ರೋಷನ್‌ ಬೇಗ್‌ ಪುತ್ರ ರುಮನ್‌ ಬೇಗ್‌ ಮತ್ತು ಆತನ ವ್ಯವಹಾರದಲ್ಲಿ ಪಾಲುದಾರರಾದ ಬಿ.ಆರ್‌.ನಾಯ್ದು ಅವರು ಸುಜಯ್‌ ಅಡ್ವರ್ಟೈಸ್‌ಮೆಂಟ್‌ ಹೆಸರಿನಲ್ಲಿ ನಗರದ ಪ್ರಮುಖ ಭಾಗಗಳಲ್ಲಿ ಸಾವಿರಾರು ಅನಧಿಕೃತ ಜಾಹೀರಾತು ಫಲಕಗಳನ್ನು ಅಳಡಿಸಿದ್ದಾರೆ. ಇದರಿಂದ ಪಾಲಿಕೆಗೆ ಕೋಟ್ಯಂತರ ರು. ವಂಚನೆ ಮಾಡುತ್ತಿದ್ದಾರೆ. ಹೀಗಾಗಿ ರೋಷನ್‌ ಬೇಗ್‌ ಅವರನ್ನು ಸಿಎಂ ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು. ಜತೆಗೆ ಅವರು ಕಬಳಿಸಿರುವ ಸರ್ಕಾರಿ ಸ್ವತ್ತುಗಳನ್ನು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಬೆಂಗಳೂರು (ನ.26): ‘‘ನಗರದಲ್ಲಿ ನೂರಾರು ಕೋಟಿ ರು.ಬೆಲೆಬಾಳುವ ಹತ್ತಾರು ಸರ್ಕಾರಿ ಸ್ವತ್ತುಗಳನ್ನು ಸಚಿವ ರೋಷನ್‌ ಬೇಗ್‌ ತಮ್ಮ ಅಧಿಕಾರ ಬಳಸಿ ಕಬಳಿಸಿದ್ದಾರೆ. ಎಲ್ಲ ಹಗರಣಗಳ ಕುರಿತು ಉನ್ನತ ಮಟ್ಟದ ತನಿಖೆಗೆ ಸರ್ಕಾರ ಆದೇಶಿಸಬೇಕು,'' ಎಂದು ಬಿಜೆಪಿ ಗ್ರಾಮಾಂತರ ಮತ್ತು ನಗರ ವಕ್ತಾರ ಎನ್‌ ಆರ್‌ ರಮೇಶ್‌ ಒತ್ತಾಯಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದಾಖಲೆ ಬಿಡುಗಡೆ ಮಾಡಿದ ರಮೇಶ್‌, ‘‘ತಿಮ್ಮಯ್ಯ ರಸ್ತೆಯ ಪಾಲಿಕೆಯ ಸ್ವತ್ತನ್ನು ಬೇಗ್‌ ಮಾಲೀಕತ್ವದ ‘ದಿನೇಶ್‌ ಪಬ್ಲಿಕೇಷನ್ಸ್‌ ಪ್ರೈವೇಟ್‌ ಲಿಮಿಟೆಡ್‌' ಸಂಸ್ಥೆಗೆ ನೀಡಿ ಪಾಲಿಕೆ ಕೈಗೊಂಡಿದ್ದ ನಿರ್ಣಯವನ್ನು ಹೈಕೋರ್ಟ್‌ ರದ್ದು ಮಾಡಿದೆ. ಜತೆಗೆ ಕೂಡಲೇ ಸ್ವತ ವಶಕ್ಕೆ ಪಡೆಯುವಂತೆ ಪಾಲಿಕೆಗೆ ಆದೇಶಿಸಿದೆ. ಆದರೂ ಪಾಲಿಕೆಯ ಅಧಿಕಾರಿಗಳು ಸಚಿವರ ಪ್ರಭಾವಕ್ಕೆ ಮಣಿದು ವಶಕ್ಕೆ ಪಡೆಯಲು ಮುಂದಾಗುತ್ತಿಲ್ಲ,'' ಎಂದು ದೂರಿದರು.

ರೋಷನ್‌ ಬೇಗ್‌ ಪುತ್ರ ರುಮನ್‌ ಬೇಗ್‌ ಮತ್ತು ಆತನ ವ್ಯವಹಾರದಲ್ಲಿ ಪಾಲುದಾರರಾದ ಬಿ.ಆರ್‌.ನಾಯ್ದು ಅವರು ಸುಜಯ್‌ ಅಡ್ವರ್ಟೈಸ್‌ಮೆಂಟ್‌ ಹೆಸರಿನಲ್ಲಿ ನಗರದ ಪ್ರಮುಖ ಭಾಗಗಳಲ್ಲಿ ಸಾವಿರಾರು ಅನಧಿಕೃತ ಜಾಹೀರಾತು ಫಲಕಗಳನ್ನು ಅಳಡಿಸಿದ್ದಾರೆ. ಇದರಿಂದ ಪಾಲಿಕೆಗೆ ಕೋಟ್ಯಂತರ ರು. ವಂಚನೆ ಮಾಡುತ್ತಿದ್ದಾರೆ. ಹೀಗಾಗಿ ರೋಷನ್‌ ಬೇಗ್‌ ಅವರನ್ನು ಸಿಎಂ ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು. ಜತೆಗೆ ಅವರು ಕಬಳಿಸಿರುವ ಸರ್ಕಾರಿ ಸ್ವತ್ತುಗಳನ್ನು ವಶಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

‘‘ತಿಮ್ಮಯ್ಯ ರಸ್ತೆಯಲ್ಲಿರುವ ಕೆಎಸ್‌ಎಫ್‌ಸಿ ಕೇಂದ್ರ ಕಚೇರಿಯ ಪಕ್ಕದ ಸ್ವತ್ತಿನ ಸಂಖ್ಯೆ 1/1-2ರ ಭೂಮಿ ಪಾಲಿಕೆಯ ಸ್ವತ್ತಾಗಿತ್ತು. ಧರ್ಮಸಿಂಗ್‌ ಸಿಎಂ ಆಗಿದ್ದ ವೇಳೆ ಸಚಿವರಾಗಿದ್ದ ರೋಷನ್‌ ಬೇಗ್‌ ತಮ್ಮ ಪ್ರಭಾವ ಬಳಸಿ 10 ಸಾವಿರ ಚ.ಅಡಿ ಜಾಗವನ್ನು ಬಹಳ ಕಡಿಮೆಗೆ ಬೆಲೆಗೆ ಅವರ ಮಾಲೀಕತ್ವದ ‘ದಿನೇಶ್‌ ಪಬ್ಲಿಕೇಷನ್‌ ಪ್ರೈವೇಟ್‌ ಸಂಸ್ಥೆ'ಗೆ ಮಾರಾಟ ಮಾಡುವ ನಿರ್ಣಯ ತೆಗೆದುಕೊಳ್ಳಲಾಗಿದೆ. ಈ ಕುರಿತು ಕೆಲ ಆರ್‌ಟಿಐ ಕಾರ್ಯ​ಕರ್ತ​ರು ಸಲ್ಲಿಸಿದ ಪಿಐಎಲ್‌ ವಿಚಾರಣೆ ನಡೆಸಿದ ಹೈಕೋರ್ಟ್‌ ‘ಸದರಿ ಸ್ವತ್ತನ್ನು ಪಾಲಿಕೆ ತನ್ನ ವಶಕ್ಕೆ ಕೂಡಲೇ ಪಡೆದುಕೊಳ್ಳಬೇಕು ಮತ್ತು ತಕ್ಷಣವೇ ಸಂಸ್ಥೆಗೆ ನೀಡಿರುವ ಕ್ರಯಪತ್ರ ರದ್ದು ಪಡಿಸಲಾಗಿದೆ ಎಂದು ಆದೇಶಿ​ಸಿತ್ತು. ಆನಂತರ ರೋಷನ್‌ಬೇಗ್‌ ಸುಪ್ರೀಂ ನಿಂದ 2 ತಿಂಗಳ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆಯ ಅವಧಿ ಮುಗಿದು ಹಲವು ವರ್ಷಗಳು ಕಳೆದರೂ ಅಧಿಕಾರಿಗಳು ಸ್ವತ್ತನ್ನು ವಶಕ್ಕೆ ಪಡೆಯಲು ಮುಂದಾಗಿಲ್ಲ,'' ಎಂದು ರಮೇಶ್‌ ಆರೋಪಿಸಿದರು.

ಪಾಕಿಸ್ತಾನಕ್ಕೆ ಹೋದವರ ಆಸ್ತಿಯಲ್ಲಿ ವಾಣಿಜ್ಯ ಸಂಕೀರ್ಣ

ದೇಶ ವಿಭಜನೆಯ ನಂತರ ಪಾಕಿಸ್ತಾನಕ್ಕೆ ವಲಸೆ ಹೋದ ಮಲ್ಲಿಕಾ ಬೇಗಂ ಎಂಬುವವರ ಇನ್‌ಫೆಂಟ್ರಿ ರಸ್ತೆಯ 25,408 ಚದರ ಅಡಿ ವಿಸ್ತೀರ್ಣದ ಜಾಗವನ್ನು ರೋಷನ್‌ ಬೇಗ್‌ ತಮ್ಮ ಪ್ರಭಾವ ಬಳಸಿ, ತಮ್ಮ ಹಿಂಬಾಲಕರಿಂದ ನಕಲಿ ದಾಖಲೆ ಸೃಷ್ಟಿಸಿ ಎಂಬಸಿ ಕ್ಲಾಸಿಕ್‌ ಪ್ರೈವೇಟ್‌ ಲಿ.ಸಂಸ್ಥೆಯೊಂದಿಗೆ ಸ್ವತ್ತಿನಲ್ಲಿ ಜಂಟಿ ಅಭಿವೃದ್ಧಿ ಕರಾರನ್ನು ಮಾಡಿಕೊಂಡು ಬೃಹತ್‌ ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದ್ದಾರೆ. ನಕಲಿ ದಾಖಲೆಗಳು ಎಂಬುದು ತಿಳಿದಿದ್ದರೂ ಪಾಲಿಕೆಯ ಅಧಿಕಾರಿಗಳು ಖಾತಾ ಮಾಡಿ ಕೊಟ್ಟು, ಬೃಹತ್‌ ವಾಣೀಜ್ಯ ಕಟ್ಟಡದ ನಕ್ಷೆಯನ್ನೂ ಮಂಜೂರು ಮಾಡಿದ್ದಾರೆ ಎಂದು ರಮೇಶ್‌ ದೂರಿದ್ದಾರೆ.