿ ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಅನುಸರಿಸಬೇಕಾದ ನಿಯಮಗಳು, ಈ ಧರ್ಮಕ್ಕೆ ಇರುವ ಹಿನ್ನೆಲೆ ಮತ್ತಿತರ ವಿಷಯಗಳ ಕುರಿತು ವರದಿ ತಯಾರಿಸಲು ಅನುಸರಿಸಬೇಕಾದ ರೂಪುರೇಷೆ ಸಭೆಯಲ್ಲಿ ನಿರ್ಧಾರವಾಗಲಿದೆ ಎಂದು ಸಮಿತಿಯ ಉನ್ನತ ಮೂಲಗಳು ಹೇಳಿವೆ.

Follow Us:
Download App:
  • android
  • ios