ಶಿವಮೊಗ್ಗ (ಮೇ. 16): ಆಗುಂಬೆ ಘಾಟಿಯಲ್ಲಿ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಗುರುವಾರದಿಂದ ಲಘು ವಾಹನಗಳಾದ ಮಿನಿ ಬಸ್‌ಗಳು, ಜೀಪು, ವ್ಯಾನು, ಕಾರುಗಳು ಹಾಗೂ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಆದೇಶಿಸಿದ್ದಾರೆ.

ಕಾಂಕ್ರೀಟ್‌ ಕಾಮಗಾರಿ ಕ್ಯೂರಿಂಗ್‌ ಆಗಲು 18 ದಿನಗಳ ಅವಶ್ಯಕತೆ ಇರುವುದರಿಂದ ಇನ್ನುಳಿದ ಎಲ್‌.ಸಿ.ವಿ ವಾಹನಗಳಿಗೆ ಜೂನ್‌ 1ರಿಂದ ಅನುಮತಿ ನೀಡಲಾಗುವುದು. ಅದುವರೆಗೆ ವಾಹನಗಳು ತೀರ್ಥಹಳ್ಳಿ-ಮಾಸಿಕಟ್ಟೆ-ಹೊಸಂಗಡಿ-ಸಿದ್ದಾಪುರ-ಕುಂದಾಪುರ-ಉಡುಪಿ ಹಾಗೂ ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ-ಮಾಳಾಘಾಟ್‌-ಕಾರ್ಕಳ-ಉಡುಪಿ ಮೂಲಕ ಸಂಚರಿಸಲು ಅವಕಾಶ ಮಾಡಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.