ದುಬೈ ನಿವಾಸಿ ಎಂದು ಹೇಳಿಕೊಂಡಿದ್ದ ವಂಚಕಿ | ಕಸ್ಟಮ್ಸ್‌ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿರುವುದಾಗಿ ನಾಟಕ | ಉಗ್ರ ಚಟುವಟಿಕೆ ನಡೆಸಿರುವ ಬೆದರಿಕೆ ಹಾಕಿ ರೂ.10 ಲಕ್ಷಕ್ಕೆ ಬೇಡಿಕೆ
ಬೆಂಗಳೂರು: ಫೇಸ್ಬುಕ್'ನಲ್ಲಿ ಪರಿಚಿತಳಾದವಳ ವಂಚನೆ ಜಾಲಕ್ಕೆ ಸಿಲುಕಿ ನಗರದ ಸಾಫ್ಟ್'ವೇರ್ ಎಂಜಿನಿಯರ್ ರೂ.1.40 ಲಕ್ಷ ಕಳೆದುಕೊಂಡಿದ್ದಾರೆ. ಹುಳಿಮಾವು ಸಮೀಪದ ಗೊಟ್ಟಿಗೆರೆ ನಿವಾಸಿ ಗೌತಮ್ ಗೋವಿಂದ ಶರ್ಮಾ (45) ಹಣ ಕಳೆದುಕೊಂಡವರು. ಫೇಸ್ಬುಕ್ನಲ್ಲಿ ಸ್ನೇಹ ಬೆಳೆಸಿ ತಾನು ದುಬೈ ನಿವಾಸಿ ಎಂದು ನಂಬಿಸಿದ್ದ ಅಲಿಶಾ ಅಲೆಗ್ಸಾಂಡರ್ ಹೆಸರಿನ ಮಹಿಳೆ, ಕೇವಲ 2 ತಿಂಗಳಲ್ಲಿ ಗೌತಮ್ಗೆ ವಂಚನೆ ಮಾಡಿದ್ದಾಳೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹುಳಿಮಾವು ಠಾಣೆ ಪೊಲೀಸರು, ವಂಚಕಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಪ್ರಕರಣದ ಹಿನ್ನೆಲೆ: ಗೌತಮ್ ಫೇಸ್'ಬುಕ್ ಖಾತೆಗೆ ಅಕ್ಟೋಬರ್ 1ರಂದು ಅಲಿಶಾ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದಳು. ಸ್ನೇಹ ವಿನಂತಿಯನ್ನು ಗೌತಮ್ ಒಪ್ಪಿದ್ದು, ಚಾಟ್ನಿಂದ ಆರಂಭವಾದ ಸ್ನೇಹ ಪರಸ್ಪರ ಮೊಬೈಲ್ ಸಂಖ್ಯೆ ವಿನಿಮಯ, ಸಂಭಾಷಣೆ ನಡೆಸುವ ಮಟ್ಟಕ್ಕೆ ತಲುಪಿದೆ. ಇಬ್ಬರು ಕೆಲ ಕಾಲ ಚಾಟಿಂಗ್, ಸಂಭಾಷಣೆ ಮುಂದುವರಿಸಿದ್ದರು. ಈ ನಡುವೆ ಭೇಟಿಯಾಗಲು ದುಬೈನಿಂದ ಬೆಂಗಳೂರಿಗೆ ಬರುವುದಾಗಿ ಅಲಿಶಾ ಹೇಳಿದ್ದಳು. ಗೌತಮ್ ಕೂಡ ಭೇಟಿಗೆ ಕಾತರರಾಗಿದ್ದರು.
ಬ್ರಿಟನ್ ಪೌಂಡ್: ಅಲಿಶಾ ಡಿ.2ರಂದು ಬೆಳಗ್ಗೆ ಗೌತಮ್ಗೆ ಕರೆ ಮಾಡಿ, ತಾನು ಭಾರತಕ್ಕೆ ಬರುತ್ತಿರುವುದಾಗಿ ಹೇಳಿದ್ದಾಳೆ. ಮಧ್ಯಾಹ್ನದ ವೇಳೆಗೆ ಮತ್ತೆ ಕರೆ ಮಾಡಿ, ತಾನು ನವದೆಹಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದ್ದೇನೆ. ಆದರೆ, ಕಸ್ಟಮ್ಸ್ ಅಧಿಕಾರಿಗಳು ತನ್ನನ್ನು ವಶಕ್ಕೆ ಪಡೆದು ಸಮಸ್ಯೆಯಲ್ಲಿ ಸಿಲುಕಿರುವುದಾಗಿ ಹೇಳಿದ್ದಾಳೆ. ಈಗ ಕಸ್ಟಮ್ಸ್ ಅಧಿಕಾರಿಯೊಬ್ಬರು ಮಾತನಾಡಲಿದ್ದಾರೆ ಎಂದು ವ್ಯಕ್ತಿಯೊಬ್ಬನಿಗೆ ಫೋನ್ ನೀಡಿದ್ದಾಳೆ. ಆ ಅಪರಿಚಿತ ವ್ಯಕ್ತಿ ತಾನು ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ‘ನಿಮ್ಮ ಸ್ನೇಹಿತೆ ವೀಸಾ ಪಡೆಯದೇ ಭಾರತ ಪ್ರವೇಶಿಸಿದ್ದಾರೆ. ಅಲ್ಲದೆ, 20 ಲಕ್ಷ ಬ್ರಿಟನ್ ಪೌಂಡ್ಸ್ ಹೊಂದಿದ್ದಾರೆ. ಅಕ್ರಮವಾಗಿ ಭಾರತ ಪ್ರವೇಶಿಸಿದ್ದಲ್ಲದೇ ಅಕ್ರಮವಾಗಿ ಹಣ ಸಾಗಣೆ ಮಾಡಿದ್ದಾರೆ. ಹೀಗಾಗಿ ರೂ.2 ಲಕ್ಷ ದಂಡ ಪಾವತಿಸಬೇಕು. ಇಲ್ಲದಿದ್ದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುವುದಾಗಿ' ಹೇಳಿದ್ದಾನೆ.
ಹಣ ಕೊಟ್ಟರೆ ಬಿಡುವೆ: ಅಲಿಶಾ ಸಮಸ್ಯೆಯಲ್ಲಿ ಸಿಲುಕಿದ್ದಾಳೆ ಎಂದು ನಂಬಿದ ಗೌತಮ್, ತಮ್ಮ ಬಳಿ ಸದ್ಯ ರೂ.1.40 ಲಕ್ಷ ಹಣವಿದ್ದು, ಅದನ್ನು ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಒಪ್ಪಿದ ಕಸ್ಟಮ್ಸ್ ಅಧಿಕಾರಿ ಸೋಗಿನ ವ್ಯಕ್ತಿ, ಬ್ಯಾಂಕ್ ಖಾತೆಯ ಮಾಹಿತಿ ನೀಡಿದ್ದಾನೆ. ಬಳಿಕ ಗೌತಮ್ ರೂ.1.40 ಲಕ್ಷವನ್ನು ಆನ್ಲೈನ್ ಮೂಲಕ ಖಾತೆಗೆ ಜಮೆ ಮಾಡಿದ್ದಾರೆ. ಮತ್ತೆ ಒಂದು ತಾಸಿನ ಬಳಿಕ ಗೌತಮ್ಗೆ ಕರೆ ಮಾಡಿರುವ ಆ ವ್ಯಕ್ತಿ, ‘ಉಗ್ರ ಚುಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದಡಿ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸುತ್ತೇನೆ. ರೂ.10 ಲಕ್ಷ ಕೊಟ್ಟರೆ ಬಿಡುತ್ತೇನೆ' ಎಂದು ಬೆದರಿಸಿ ಕರೆ ಸ್ಥಗಿತಗೊಳಿಸಿದ್ದಾನೆ.
ಈ ವೇಳೆ ಅನುಮಾನಗೊಂಡ ಗೌತಮ್, ತಕ್ಷಣ ಅಲಿಶಾಗೆ ಕರೆ ಮಾಡಿದಾಗ ಆಕೆ ಮಾತಿನದಾಟಿಯಲ್ಲಿ ಬದಲಾವಣೆ ಕಂಡು ಬಂದಿದೆ. ಈ ವೇಳೆ ತಾನು ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಬಳಿಕ ವಂಚನೆ ಕುರಿತು ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನ ವೇಳೆ ಗೌತಮ್ ನೀಡಿದ್ದ ಅಲಿಶಾ ಮೊಬೈಲ್ ಸಂಖ್ಯೆ ಹಾಗೂ ಕಸ್ಟಮ್ಸ್ ಅಧಿಕಾರಿ ಸೋಗಿನ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗ ಈ ಎರಡೂ ಸಂಖ್ಯೆಗಳು ಚಾಲ್ತಿಯಲ್ಲಿಲ್ಲ ಎಂಬುದು ತಿಳಿಯಿತು. ಖಾತೆಗೆ ಹಣ ಹಾಕಿಸಿಕೊಂಡ ಬಳಿಕ ವಂಚಕರು ಸಿಮ್ ಸ್ಥಗಿತಗೊಳಿಸಿದ್ದಾರೆ. ತನಿಖೆ ಮುಂದುವರಿದಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಶೋಧಕಾರ್ಯ ಮುಂದುವರಿದಿದೆ ಎಂದು ಹುಳಿಮಾವು ಪೊಲೀಸರು ತಿಳಿಸಿದ್ದಾರೆ.
(ಕನ್ನಡಪ್ರಭ ವಾರ್ತೆ)
epaper.kannadaprabha.in
