ಬೆಂಗಳೂರು :  ನಾವು ಪ್ರತಿಪಕ್ಷಗಳನ್ನು ಎದುರಿಸುವಾಗ ಕೇಂದ್ರ ಸರ್ಕಾರ ಮುಯ್ಯಿ (ಪ್ರತೀಕಾರ) ತೀರಿಸಿಕೊಳ್ಳಲಿದೆ ಎನ್ನುವಂತೆ ಬಿಂಬಿಸುವುದು ಸರಿಯಲ್ಲ ಎಂದು ಬಿಜೆಪಿ ಮುಖಂಡ ಹಾಗೂ ವಿಧಾನಪರಿಷತ್‌ ಸದಸ್ಯ ಲೆಹರ್‌ ಸಿಂಗ್‌ ಅವರು ತಮ್ಮದೇ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಟಾಂಗ್‌ ನೀಡಿದ್ದಾರೆ.

ಯಡಿಯೂರಪ್ಪ ಅವರ ಪರಮಾಪ್ತರು ಎಂದೇ ಗುರುತಿಸಿಕೊಂಡಿರುವ ಲೆಹರ್‌ ಸಿಂಗ್‌ ಅವರ ಈ ಹೇಳಿಕೆ ಬಿಜೆಪಿ ಪಾಳೆಯದಲ್ಲಿ ಮಿಂಚಿನ ಸಂಚಲನ ಉಂಟುಮಾಡಿದೆ.

ಶುಕ್ರವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಮ್ಮ ಸಣ್ಣ ಉದ್ದೇಶಗಳಿಗಾಗಿ ಪ್ರಧಾನಿಗಳ ಹೆಸರನ್ನು ಬಳಸಿಕೊಂಡು ಅವರ ಘನತೆ ಕಡಮೆ ಮಾಡುವುದಾಗಲಿ, ಕೇಂದ್ರ ಸರ್ಕಾರ ಮುಯ್ಯಿ ತೀರಿಸಲಿದೆ ಎನ್ನುವಂತೆ ಬಿಂಬಿಸುವುದು ಸರಿಯಲ್ಲ. ಪ್ರತಿಪಕ್ಷಗಳನ್ನು ಹೆದರಿಸಲು ಪ್ರಧಾನಿಗಳ ಹೆಸರನ್ನು ಅಥವಾ ಕೇಂದ್ರದ ಸಂಸ್ಥೆಗಳ ಹೆಸರುಗಳನ್ನಾಗಲೀ ಎಳೆದುತರುವ ಅಧಿಕಾರವನ್ನು ಪಕ್ಷವು ಯಾರಿಗೂ ನೀಡಿಲ್ಲ ಎಂಬುದು ತಮ್ಮ ಭಾವನೆ ಎಂದಿದ್ದಾರೆ.

ಕಾನೂನನ್ನು ಅತಿಕ್ರಮಿಸಿದವರು ಯಾರೇ ಆಗಿರಲಿ. ಈ ದೇಶದ ಕಾನೂನಿನ ಅನ್ವಯ ಪರಿಣಾಮವನ್ನೂ ಎದುರಿಸಬೇಕಾಗುತ್ತದೆಯೇ ಹೊರತು ಯಾರೋ ವ್ಯಕ್ತಿಗಳ ಅಭಿಲಾಶೆ ಅಥವಾ ಬಯಕೆಗಳಿಗೆ ತಕ್ಕಂತೆ ಅಲ್ಲ. ತಮ್ಮನ್ನೂ ಸೇರಿದಂತೆ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಕೆಲವು ಅಂಶಗಳನ್ನು ನೆನಪು ಮಾಡಿಕೊಳ್ಳಲು ಬಯಸುತ್ತೇನೆ. ಕರ್ನಾಟಕದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಪಕ್ಷದ ಕೇಂದ್ರ ನಾಯಕತ್ವದ ಗಮನ ವಿಚಲಿತಗೊಳ್ಳದಂತೆ ನೋಡಿಕೊಳ್ಳುವುದು ಕೂಡ ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಎರಡನೆಯ ಬಾರಿಗೆ ಮತ್ತೆ ಪ್ರಧಾನಿಗಳಾಗಿ ಅಧಿಕಾರ ವಹಿಸಿಕೊಳ್ಳುವುದನ್ನು ನಾವು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ 2014ಕ್ಕಿಂತಲೂ ಹೆಚ್ಚಿನ ಸ್ಥಾನಗಳನ್ನು ಪಡೆದ ಬಹುಮತ ಗಳಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕು. ದಕ್ಷಿಣದಲ್ಲಿ ಬಿಜೆಪಿ ಬಲಿಷ್ಠವಾಗಿರುವ ಕರ್ನಾಟಕದ ಪ್ರತಿಯೊಂದು ಲೋಕಸಭಾ ಕ್ಷೇತ್ರವೂ ನಮಗೆ ಮಹತ್ವದ್ದಾಗಿದೆ ಎಂದು ಲೆಹರ್‌ ಸಿಂಗ್‌ ಅಭಿಪ್ರಾಯಪಟ್ಟಿದ್ದಾರೆ.