ಲಖನ್‌ ಜಾರಕಿಯೊಳಿ ಶೀಘ್ರ ಬಿಜೆಪಿ ಸೇರ್ಪಡೆ ಸಂಭವ

First Published 16, Mar 2018, 8:04 AM IST
Lakhan Jarkiholi Join BJP
Highlights

ಈ ಬಾರಿ ವಿಧಾನಸಭೆ ಚುನಾವಣೆಗೆ ಯಮಕನಮರಡಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ದೃಢ ನಿರ್ಧಾರ ಮಾಡಿರುವ ಉದ್ಯಮಿ ಲಖನ್‌ ಜಾರಕಿಹೊಳಿ ಅವರು ಇದಕ್ಕಾಗಿ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ.

ಬೆಳಗಾವಿ: ಈ ಬಾರಿ ವಿಧಾನಸಭೆ ಚುನಾವಣೆಗೆ ಯಮಕನಮರಡಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕು ಎಂದು ದೃಢ ನಿರ್ಧಾರ ಮಾಡಿರುವ ಉದ್ಯಮಿ ಲಖನ್‌ ಜಾರಕಿಹೊಳಿ ಅವರು ಇದಕ್ಕಾಗಿ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ.

ಯಮಕನಮರಡಿ ಕ್ಷೇತ್ರವನ್ನು ಸಹೋದರ, ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಪ್ರತಿನಿಧಿಸುತ್ತಿದ್ದಾರೆ. ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಹಟ ತೊಟ್ಟಿರುವ ಲಖನ್‌ ಟಿಕೆಟ್‌ಗಾಗಿ ಕಾಂಗ್ರೆಸ್‌ ಮುಖಂಡರ ಮನವೊಲಿಸುವಲ್ಲಿ ವಿಫಲವಾಗಿ ಈಗ ಬಿಜೆಪಿ ಬಾಗಿಲು ಬಡಿದಿದ್ದಾರೆ. ಈ ಮೂಲಕ ಸಹೋದರ ಸತೀಶ್‌ ವಿರುದ್ಧವೇ ತೊಡೆತಟ್ಟಲು ನಿರ್ಧರಿಸಿದ್ದಾರೆ.

ಈ ಹಿಂದೆ ಯಮಕನಮರಡಿ ಕ್ಷೇತ್ರದ ಟಿಕೆಟ್‌ ತಮಗೇ ನೀಡುವಂತೆ ಹಿರಿಯ ಸಹೋದರರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್‌ ಜಾರಕಿಹೊಳಿ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಮೂಲಕ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅವರ ಮೇಲೆ ಒತ್ತಡ ಹೇರಿದ್ದರು. ಆದರೆ, ಈ ಕುರಿತು ಯಾವುದೇ ಪೂರಕ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಲಖನ್‌ ತಮ್ಮ ರಾಜಕೀಯ ಅದೃಷ್ಟಪರೀಕ್ಷೆಗಾಗಿ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಬಿಜೆಪಿ ಸೇರ್ಪಡೆ ವಿಚಾರವಾಗಿ ಈಗಾಗಲೇ ಲಖನ್‌ ಅವರು ಬಿಜೆಪಿ ರಾಜ್ಯ ಮುಖಂಡರ ಜೊತೆಗೆ ಒಂದು ಸುತ್ತಿನ ಮಾತುಕತೆಯನ್ನೂ ನಡೆಸಿದ್ದಾರೆ ಎನ್ನಲಾಗಿದ್ದು, ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ. ಲಖನ್‌ ಅವರ ಈ ನಡೆ ತೀವ್ರ ಕುತೂಹಲ ಮೂಡಿಸಿದೆ.

ಯಮಕನಮರಡಿ ಕ್ಷೇತ್ರವೇ ಏಕೆ?: ಲಖನ್‌ಗೂ ಮತ್ತು ಈ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ. ಹಿಂದಿನಿಂದಲೂ ಈ ಕ್ಷೇತ್ರದ ಮೇಲೆ ಪ್ರೀತಿ ಹೊಂದಿರುವ ಲಖನ್‌, ಇಲ್ಲಿ ಸಾಕಷ್ಟುಸಂಖ್ಯೆಯಲ್ಲಿ ತಮ್ಮ ಬೆಂಬಲಿಗರನ್ನು ಹೊಂದಿದ್ದಾರೆ. ಬಿಜೆಪಿ ಟಿಕೆಟ್‌ ವಿಚಾರ ಇನ್ನಷ್ಟೇ ಅಂತಿಮವಾಗಬೇಕಿದೆ.

ಯಮಕನಮರಡಿ ಕ್ಷೇತ್ರದಲ್ಲಿ ಪಿಎಗಳ ಸಂಸ್ಕೃತಿಗೆ ಕೊನೆ ಹಾಡಲೆಂದೇ ನಾನು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ. ಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ನೀಡುವಂತೆ ಬಿಜೆಪಿಗೆ ಕೋರಿದ್ದೇನೆ. ಈಗಾಗಲೇ ಬಿಜೆಪಿ ನಾಯಕರ ಜೊತೆಗೆ ಒಂದು ಸುತ್ತಿನ ಮಾತುಕತೆ ನಡೆದಿದೆ. ಶೀಘ್ರವೇ ಬಿಜೆಪಿ ಸೇರುತ್ತೇನೆ.

- ಲಖನ್‌ ಜಾರಕಿಹೊಳಿ, ಉದ್ಯಮಿ

loader