ಸಿಲಿಕಾನ್ ಸಿಟಿ ಬೆಂಗಳೂರಿಗೆ ಇವತ್ತು ಮತ್ತೆ ಪ್ರತಿಭಟನೆ ಬಿಸಿ ತಟ್ಟಿತ್ತು. ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಬೆನ್ನಲ್ಲೇ 30 ಸಾವಿರ ಬೇರೆ ಬೇರೆ ವಲಯದ ಕಾರ್ಮಿಕರು ಕನಿಷ್ಟ ಕೂಲಿಗಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು (ಸೆ.14): ಸಿಲಿಕಾನ್ ಸಿಟಿ ಬೆಂಗಳೂರಿಗೆ ಇವತ್ತು ಮತ್ತೆ ಪ್ರತಿಭಟನೆ ಬಿಸಿ ತಟ್ಟಿತ್ತು. ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಬೆನ್ನಲ್ಲೇ 30 ಸಾವಿರ ಬೇರೆ ಬೇರೆ ವಲಯದ ಕಾರ್ಮಿಕರು ಕನಿಷ್ಟ ಕೂಲಿಗಾಗಿ ಆಗ್ರಹಿಸಿ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಕನಿಷ್ಟ ವೇತನ 18 ಸಾವಿರ ರೂಪಾಯಿ, ಗುತ್ತಿಗೆ ನೌಕರರನ್ನ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನ ಈಡೆರಿಸುವಂತೆ ಒತ್ತಾಯಿಸಿ ಇಂದು 30 ಸಾವಿರ ಪ್ರತಿಭಟನಾಕಾರರು ಬೆಂಗಳೂರಿಗೆ ಲಗ್ಗೆ ಇಟ್ಟಿದ್ದರು. ಬೆಳಗ್ಗೆ 11 ಗಂಟೆಗೆ ಸಿಟಿ ರೇಲ್ವೇ ನಿಲ್ದಾಣದಿಂದ ಫ್ರೀಡಂ ಪಾರ್ಕ್ವರೆಗೂ ರ್ಯಾಲಿ ನಡೆಸಿದ ಅಂಗನವಾಡಿ ಬಿಸಿಯೂಟ ತಯಾರಕ ನೌಕರರು,ಅಂಚೇ ಕಚೇರಿ , ಪಂಚಾಯತ್ ನೌಕರರು ಸರ್ಕಾರದ ವಿರುದ್ಧ ಹೋರಾಟ ನಡೆಸಿದರು. 120 ಕ್ಕೂ ಹೆಚ್ಚು ಸಂಘಟನೆಗಳ 30 ಸಾವಿರ ಪ್ರತಿಭಟನಾಕಾರರು ಏಕಾಏಕಿ ಪ್ರತಿಭಟನೆ ನಡೆಸಿದ್ದರಿಂದ ಕೆ ಆರ್ ಸರ್ಕಲ್, ಆನಂದ ರಾವ್ ಸರ್ಕಲ್ , ಮೆಜೆಸ್ಟಿಕ್, ಸೇರಿದಂತೆ ಹಲವೆಡೆ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರ ಮಧ್ಯೆಯೇ ಕೆ ಆರ್ ಸರ್ಕಲ್ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ ಹೋರಾಟಗಾರರು , ಕನಿಷ್ಟ ವೇತನ 18 ಸಾವಿರ , ಅಸಂಘಟಿತ ಕಾರ್ಮಿಕರಿಗೆ ವಸತಿ, ಭವಿಷ್ಯನಿಧಿ ಹಾಗೂ ಸ್ಮಾರ್ಟ್ ಕಾರ್ಟ್ ಯೋಜನೆ , ಪ್ರತಿ ಜಿಲ್ಲೆಯಲ್ಲೂ ಕಾರ್ಮಿಕ ನ್ಯಾಯಾಲಯ ತೆರೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಉರಿ ಬಿಸಿಲಿನಲ್ಲೂ ಪ್ರತಿಭಟನೆ ನಡೆಸಿದ ಹೋರಾಟಗಾರರು ಕಾರ್ಮಿಕ ಸಚಿವರು ಸ್ಥಳಕ್ಕೆ ಬರುವಂತೆ ಒತ್ತಾಯಿಸಿದರು. ಕೊನೆಗೂ ಪೊಲೀಸ್ ಭದ್ರತೆಯಲ್ಲಿ ಆಗಮಿಸಿದ ಸಚಿವ ಸಂತೋಷ ಲಾಡ್ ಎಂದಿನಂತೆ ಆಶ್ವಾಸನೆ ನೀಡಿದರು. ಆದರೆ ಸಚಿವರು ವೇದಿಕೆ ಮೇಲೆ ನಾವು ನಿಮಗೆ ಉಚಿತ ಅಕ್ಕಿ ನೀಡಿದ್ದೇವೆ ಎಂದು ಹೇಳುತ್ತಿದ್ದಂತೆ ಪ್ರತಿಭಟನಾನಿರತ ಮಹಿಳೆಯರು ಸಚಿವರ ವಿರುದ್ಧ ಘೋಷಣೆ ಕೂಗಿದರು. ನಿಮ್ಮ ಪುಕ್ಕಸಟ್ಟೆ ಅಕ್ಕಿ ಯಾರಿಗೆ ಬೇಕು ನಮ್ಮ ಬೇಡಿಕೆ ಈಡೇರಿಸಿ ಅಂತಾ ತಾಕೀತು ಮಾಡಿದರು. ನಂತರ ಎಲ್ಲರನ್ನು ಸಮಾಧಾನ ಮಾಡಿದ ಸಂತೋಷ ಲಾಡ್ ತಕ್ಷಣ ಸಿಎಂ ಜೊತೆ ಮಾತನಾಡಿ ಸಮಸ್ಯೆ ಬಗ್ಗೆಹರಿಸುವುದಾಗಿ ತಿಳಿಸಿದರು.
