Asianet Suvarna News Asianet Suvarna News

ಜಾರಕಿಹೊಳಿ ಸಹೋದರರಿಗೆ ಸಡ್ಡು ಹೊಡೆಯಲು ಲಕ್ಷ್ಮೀಗೆ ಬೆಂಬಲ

ಜಾರಕಿಹೊಳಿ ಸಹೋದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಜಗಳ ಇದೀಗ ತಾರಕಕ್ಕೇರಿದೆ. ಈ ನಿಟ್ಟಿನಲ್ಲಿ ಜಾರಕಿಹೊಳಿ ಸಹೋದರರನ್ನು ಮಣಿಸಲು ಲಿಂಗಾಯತ ನಾಯಕರು ಹಾಗೂ ಮರಾಠ ನಾಯಕರು ಇದೀಗ ಲಕ್ಷ್ಮಿಗೆ ಬೆಂಬಲ ನೀಡಲು ಮುಂದಾಗಿದ್ದಾರೆ. 

Lingayat Leaders Support Lakshmi Hebbalkar
Author
Bengaluru, First Published Sep 6, 2018, 9:01 AM IST

ಬೆಂಗಳೂರು :  ರಾಜ್ಯ ಸರ್ಕಾರದ ಬುಡ ಅಲುಗಾಡಿಸುವಂತೆ ನಡೆದಿರುವ ಬೆಳಗಾವಿ ಕಾಂಗ್ರೆಸ್‌ ನಾಯಕರ ಮೇಲಾಟ ಕೇವಲ ತಾಲೂಕು ಮಟ್ಟದ ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ನ ಚುನಾವಣೆಯಲ್ಲಿ ಅಧಿಕಾರ ಹಿಡಿಯುವ ಕಾರಣಕ್ಕಷ್ಟೇ ನಡೆದ ಸಂಘರ್ಷವಲ್ಲ. ಯಾವುದೇ ಸರ್ಕಾರವಿದ್ದರೂ ಬೆಳಗಾವಿ ಜಿಲ್ಲಾ ರಾಜಕಾರಣವನ್ನು ಹತೋಟಿಗೆ ತೆಗೆದುಕೊಳ್ಳುವ ನಾಯಕ ಸಮುದಾಯದ ಜಾರಕಿಹೊಳಿ ಸಹೋದರರ ಪ್ರಾಬಲ್ಯ ಮಣಿಸಲು ಪಕ್ಷಭೇದ ಮರೆತ ಬೆಳಗಾವಿ ಲಿಂಗಾಯತ ಹಾಗೂ ಮರಾಠ ಸಮುದಾಯಗಳ ನಾಯಕರು ಒಗ್ಗೂಡಿರುವುದರ ಸಂಕೇತ ಎಂದೂ ವ್ಯಾಖ್ಯಾನಿಸಲಾಗುತ್ತಿದೆ.

ಪ್ರಾಥಮಿಕ ಭೂ ಅಭಿವೃದ್ಧಿ ಬ್ಯಾಂಕ್‌ಗೆ ಸಾಮಾನ್ಯವಾಗಿ ತಮ್ಮ ಬೆಂಬಲಿಗರು ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಳ್ಳುತ್ತಿದ್ದ ಜಾರಕಿಹೊಳಿ ಸಹೋದರರಿಗೆ ಇದೇ ಮೊದಲ ಬಾರಿಗೆ ಒಂಭತ್ತು ನಿರ್ದೇಶಕರು ವಿರುದ್ಧ ನಿಂತಿದ್ದಾರೆ. ಆ ಒಂಭತ್ತು ನಿರ್ದೇಶಕರಿಗೆ ಕ್ಷೇತ್ರದ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್‌ ಮುಂದಾಳತ್ವ ನೀಡಿದ್ದರೆ, ಈ ತಂಡದಕ್ಕೆ ಬೆಳಗಾವಿ ಜಿಲ್ಲೆಯ ಬಹುತೇಕ ಘಟಾನುಘಟಿ ನಾಯಕರು ಪರೋಕ್ಷ ಬೆಂಬಲ ಸೂಚಿಸಿರುವುದಲ್ಲದೆ, ಎಲ್ಲಾ ರೀತಿಯ ನೆರವು ನೀಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ಹೀಗೆ, ಬೆಳಗಾವಿಯ ಲಿಂಗಾಯತ-ಮರಾಠ (ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಪಕ್ಷಗಳ ನಾಯಕರು) ಒಗ್ಗೂಡಿರುವುದರಿಂದಲೇ ಈ ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡ ಜಾರಕಿಹೊಳಿ ಸಹೋದರರು, ತಮ್ಮ ಇಚ್ಛೆಗೆ ವಿರುದ್ಧವಾಗಿ ಚುನಾವಣೆ ನಡೆದು ಫಲಿತಾಂಶ ಲಕ್ಷ್ಮೇ ಹೆಬ್ಬಾಳ್ಕರ್‌ ನಿರ್ದೇಶಕರ ಪರ ಬಂದರೆ ತಮ್ಮ ಮುಂದಿನ ರಾಜಕೀಯ ಹೆಜ್ಜೆಗಳನ್ನು ಇಡುವುದಾಗಿ ಹೇಳುವ ಮೂಲಕ ಸಮ್ಮಿಶ್ರ ಸರ್ಕಾರದ ಬುಡ ಅಲ್ಲಾಡಿಸುವ ಎಚ್ಚರಿಕೆ ನೀಡುತ್ತಿದ್ದಾರೆ. ಈ ನಡೆಯ ಹಿಂದೆ ಕಾಂಗ್ರೆಸ್‌ ಹೈಕಮಾಂಡ್‌ ಲಕ್ಷ್ಮೇ ಹೆಬ್ಬಾಳ್ಕರ್‌ ಮೇಲೆ ಒತ್ತಡ ತಂದು ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಲ್ಲಿ ಜಾರಕಿಹೊಳಿ ಸಹೋದರರ ಮಾತು ನಡೆಯುವಂತೆ ಮಾಡಲಿ ಎಂಬ ತಂತ್ರವಿದೆ ಎಂದು ಹೇಳಲಾಗುತ್ತಿದೆ.

ನ್ಯಾಯಾಲಯದ ಆದೇಶದ ಪ್ರಕಾರ ಶುಕ್ರವಾರ ಚುನಾವಣೆ ನಡೆಯಬೇಕು. ಆ ವೇಳೆಗೆ ಹೈಕಮಾಂಡ್‌ ಮಧ್ಯಪ್ರವೇಶ ಮಾಡಿ ಬೆಳಗಾವಿ ಕಾಂಗ್ರೆಸ್‌ ನಾಯಕರ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ, ಇದು ವಿಕೋಪಕ್ಕೆ ಹೋಗುವ ಸಾಧ್ಯತೆ ಇರುವುದಂತೂ ನಿಜ.

ಹಾಗಂತ ಕಾಂಗ್ರೆಸ್‌ ಹೈಕಮಾಂಡ್‌ ಕೂಡ ಲಕ್ಷ್ಮೇ ಅವರ ಮೇಲೆ ಒತ್ತಡ ತಂದು ಅವರನ್ನು ಈ ಸಂಘರ್ಷದಿಂದ ಸಂಪೂರ್ಣವಾಗಿ ಹಿಂದಕ್ಕೆ ಸರಿಯುವಂತೆ ಮಾಡುವುದು ಅಷ್ಟುಸುಲಭವೂ ಇಲ್ಲ. ಏಕೆಂದರೆ, ಈ ಆಟದಲ್ಲಿ ಪಕ್ಷ ಭೇದ ಮರೆತು ಲಿಂಗಾಯತ ಹಾಗೂ ಮರಾಠ ನಾಯಕರು ಲಕ್ಷ್ಮೇ ಹೆಬ್ಬಾಳ್ಕರ್‌ ಅವರ ಬೆನ್ನ ಹಿಂದೆ ಇದ್ದಾರೆ. ಲಕ್ಷ್ಮೇ ಮೇಲೆ ಜಾರಕಿಹೊಳಿ ಸಹೋದರರು ಹೇಳಿಕೆಗಳನ್ನು ನೀಡಿದಾಗ ಖುದ್ದು ವೀರಶೈವ ಮಹಾಸಭಾ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ಹೆಬ್ಬಾಳ್ಕರ್‌ ಪರ ನಿಂತಿತ್ತು. ಈ ಒತ್ತಡವನ್ನು ಮೀರಿ ಲಕ್ಷ್ಮೇ ಹೈಕಮಾಂಡ್‌ ಮಾತು ಕೇಳುವರಾ ಅಥವಾ ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಿಡಿತ ಸಾಧಿಸುವ ಪ್ರಯತ್ನವಾಗಿ ಪಿಎಲ್‌ಡಿ ನಿರ್ದೇಶಕ ಮಂಡಳಿಯನ್ನು ತಮ್ಮ ಹತೋಟಿಗೆ ತೆಗೆದುಕೊಳ್ಳುವರಾ ಎಂಬುದು ಕಾದುನೋಡಬೇಕಿದೆ.

ಸಂಘರ್ಷಕ್ಕೆ ಕಾರಣವೇನು?:  ಒಂದು ಕಾಲದಲ್ಲಿ ಆತ್ಮೀಯರಾಗಿದ್ದ ರಮೇಶ್‌ ಜಾರಕಿಹೊಳಿ- ಲಕ್ಷ್ಮೇ ಹೆಬ್ಬಾಳ್ಕರ್‌ ಅವರು ಈಗ ವಿರೋಧಿಗಳಾಗಿರುವುದಕ್ಕೆ ಮತ್ತು ಈ ವೈಮನಸ್ಯವನ್ನು ಬಳಸಿಕೊಂಡು ಜಿಲ್ಲೆಯ ನಾಯಕರು ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನಕ್ಕೆ ಮುಂದಾಗುವುದಕ್ಕೆ ಹತ್ತಾರು ಕಾರಣಗಳಿವೆ. ಲಕ್ಷ್ಮೇ ಹಾಗೂ ರಮೇಶ್‌ ಅವರ ನಡುವೆ ಹಲವು ವರ್ಷಗಳಿಂದ ಹಣಕಾಸು ವ್ಯವಹಾರವಿತ್ತು. ಸಕ್ಕರೆ ಕಾರ್ಖಾನೆ ಹಾಗೂ ಸೋಲಾರ್‌ ಎನರ್ಜಿಯಂತಹ ಯೋಜನೆಗಳಿಗೆ ಜತೆಗೂಡಿ ಕೈ ಹಾಕಿದ್ದ ಮತ್ತು ಪರಸ್ಪರ ಸಹಕಾರ ನೀಡುತ್ತಾ ಬಂದಿದ್ದ ಈ ಇಬ್ಬರು ನಾಯಕರು ಯಾವುದೇ ದಾಖಲೆಗಳಿಲ್ಲದೇ ದೊಡ್ಡ ಮೊತ್ತದ ಹಣವನ್ನು ಕೊಡು-ಕೊಳ್ಳುವ ಸಂಬಂಧವನ್ನು ಹೊಂದಿದ್ದರು. ಈ ವ್ಯವಹಾರಗಳಲ್ಲಿ ರಾಜ್ಯದ ಪ್ರಭಾವಿ ನಾಯಕ ಡಿ.ಕೆ. ಶಿವಕುಮಾರ್‌ ಅವರು ಪರೋಕ್ಷವಾಗಿ ಇಬ್ಬರಿಗೂ ನೆರವು ನೀಡಿದ್ದರು ಎನ್ನಲಾಗಿದೆ. ಈ ಆರ್ಥಿಕ ಕೊಡು-ಕೊಳ್ಳುವಿಕೆ ಸಂಬಂಧ ವಿಧಾನಸಭಾ ಚುನಾವಣೆ ವೇಳೆ ಹಳಸಿತ್ತು.

ಚುನಾವಣೆ ನಂತರ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಲು ರಮೇಶ್‌ ಹಾಗೂ ಸತೀಶ್‌ ಜಾರಕಿಹೊಳಿ ಸಹೋದರರ ನಡುವೆಯೇ ಪೈಪೋಟಿಯಿತ್ತು. ಈ ಸಂದರ್ಭದಲ್ಲಿ ಮಹಿಳಾ ಕೋಟಾದಲ್ಲಿ ಸಚಿವರಾಗಲು ಲಕ್ಷ್ಮೇ ಹೆಬ್ಬಾಳ್ಕರ್‌ ಕೂಡ ಪ್ರಯತ್ನ ನಡೆಸಿದ್ದರು. ಈ ಹಂತದಲ್ಲಿ ಡಿ.ಕೆ.ಶಿವಕುಮಾರ್‌ ಅವರು ಹೈಕಮಾಂಡ್‌ನಲ್ಲಿನ ತಮ್ಮ ಪ್ರಭಾವ ಬಳಸಿ ಲಕ್ಷ್ಮೇ ಹೆಬ್ಬಾಳ್ಕರ್‌ ಅವರನ್ನು ಸಚಿವರನ್ನಾಗಿಸಲು ಯತ್ನಿಸಿದ್ದರು ಎನ್ನಲಾಗಿದೆ. ತಮ್ಮನ್ನು ಮೀರಿ ಲಕ್ಷ್ಮೇ ಸಚಿವರಾಗುವ ಸಾಧ್ಯತೆ ಕಂಡುಬಂದ ಕೂಡಲೇ ಜಾರಕಿಹೊಳಿ ಸಹೋದರರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೊರೆಹೋದರು ಎನ್ನಲಾಗುತ್ತಿದೆ.

ಈ ಬೆಳವಣಿಗೆ ವೇಳೆ ಸಿದ್ದರಾಮಯ್ಯ ಅವರು ಜಯಮಾಲಾ ಅವರು ಸಚಿವರಾಗುವಂತೆ ನೋಡಿಕೊಳ್ಳುವ ಮೂಲಕ ಮಹಿಳಾ ಕೋಟಾ ರದ್ದಾಗುವಂತೆ ಮಾಡಿದರು ಮತ್ತು ರಮೇಶ್‌ ಜಾರಕಿಹೊಳಿ ಅವರನ್ನು ಸಂಪುಟ ಸೇರುವಂತೆ ಮಾಡಿದರು ಎನ್ನಲಾಗುತ್ತಿದೆ.

ಹಣಕಾಸು ವ್ಯವಹಾರದಲ್ಲೂ ನಷ್ಟಹಾಗೂ ಸಚಿವರಾಗಲು ಅವಕಾಶಕ್ಕೆ ಕಲ್ಲು ಬಿದ್ದಿದ್ದರಿಂದ ಕಂಗೆಟ್ಟಲಕ್ಷ್ಮೇ ಹೆಬ್ಬಾಳ್ಕರ್‌ ಅವರು ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಪಿಎಲ್‌ಡಿ ಬ್ಯಾಂಕ್‌ ಅನ್ನು ಹತೋಟಿಗೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ ಅವರಿಗೆ ಜಿಲ್ಲೆಯ ಲಿಂಗಾಯತ ನಾಯಕರ (ಪಕ್ಷಾತೀತವಾಗಿ) ಬೆಂಬಲ ದೊರಕಿದೆ. ಈ ನೆರವಿನ ಬಲದಿಂದ ಲಕ್ಷ್ಮೇ ಜಾರಕಿಹೊಳಿ ಅವರು ಒಂದು ಕಾಲದಲ್ಲಿ ಜಾರಕಿಹೊಳಿ ಅವರ ಬೆಂಬಲಿಗರಾಗಿದ್ದ ಹಲವಾರು ಮಂದಿಯನ್ನು ತಮ್ಮತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾದರು. ಇದು ಜಾರಕಿಹೊಳಿ ಸಹೋದರರಿಗೆ ಮತ್ತೆ ಸಿಟ್ಟು ತರಿಸಿದೆ. ಇದರ ಪರಿಣಾಮವೇ ಹಾಲಿ ನಡೆದಿರುವ ಸಂಘರ್ಷ ಎಂದು ಮೂಲಗಳು ಹೇಳುತ್ತವೆ.

Follow Us:
Download App:
  • android
  • ios