ಪುಣೆ[ಡಿ.23]: ಗೆದ್ದಾಗ ಬೀಗುವವರು ಸೋಲಿನ ಹೊಣೆಯನ್ನೂ ಹೊರಬೇಕು ಎಂದು ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ನಿತಿನ್‌ ಗಡ್ಕರಿ, ತಮ್ಮ ಪಕ್ಷದ ಹಿರಿಯ ನಾಯಕರಿಗೆ ಪರೋಕ್ಷ ಟಾಂಗ್‌ ನೀಡಿದ್ದಾರೆ.

ಇಲ್ಲಿ ಕಾರ್ಯಕ್ರಮವೊಂದನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ಇತ್ತೀಚಿನ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಸೋಲನ್ನು ಉದ್ದೇಶಿಸಿ ಈ ಮಾತುಗಳನ್ನು ಆಡಿದ್ದಾರೆ. ಯಶಸ್ಸಿಗೆ ಹಲವು ಅಪ್ಪಂದಿರು, ಅಪಯಶಸ್ಸು ಅನಾಥ. ಯಶಸ್ಸಿನ ಕೀರ್ತಿಯನ್ನು ಹೊತ್ತುಕೊಳ್ಳಲು ನಾಯಕತ್ವ ಮುಂದೆ ಬರುವಂತೆ, ಸೋಲಿನ ಹೊಣೆ ಹೊತ್ತುಕೊಳ್ಳಲು ಮುಂದೆ ಬರುವುದಿಲ್ಲ. ಯಶಸ್ಸು ಬಂದಾಗ ಅದರ ಹಿರಿಮೆ ಪಡೆಯಲು ಎಲ್ಲರೂ ರೇಸ್‌ನಲ್ಲಿರುತ್ತಾರೆ, ಆದರೆ ಸೋಲಿನ ವಿಷಯ ಬಂದಾಗ ಎಲ್ಲರೂ ಮತ್ತೊಬ್ಬರತ್ತ ಬೊಟ್ಟು ಮಾಡುತ್ತಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ಈ ಮಾತುಗಳನ್ನು ಗಡ್ಕರಿ ನೇರವಾಗಿ ಯಾರನ್ನೂ ಉದ್ದೇಶಿಸಿ ಹೇಳಿಲ್ಲವಾದರೂ, ಅದು ಪ್ರಧಾನಿ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರನ್ನೇ ಗುರಿಯಾಗಿಸಿದ್ದು ಎಂದು ವಿಶ್ಲೇಷಿಸಲಾಗಿದೆ. ಪಂಚರಾಜ್ಯಗಳ ಚುನಾವಣೆ ಸೋಲಿಗೆ ಮೋದಿ, ಶಾ ಕಾರಣರಲ್ಲ ಎಂಬ ಹಲವು ಬಿಜೆಪಿ ನಾಯಕರ ಹೇಳಿಕೆ ಬೆನ್ನಲ್ಲೇ ಗಡ್ಕರಿ ಈ ಮಾತು ಆಡಿದ್ದಾರೆ.