ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿಯ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಈ ಮಧ್ಯೆ ನಾಯಕರ ಕೆಸರೆರಚಾಟ ಕೂಡ ಜೋರಾಗಿದ್ದು ಯಡಿಯೂರಪ್ಪ ಪೊಲೀಸರ ಆತ್ಮಸ್ಥೈರ್ಯ ಕುಂದಿಸೋ ಹೇಳಕೆ ನೀಡಿದ್ದಾರೆ.

ಮೈಸೂರು(ಮಾ.22): ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಚುನಾವಣೆ ಕಾವು ದಿನೇ ದಿನೇ ಹೆಚ್ಚಾಗುತ್ತಿದೆ. ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿಯ ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ಈ ಮಧ್ಯೆ ನಾಯಕರ ಕೆಸರೆರಚಾಟ ಕೂಡ ಜೋರಾಗಿದ್ದು ಯಡಿಯೂರಪ್ಪ ಪೊಲೀಸರ ಆತ್ಮಸ್ಥೈರ್ಯ ಕುಂದಿಸೋ ಹೇಳಕೆ ನೀಡಿದ್ದಾರೆ.

ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪಸಮರದ ಬಿಸಿ ಯಾವ ಮಟ್ಟಿಗೆ ಇದೆ ಎನ್ನುವುದಕ್ಕೆ ಇದೊಂದು ಸಣ್ಣ ನಿದರ್ಶನ ಮಾತ್ರ. ಆದರೆ, ಘಟಾನುಘಟಿ ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡು ಮತಾಧೀಶರ ಮನ ಗೆಲ್ಲಲು ನಾನಾ ಕಸರತ್ತು ನಡೆಸುತ್ತಿದ್ದಾರೆ. ಇದರ ಮೊದಲ ಹೆಜ್ಜೆ ಅನ್ನೋ ರೀತಿ ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರಿಗೆ ಯಡಿಯೂರಪ್ಪ ಧಮ್ಕಿ ಹಾಕಿ ವಿವಾದ ಸೃಷ್ಟಿಸಿದ್ದಾರೆ.

ಇನ್ನು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಇವತ್ತು, ನಂಜನಗೂಡು ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಹಾಗೆಯೇ ಗುಂಡ್ಲುಪೇಟೆ ಕ್ಷೇತ್ರಕ್ಕೆ 9 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇತ್ತ, ನಂಜನಗೂಡು ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಪರ ಸಂಸದೆ ಶೋಭಾ ಕಂರಂದ್ಲಾಜೆ ಹಾಗೂ ವಿ.ಸೋಮಣ್ಣ ಪ್ರತ್ಯೇಕ ತಂಡಗಳಾಗಿ ಹಲವು ಕಡೆ ಪ್ರಚಾರ ಮಾಡಿದ್ರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಕಳಲೆ ಕೇಶವಮೂರ್ತಿ ನಂಜನಗೂಡು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಇನ್ನು ಗುಂಡ್ಲುಪೇಟೆ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್ ಪರವಾಗಿ ತೆರಕಣಾಂಬಿ ಜಿಲ್ಲಾ ಪಂಚಾಯ್ತಿ ವ್ಯಾಪ್ತೀಲಿ ಬಿರುಸಿನ ಪ್ರಚಾರ ನಡೆಸಿದರು.. ಈ ವೇಳೆ ಸಿಎಂ ಸರ್ಕಾರದ ವಿರುದ್ಧ ಗುಡುಗಿದ್ರು.

ಕಾಂಗ್ರೆಸ್ ಅಭ್ಯರ್ಥಿ ಗೀತಾ ಮಹದೇವಪ್ರಸಾದ್ ಸಹ ಹರವೆ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯ ಕುಲಗಾಣ, ಹೀರೆಬೇಗೂರು, ಕೆಬ್ಬೇಪುರ ಹಾಗೂ ಕೆರೆಹಳ್ಳಿ ಸೇರಿದಂತೆ ವಿವಿದೆಡೆ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ನಡೆಸಿದರು. ಒಟ್ನಲ್ಲಿ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣಾ ಕಣ ದಿನದಿಂದ ರಂಗೇರುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮತದಾರರ ಓಲೈಕೆಗೆ ನಾನಾ ಕಸರತ್ತು ನಡೆಸುತ್ತಿವೆ.