ಭದ್ರಪ್ಪ ಲೇಔಟ್‌ನಲ್ಲಿ ಗೆಳೆಯನ ಜತೆ ಭಾನುವಾರ ರಾತ್ರಿ ಚಂದ್ರಶೇಖರ್ ತೆರಳುವಾಗ ಈ ಹತ್ಯೆ ನಡೆದಿತ್ತು. ಡ್ರಾಪ್ ಕೇಳುವ ನೆಪದಲ್ಲಿ ಚಂದ್ರಶೇಖರ್ ಅವರ ಬೈಕ್ ಅಡ್ಡಗಟ್ಟಿದ್ದ ಕಿಡಿಗೇಡಿಗಳು, ಬಳಿಕ ಅವರಿಗೆ ಚಾಕು ಇರಿದು ಹಣ ಹಾಗೂ ಮೊಬೈಲ್ ದೋಚಿದ್ದರು. ಹಲ್ಲೆಗೊಳಗಾಗಿದ್ದ ಚಂದ್ರಶೇಖರ್ ಚಿಕಿತ್ಸೆ ಫಲಿಸದೆ ಸೋಮವಾರ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಬೆಂಗಳೂರು[ಆ.24]: ಇತ್ತೀಚಿಗೆ ಭದ್ರಪ್ಪ ಲೇಔಟ್‌ನಲ್ಲಿ ನಡೆದಿದ್ದ ಕೂಲಿ ಕಾರ್ಮಿಕ ಗೌರಿಬಿದನೂರಿನ ಚಂದ್ರಶೇಖರ್ ಕೊಲೆ ಪ್ರಕರಣ ಸಂಬಂಧ ಕರ್ತವ್ಯ ಲೋಪವೆಸಗಿದ ಆರೋಪದ ಮೇರೆಗೆ ಕೊಡಿಗೇಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಸೇರಿ ಮೂವರು ಪೊಲೀಸರ ತಲೆದಂಡವಾಗಿದೆ.
ಇನ್ಸ್’ಪೆಕ್ಟರ್ ರಾಜಣ್ಣ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಜಣ್ಣ ಹಾಗೂ ಕಾನ್‌ಸ್ಟೇಬಲ್ ಜಯರಾಮ್ ಅಮಾನತುಗೊಂಡಿದ್ದು, ಈ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಇಲಾಖಾ ಮಟ್ಟದ ವಿಚಾರಣೆಗೆ ಆಯುಕ್ತ ಟಿ.ಸುನೀಲ್ ಕುಮಾರ್ ಆದೇಶಿಸಿದ್ದಾರೆ. ಈ ಘಟನೆ ಸಂಬಂಧ ಆಯುಕ್ತರಿಗೆ ಈಶಾನ್ಯ ವಿಭಾಗದ ಡಿಸಿಪಿ ವರದಿ ಸಲ್ಲಿಸಿದ್ದರು. ಭದ್ರಪ್ಪ ಲೇಔಟ್‌ನಲ್ಲಿ ಗೆಳೆಯನ ಜತೆ ಭಾನುವಾರ ರಾತ್ರಿ ಚಂದ್ರಶೇಖರ್ ತೆರಳುವಾಗ ಈ ಹತ್ಯೆ ನಡೆದಿತ್ತು. ಡ್ರಾಪ್ ಕೇಳುವ ನೆಪದಲ್ಲಿ ಚಂದ್ರಶೇಖರ್ ಅವರ ಬೈಕ್ ಅಡ್ಡಗಟ್ಟಿದ್ದ ಕಿಡಿಗೇಡಿಗಳು, ಬಳಿಕ ಅವರಿಗೆ ಚಾಕು ಇರಿದು ಹಣ ಹಾಗೂ ಮೊಬೈಲ್ ದೋಚಿದ್ದರು. ಹಲ್ಲೆಗೊಳಗಾಗಿದ್ದ ಚಂದ್ರಶೇಖರ್ ಚಿಕಿತ್ಸೆ ಫಲಿಸದೆ ಸೋಮವಾರ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ತಮ್ಮ ಆಸ್ಪತ್ರೆಗೆ ಚೂರಿ ಇರಿತಕ್ಕೊಳಗಾಗಿ ಚಂದ್ರಶೇಖರ್ ದಾಖಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ಭಾನುವಾರ ರಾತ್ರಿ ಸುಮಾರು 12ಕ್ಕೆ ಕೊಡಿಗೇಹಳ್ಳಿ ಠಾಣೆಗೆ ಆಸ್ಪತ್ರೆಯಿಂದ ಮೆಮೋ ಬಂದಿತ್ತು. ಆದರೆ ಈ ವರದಿಗೆ ಪ್ರಾಮುಖ್ಯತೆ ನೀಡದೆ ಪೊಲೀಸರು ನಿರ್ಲಕ್ಷ್ಯಿಸಿದ್ದರು. ಮರು ದಿನ ಸೋಮವಾರ ಸಂಜೆ 7ಕ್ಕೆ ಘಟನೆ ಕುರಿತು ಎಫ್‌ಐಆರ್ ದಾಖಲಾಯಿತು. ಅದೇ ದಿನ ರಾತ್ರಿ ಚಿಕಿತ್ಸೆ ಫಲಿಸದೆ ಗಾಯಾಳು ಮೃತಪಟ್ಟಿದ್ದರು ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾ ಕೃಷ್ಣಸ್ವಾಮಿ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಈ ಘಟನೆ ಸಂಬಂಧ ಪ್ರಾಥಮಿಕ ಹಂತದ ತನಿಖಾ ಪ್ರಕ್ರಿಯೆಯಲ್ಲಿ ಕರ್ತವ್ಯ ಲೋಪವೆಸಗಿರುವ ಬಗ್ಗೆ ವಿಚಾರಣೆ ನಡೆಸಲಾಯಿತು. ಆಗ ಇನ್ಸ್‌ಪೆಕ್ಟರ್ ರಾಜಣ್ಣ, ಕೃತ್ಯ ನಡೆದ ಠಾಣೆಯಲ್ಲಿ ರಾತ್ರಿ ಪಾಳೆಯ ಕರ್ತವ್ಯದಲ್ಲಿದ್ದ ಎಎಸ್‌ಐ ರಾಜಣ್ಣ ಹಾಗೂ ಜಯರಾಮ್ ಲೋಪ ಕಂಡು ಬಂದಿತು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.
2ನೇ ಬಾರಿ ಇನ್ಸ್‌ಪೆಕ್ಟರ್ ಅಮಾನತು: ಕೆಲ ತಿಂಗಳ ಹಿಂದೆ ಕೊಡಿಗೇಹಳ್ಳಿಯಲ್ಲಿ ಗಸ್ತು ಪೊಲೀಸರ ಮೇಲೆ ಹಲ್ಲೆ ನಡೆಸಿ ಮಧ್ಯಪ್ರದೇಶದ ದರೋಡೆಕೋರರು ಬಂದೂಕು ಕಸಿದು ಪರಾರಿ ಪ್ರಕರಣದಲ್ಲೂ ಇನ್ಸ್‌ಪೆಕ್ಟರ್ ರಾಜಣ್ಣ ಅಮಾನುತುಗೊಂಡಿದ್ದರು. ಈಗ ಎರಡನೇ ಬಾರಿ ಅವರ ತಲೆದಂಡವಾಗಿದೆ.
