ಬೆಂಗಳೂರು(ಸೆ.09): ಕನ್ನಡಿಗರು ಕಾವೇರಿಗಾಗಿ ಬೀದಿಗಿಳಿದು ಹೋರಾಡುತ್ತಿದ್ದಾರೆ. ಅತ್ತ ಕಡೆ ತಮಿಳುನಾಡು ನೀರು ಬೇಕೇ ಬೇಕು ಎನ್ನುವ ಪಟ್ಟು ಹಿಡಿದಿದೆ. ಈ ರಚ್ಚೆ ಹಿಡಿದ ಮಕ್ಕಳಂತೆ ಮಾಡುತ್ತಿರೋ ಆಡುತ್ತಿರೋ ತಮಿಳುನಾಡಿನ ಗ್ರೌಂಡ್ ರಿಯಾಲಿಟಿ ಏನು ಎನ್ನುವುದನ್ನು ತಿಳಿಯಲು ಸುವಣ್ ನ್ಯೂಸ್'ನ ಕವರ್ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆ ಮಾಡಿದೆ.
ಕರುನಾಡು ಅಕ್ಷರಶ: ರಣರಂಗವಾಗಿದೆ. ಕಾವೇರಿಗಾಗಿ ಹೋರಾಟ ಕಾವೇರಿದೆ. ಕುಡಿಯೋ ನೀರಿಗಾಗಿ ಪ್ರತಿಭಟನೆ ಮುಗಿಲು ಮುಟ್ಟಿದೆ. ಇದ್ಯಾವುದನ್ನು ಲೆಕ್ಕಿಸದ ತಮಿಳುನಾಡು ಸುಪ್ರೀಂ ಕೋರ್ಟ್ ಆದೇಶದಂತೆ ನಮ್ಮ ಪಾಲಿನ ನೀರು ನಮಗೆ ಕೊಡಿ ಅಂತ ಹಠ ಹಿಡಿದಿದೆ. ತಮಿಳುನಾಡಿನ ಹಠಕ್ಕೆ ಮಣಿದ ಕರ್ನಾಟಕ ಸರ್ಕಾರ ಕಾವೇರಿ ನೀರು ಬಿಡಲು ಪ್ರಾರಂಭಿಸಿದೆ. ನಮ್ಮ ಕೆ.ಆರ್ಎಸ್, ಕಬಿನಿ, ಹಾರಂಗಿ ಹಾಗೂ ಹೇಮಾವತಿ ಜಲಾಶಯದಲ್ಲಿ ನೀರು ಹರಿದು ಹೋಗುತ್ತಿದ್ದಂತೆ ಮಂಡ್ಯ, ಮೈಸೂರು, ಬೆಂಗಳೂರು ಜನರಲ್ಲಿ ಆತಂಕ ಹೆಚ್ಚುತ್ತಿದೆ.
ಆದರೆ ಇಲ್ಲಿ ಮೂಡುವ ಪ್ರಮುಖ ಪ್ರಶ್ನೆ ಏನಂದ್ರೆ ನಿಜವಾಗಿಯೂ ಕನ್ನಡಿಗರ ಕುಡಿಯುವ ನೀರು ಕಸಿದ ಕೊಳ್ಳೋ ಅನಿವಾರ್ಯ ಪರಿಸ್ಥಿತಿ ತಮಿಳುನಾಡಿಗೆ ಬಂದಿದೆಯಾ? ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್ಗೆ ಹೇಳಿಕೊಂಡಂತೆ ಅಲ್ಲಿ ಅಷ್ಟೊಂದು ನೀರಿಗಾಗಿ ಹಾಹಾಕಾರ ಇದೆಯಾ? ಅಲ್ಲಿನ ಜಲಾಶಯಗಳೆಲ್ಲಾ ಬರಿದಾಗಿ ಹೋಗಿವೆಯಾ? ಅಮ್ಮಾ ಹೇಳಿದ ಸುಳ್ಳುಗಳೇನು ಎನ್ನುವುದನ್ನು ಪತ್ತೆಹಚ್ಚಲು ಸುವರ್ಣ ನ್ಯೂಸ್ನ ಕವರ್ಸ್ಟೋರಿ ಸತ್ಯ ಶೋಧನೆಗೆ ಹೊರಟಿತು.
ತಮಿಳುನಾಡು ಸರ್ಕಾರದ ಭದ್ರಕೋಟೆ ಭೇಧಿಸಿ ರಹಸ್ಯ ಕಾರ್ಯಾಚರಣೆ ಮಾಡಿ ಕೆಲ ಕಟು ಸತ್ಯಗಳನ್ನ ಬಯಲಿಗೆಳೆಯುತು.
ಅಮ್ಮ ಹೇಳಿದ ಸುಳ್ಳು ನಂ.1: ಹೊಗೆನಕಲ್ನಲ್ಲಿ ಹಾಹಾಕಾರ
ತಮಿಳುನಾಡಿನ ಪ್ರಮುಖ ಕುಡಿಯುವ ನೀರಿನ ಯೋಜನೆ ಇರುವ ಹೊಗೆನಕಲ್ನಲ್ಲಿ ಕಂಡ ದೃಶ್ಯ ಬೆಚ್ಚಿಬೀಳಿಸುತ್ತದೆ. ಹೊಗೆನಕಲ್ ಬರಿದಾಗಿಲ್ಲ ಬದಲಾಗಿ ಭೋರ್ಗರೆಯುತ್ತಿದೆ.
ಅಮ್ಮ ಹೇಳಿದ ಸುಳ್ಳು ನಂ 2: ಮೆಟ್ಟೂರು ಡ್ಯಾಂ ಬರಿದಾಗಿದೆ
ಇನ್ನು ತಮಿಳುವಾಡಿನ ಪ್ರಮುಖ ಜಲಾಶಯ ಮೆಟ್ಟೂರು ಅಣೆಕಟ್ಟಿಗೆ ಲಗ್ಗೆ ಇಟ್ಟರೆ ಜಯಲಲಿತಾ ಹೆಣೆದ ಕಟ್ಟು ಕತೆಯ ದರ್ಶನವಾಗುತ್ತದೆ, ಯಾಕೆಂದರೆ ಅಲ್ಲಿ ಕಾವೇರಿ ಕೂಲಾಗಿ ಹರಿಯುತ್ತಿದ್ದಾಳೆ.
ಅಮ್ಮ ಹೇಳಿದ ಸುಳ್ಳು ನಂ 3: ಬರಡಾಗಿದೆ ತಮಿಳುನಾಡು
ಮಳೆ, ಬೆಳೆ ಇಲ್ಲದೆ ತಮಿಳುನಾಡು ಬರಡಾಗಿದೆ. ಇಲ್ಲಿ ಬೆಳೆ ಬೆಳೆಯಲು ನೀರೇ ಇಲ್ಲ. ಕಾವೇರಿ ಹರಿಯದಿದ್ದರೆ ತಮಿಳುನಾಡಲ್ಲಿ ನೀರಿಗಾಗಿ ಹಾಹಾಕಾರ ಉಂಟಾಗುತ್ತದೆ ಎಂದು ಅಮ್ಮಾ ವಾದಿಸಿದ್ದಾರೆ. ಆದ್ರೆ ಕವರ್ಸ್ಟೋರಿ ತಂಡ ಕಾವೇರಿ ಜಲಾನಯನ ಭಾಗಗಳಿಗೆ ಭೇಟಿಕೊಟ್ಟಾಗ ಕಂಡ ದೃಶ್ಯ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ ಯಾಕೆಂದರೆ ಅಲ್ಲಿರುವುದು ಹಸಿರಿನಿಂದ ಕೂಡಿದ ಪ್ರಕೃತಿ.
ಸುವರ್ಣ ನ್ಯೂಸ್ನ ಕವರ್ಸ್ಟೋರಿ ತಂಡ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಇಂಥಾ ಇನ್ನಷ್ಟು ಕಟು ಸತ್ಯಗಳು ಬಯಲಾಗಿವೆ. ಜಯಲಲಿತಾ ನ್ಯಾಯಾಲಯಕ್ಕೆ ಹೇಳಿದ ಸುಳ್ಳುಗಳು ಹಾಗೂ ಬ್ರಹ್ನಾಟಕಗಳು ಬಹಿರಂಗಗೊಂಡಿವೆ.
