ಎಲ್ಲಾ ಮೋದಿಗಳು ಕಳ್ಳರೇ: ರಾಹುಲ್ ವಿರುದ್ಧ ಬ್ರಿಟನ್ ಕೋರ್ಟ್‌ಲ್ಲಿ ಕೇಸು ದಾಖಲು| ಐಪಿಎಲ್ ಮಾಜಿ ಸಿಒಒ ಲಲಿತ್ ಮೋದಿ ಘೋಷಣೆ| ಕೋಲಾರ ರ‍್ಯಾಲಿಯಲ್ಲಿ ಮಾಡಿದ ಟೀಕೆ ವಿರುದ್ಧ ಕೇಸ್
ನವದೆಹಲಿ[ಏ.20]: ಎಲ್ಲಾ ಮೋದಿಗಳು ಕಳ್ಳರೇ ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬ್ರಿಟನ್ ಕೋರ್ಟ್‌ನಲ್ಲಿ ಕೇಸು ದಾಖಲಿಸುವುದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ ಮಾಜಿ ಸಿಒಒ ಲಲಿತ್ ಮೋದಿ ಘೋಷಿಸಿದ್ದಾರೆ. ಇದೇ ಆರೋಪಕ್ಕಾಗಿ ಬಿಹಾರ ಡಿಸಿಎಂ ಸುಶೀಲ್ ಕುಮಾರ್ ಮೋದಿ ಗುರುವಾರ ಬಿಹಾರದಲ್ಲಿ ರಾಹುಲ್ ವಿರುದ್ಧ ಮಾನನಷ್ಟಕೇಸು ದಾಖಲಿಸಿದ್ದರು ಅದರ ಬೆನ್ನಲ್ಲೇ ಲಲಿತ್ ಮೋದಿ ಹೇಳಿಕೆ ಹೊರಬಿದ್ದಿದೆ.
ಈ ಕುರಿತು ಟ್ವೀಟರ್‌ನಲ್ಲಿ ಹೇಳಿಕೆ ನೀಡಿರುವ ಲಲಿತ್ ‘ಎಲ್ಲಾ ಮೋದಿಗಳೂ ಕಳ್ಳರೇ ಎಂದು ಪಪ್ಪು ರಾಹುಲ್ ಗಾಂಧಿ ಹೇಳಿದ್ದಾರೆ. ಅವರ ಈ ಹೇಳಿಕೆ ವಿರುದ್ಧ ನಾನು ಬ್ರಿಟನ್ ಕೋರ್ಟ್‌ನಲ್ಲಿ ಕೇಸು ದಾಖಲಿಸಲಿದ್ದೇನೆ. ವಾಸ್ತವ ವಿಷಯವೇನೆಂದರೆ ಕಳೆದ 5 ದಶಕಗಳಲ್ಲಿ ದೇಶವನ್ನು ಹಾಡಹಗಲೇ ಲೂಟಿ ನಡೆಸಿದ್ದು ಗಾಂಧೀ ಕುಟುಂಬ ಅಲ್ಲದೇ ಮತ್ಯಾರೂ ಅಲ್ಲ’ ಎಂದು ಕಿಡಿಕಾರಿದ್ದಾರೆ.
ಏ.13ರಂದು ಕೋಲಾರದಲ್ಲಿ ಕಾಂಗ್ರೆಸ್ ರ‍್ಯಾಲಿ ಉದ್ದೇಶಿಸಿ ಮಾತನಾಡಿದ್ದ ರಾಹುಲ್, ‘ನನ್ನೊದೊಂದು ಪ್ರಶ್ನೆಯಿದೆ. ಎಲ್ಲಾ ಕಳ್ಳರ ಹೆಸರಿನ ಮುಂದೆ ಮೋದಿ ಎಂದೇಕೆ ಇರುತ್ತದೆ. ಅದು ನೀರವ್ ಮೋದಿ ಆಗಿರಬಹುದು, ಲಲಿತ್ ಮೋದಿ ಆಗಿರಬಹುದು ಅಥವಾ ನರೇಂದ್ರ ಮೋದಿ ಆಗಿರಬಹುದು? ಇನ್ನೂ ಇಂಥ ಎಷ್ಟು ಮೋದಿಗಳು ಹಗರಣಗಳ ಮೂಲಕ ಹೊರಬರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದರು.
ಅವರ ಈ ಹೇಳಿಕೆಗೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಕೂಡಾ ಕಿಡಿಕಾರಿದ್ದರು. ‘ಕಾಂಗ್ರೆಸ್ ಮತ್ತು ಅವರ ಮಿತ್ರ ಪಕ್ಷಗಳ ನಾಯಕರು ಎಲ್ಲಾ ಮೋದಿಗಳೂ ಕಳ್ಳರು ಎಂದು ಆರೋಪಿಸುತ್ತಿದ್ದಾರೆ. ನನ್ನ ಹಿಂದುಳಿದ ವರ್ಗದ ಬಗ್ಗೆ ಇಂಥ ಟೀಕೆ ಅವರಿಗೆ ಏನು ಪರಿಣಾಮ ಉಂಟು ಮಾಡುತ್ತದೆ ಎಂಬುದು ಅವರಿಗೆ ಗೊತ್ತಿಲ್ಲ. ಈ ಬಾರಿ ಅವರು ಇಂಥ ಟೀಕೆಯ ಮಿತಿಯನ್ನು ಟಾಟಿ ಸಾಗಿದ್ದಾರೆ. ಇದು ಇಡೀ ಹಿಂದುಳಿದ ವರ್ಗಕ್ಕೆ ಅವರು ಮಾಡಿದ ಅವಮಾನ’ ಎಂದು ಸೊಲ್ಲಾಪುರ ರ‍್ಯಾಲಿಯಲ್ಲಿ ಟೀಕಿಸಿದ್ದರು.
