ಬೆಂಗಳೂರು [ಜು.23] : ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಪಕ್ಷದ ಎಲ್ಲ ಶಾಸಕರಿಗೆ ವಿಪ್‌ ನೀಡುವ ಹಕ್ಕು ಶಾಸಕಾಂಗ ಪಕ್ಷದ ನಾಯಕರಿಗೆ ಇದೆ. ರಾಜೀನಾಮೆ ನೀಡಿರುವ ಶಾಸಕರಿಗೆ ಹೀಗೆಯೇ ಮಾಡಬೇಕೆಂದು ಒತ್ತಡ ಹೇರುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ನೀಡಿರುವ ಆದೇಶ ಶಾಸಕಾಂಗ ಪಕ್ಷದ ನಾಯಕರಲ್ಲದ ಬೇರೆಯವರಿಗೆ ಅನ್ವಯವಾಗುತ್ತದೆ ಎಂದು ವಿಧಾನಸಭೆಯ ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ರೂಲಿಂಗ್‌ ನೀಡಿದ್ದಾರೆ.

ಸೋಮವಾರ ಕಲಾಪ ಆರಂಭವಾಗುತ್ತಿದ್ದಂತೆ ಸಭಾಧ್ಯಕ್ಷರು ಕಳೆದ ವಾರ ಮುಖ್ಯಮಂತ್ರಿಗಳು ಮಂಡಿಸಿದ ವಿಶ್ವಾಸಮತ ನಿರ್ಣಯದ ಬಗ್ಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸುಪ್ರೀಂಕೋರ್ಟ್‌ ನೀಡಿದ ಮಧ್ಯಂತರ ಆದೇಶದಿಂದ ಸಂವಿಧಾನದ 10ನೇ ಪರಿಚ್ಛೇದದ ಅನ್ವಯ ಶಾಸಕರಿಗೆ ವಿಪ್‌ ನೀಡುವ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ ಎಂದು ಎತ್ತಿದ್ದ ಕ್ರಿಯಾಲೋಪದ ಬಗ್ಗೆ ರೂಲಿಂಗ್‌ ನೀಡಿದರು.

ಸುಪ್ರೀಂಕೋರ್ಟ್‌ ತನ್ನ ಆದೇಶದಲ್ಲಿ ಸಂವಿಧಾನದ 10ನೇ ಪರಿಚ್ಛೇದ ಪ್ರಕಾರ ಶಾಸಕಾಂಗ ಪಕ್ಷದ ನಾಯಕರಿಗೆ ನೀಡಿರುವ ಜವಾಬ್ದಾರಿ ಮೊಟಕುಗೊಳಿಸುವ ಪ್ರಯತ್ನ ಮಾಡಿಲ್ಲ. ವಿಪ್‌ ನೀಡುವ ಹಕ್ಕು ಶಾಸಕಾಂಗ ಪಕ್ಷದ ನಾಯಕರಿಗೆ ಇದೆ ಎಂದು ಹೇಳಿದರು.

ಇನ್ನು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದ 12 ಶಾಸಕರಿಗೆ ಶಾಸಕಾಂಗ ಪಕ್ಷದ ನಾಯಕರನ್ನು ಹೊರತುಪಡಿಸಿ ಬೇರೆ ಯಾರಾದರೂ ಬಲವಂತ ಮಾಡಿದರೆ ಇಲ್ಲವೇ ಒತ್ತಡ ಹೇರಿದರೆ ಅವರಿಗೆ ರಕ್ಷಣೆ ಕೊಡುವುದು ನನ್ನ ಹೊಣೆ. ಆ ಜವಾಬ್ದಾರಿಯ ಕಾರ್ಯವನ್ನು ಮಾಡುತ್ತೇನೆ ಎಂದು ಸ್ಪೀಕರ್‌ ಸ್ಪಷ್ಟಪಡಿಸಿದರು.

ರೂಲಿಂಗ್‌ ನಂತರ ಚರ್ಚೆಗೆ ಬಿಜೆಪಿ ಆಕ್ಷೇಪ:  ಆದರೆ ಸಭಾಧ್ಯಕ್ಷರು ರೂಲಿಂಗ್‌ ನೀಡಿದ ನಂತರ ಕಾಂಗ್ರೆಸ್‌ ಸದಸ್ಯ ಎಚ್‌.ಕೆ. ಪಾಟೀಲ್‌ ಅವರು ಸುಪ್ರೀಂಕೋರ್ಟ್‌ ನೀಡಿರುವ ಆದೇಶದಿಂದ ಸಭಾಧ್ಯಕ್ಷರ ಹಕ್ಕುಗಳ ಉಲ್ಲಂಘನೆ ಆಗಿದೆ. ಈ ಬಗ್ಗೆ ರೂಲಿಂಗ್‌ ನೀಡಬೇಕು ಎಂದು ಮನವಿ ಮಾಡಿದರು. ಜೆಡಿಎಸ್‌ ಸದಸ್ಯ ಶಿವಲಿಂಗೇಗೌಡ ಅವರು ಸಹ ವಿಪ್‌ ಜಾರಿ ಕುರಿತಂತೆ ಸುಪ್ರೀಂಕೋರ್ಟ್‌ ಆದೇಶ ಅಡ್ಡಗೋಡೆ ಮೇಲೆ ದೀಪ ಇಟ್ಟಂತಾಗಿದೆ ಎಂದು ಹೇಳಿದರು.

ಆದರೆ ಸದಸ್ಯರ ಮಾತನ್ನು ಒಪ್ಪದ ಸ್ಪೀಕರ್‌ ರಮೇಶ್‌ಕುಮಾರ್‌ ತಮ್ಮ ಯಾವುದೇ ಹಕ್ಕು ಉಲ್ಲಂಘನೆ ಆಗಿಲ್ಲ. ಶಾಸಕಾಂಗ ಪಕ್ಷದ ನಾಯಕರಿಗೆ ನಿಮ್ಮ ಹಕ್ಕು ಚಲಾಯಿಸಿ ಎಂದು ಸುಪ್ರೀಂಕೋರ್ಟ್‌ ಹೇಳಿದೆ. ಅತೃಪ್ತ ಶಾಸಕರಿಗೆ ರಕ್ಷಣೆ ಕೊಡುವುದು ಸಭಾಧ್ಯಕ್ಷರ ಜವಾಬ್ದಾರಿಯಾಗಿದೆ, ಯಾರ ಹಕ್ಕುಗಳ ಉಲ್ಲಂಘನೆಯೂ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಆಗ ಸಚಿವ ಡಿ.ಕೆ. ಶಿವಕುಮಾರ್‌ ಮಾತನಾಡಲು ಆರಂಭವಾಗುತ್ತಿದ್ದಂತೆ ಬಿಜೆಪಿ ಸದಸ್ಯ ಮಾಧುಸ್ವಾಮಿ ಅವರು ಸಭಾಧ್ಯಕ್ಷರು ರೂಲಿಂಗ್‌ ನೀಡಿದ ನಂತರ ಚರ್ಚೆಗೆ ಅವಕಾಶ ಕೊಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಮಾಧುಸ್ವಾಮಿ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ ಸಭಾಧ್ಯಕ್ಷರು ಕಾಂಗ್ರೆಸ್‌ ಶಾಸಕರಿಗೆ ಈ ಬಗ್ಗೆ ಚರ್ಚೆ ಮಾಡದಂತೆ ಸೂಚಿಸಿದರು.