ನವದೆಹಲಿ[ಸೆ.16]: ದೇಶದಲ್ಲಿ ಬಹಳ ಉದ್ಯೋಗಾವಕಾಗಳಿದ್ದು, ಜನರಿಗೆ ಅದರಲ್ಲೂ ಉತ್ತರ ಭಾರತದ ಮಂದಿಗೆ ಕೌಶಲದ ಕೊರತೆಯಿಂದಾಗಿ ಉದ್ಯೋಗ ಸಿಗುತ್ತಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಕಾರ್ಮಿಕ ಖಾತೆ ಸಚಿವ ಸಂತೋಷ್‌ ಗಂಗ್ವಾರ್‌ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ದೇಶದ ಆರ್ಥಿಕತೆಯಿಂದ ಉದ್ಯೋಗ ಕುಸಿಯುತ್ತಿದೆಯಲ್ಲಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ದೇಶದಲ್ಲಿ ಯಾವುದೇ ಉದ್ಯೋಗಾವಕಾಶಗಳ ಕೊರತೆ ಇಲ್ಲ. ಉತ್ತರ ಭಾರತದಲ್ಲಿ ನೇಮಕಾತಿ ಬರುವ ಕಂಪನಿಗಳು ಲಭ್ಯವಿರುವ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಗಳು ಸಿಗುತ್ತಿಲ್ಲ ಎನ್ನುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವರದಿಯಲ್ಲೇ ಕಳೆದುಹೋದ ಕನ್ನಡಿಗರ ಉದ್ಯೋಗ!, 33 ವರ್ಷವಾದ್ರೂ ಶಿಫಾರಸು ಅನುಷ್ಠಾನವಿಲ್ಲ!

ಗಂಗ್ವಾರ್‌ ಈ ಹೇಳಿಕೆಗೆ ಬಿಎಸ್ಪಿ ನಾಯಕಿ ಮಾಯಾವತಿ ಹಾಗೂ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಸೇರಿ ಹಲವು ವಿಪಕ್ಷ ನಾಯಕರು ಆಕ್ರೋಶ ವ್ಯಕ್ತ ಪಡಿಸಿದ್ದು, ಕ್ಷಮೆಗೆ ಆಗ್ರಹಿಸಿವೆ. ಸಚಿವರೇ ನಿಮ್ಮದೇ ಸರ್ಕಾರ ಕಳೆದ 5 ವರ್ಷದಿಂದ ಅಧಿಕಾರದಲ್ಲಿದೆ. ನಿಮ್ಮದೇ ಸರ್ಕಾರ ತಂದ ಆರ್ಥಿಕ ಹಿಂಜರಿತದಿಂದ ಉದ್ಯೋಗಗಳಿಗೆ ಕುತ್ತು ಬಂದಿದೆ. ಯುವಜನತೆ ಈ ಬಗ್ಗೆ ಸಕಾರಾತ್ಮಕ ಕ್ರಮ ತೆಗೆದುಕೊಳ್ಳಲು ಎದುರು ನೋಡುತ್ತಿದೆ. ಆದರೆ ನೀವು ಉತ್ತರ ಭಾರತದವರ ಮೇಲೆ ಗೂಬೆ ಕೂರಿಸುತ್ತಿರುವುದು ಸರಿಯಲ್ಲ ಎಂದು ಪ್ರಿಯಾಂಕಾ ಕಿಡಿ ಕಾರಿದ್ದಾರೆ. ಅಲ್ಲದೆ ಇಂಥ ಹೇಳಿಕೆ ಉತ್ತರ ಭಾರತೀಯರನ್ನು ಅವಮಾನಿಸುವಂತೆ ಎಂದು ಕಿಡಿಕಾರಿದ್ದಾರೆ.