ಕೈದಿಗಳ ಚಲನವಲನಗಳ ಮೇಲೆ ನಿಗಾವಿರಿಸುವುದರಿಂದ ಜೈಲು ಗಳಲ್ಲಿನ ಒತ್ತಡ ಕಡಿಮೆ ಮಾಡಲು ಇದು ಅನುಕೂಲವಾಗುತ್ತದೆ. ಸರ್ಕಾರದ ಹಣದಲ್ಲಿ ಕೈದಿಗಳನ್ನು ಸಾಕುವುದನ್ನೂ ನಿಯಂತ್ರಿಸಬಹುದಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ನವದೆಹಲಿ: ಅತ್ಯಂತ ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಗಳಾಗಿರುವವರಿಗೆ ‘ಎಲೆಕ್ಟ್ರಾನಿಕ್‌ ಟ್ಯಾಗ್‌' ಅಳವಡಿಸಬೇಕು ಎಂದು ಕಾನೂನು ಆಯೋಗ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದರೆ ಇದನ್ನು ಅತ್ಯಂತ ಎಚ್ಚರಿಕೆಯಿಂದ ಬಳಸುವಂತೆಯೂ ಸಲಹೆ ನೀಡಿದೆ.

ಇಂಥ ಆರೋಪಿಗಳು ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳುವುದನ್ನು ತಡೆಯಲು, ಅವರ ಚಲನವಲನಗಳ ಮೇಲೆ ನಿಗಾವಿರಿಸುವುದರಿಂದ ಜೈಲುಗಳಲ್ಲಿನ ಒತ್ತಡ ಕಡಿಮೆ ಮಾಡಲು ಇದು ಅನುಕೂಲವಾಗುತ್ತದೆ. ಸರ್ಕಾರದ ಹಣದಲ್ಲಿ ಕೈದಿಗಳನ್ನು ಸಾಕುವುದನ್ನೂ ನಿಯಂತ್ರಿಸಬಹುದಾಗಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.

ಆದರೆ ಇದಕ್ಕೆ ಮೊದಲು ಸೂಕ್ತ ಕಾನೂನು ತಿದ್ದುಪಡಿ ಮಾಡಬೇಕು, ಬಳಿಕ ‘ಅತ್ಯಂತ ಎಚ್ಚರಿಕೆ'ಯಿಂದ ಮಾತ್ರ ಈ ವ್ಯವಸ್ಥೆ ಬಳಸಬಹುದಾಗಿದೆ ಎಂದು ಆಯೋಗ ಹೇಳಿದೆ. ‘ಜಾಮೀನಿಗೆ ಸಂಬಂಧಿಸಿದ ನಿಬಂಧನೆಗಳು' ಎಂಬ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಅದರಲ್ಲಿ ಈ ಅಂಶಗಳಿವೆ.

‘ಎಲೆಕ್ಟ್ರಾನಿಕ್‌ ಟ್ಯಾಗ್‌' ಬಗ್ಗೆ ವ್ಯಾಖ್ಯಾನ ಮಾಡಲು ಆಯೋಗ ನ್ಯೂಜಿಲೆಂಡ್‌ನ ಕಾನೂನನ್ನು ಉಲ್ಲೇಖಿಸಿದೆ. ಇದೊಂದು ‘ನಿರ್ಬಂಧತ' ರೀತಿಯ ಜಾಮೀನು ವ್ಯವಸ್ಥೆ ಎಂದು ತಿಳಿಸಿದೆ. ವಿಶೇಷವೆಂದರೆ ಕಾಡುಗಳಲ್ಲಿ ಹುಲಿ ಸೇರಿದಂತೆ ಕೆಲ ಪ್ರಾಣಿಗಳ ಚಲನವಲನ ಅಧ್ಯಯನಕ್ಕಾಗಿ ಇಂಥ ಟ್ಯಾಗ್‌ ಅಳವಡಿಸಲಾಗುತ್ತದೆ.