ನೋಟು ರದ್ದತಿಯ ಕ್ರಮವನ್ನು ರಹಸ್ಯವಾಗಿ ನಡೆಸಲಾಗಿದೆ ಎಂದು ಹೇಳುವ ಕೇಂದ್ರ ಸರಕಾರದ ಮಾತಿನಲ್ಲಿ ಎಷ್ಟು ಸತ್ಯಾಂಶವಿದೆ? ಭಾರತೀಯ ರಿಸರ್ವ್ ಬ್ಯಾಂಕಿನ ಸೆಂಟ್ರಲ್ ಬೋರ್ಡ್ ನಿರ್ದೇಶಕರು ನೋಟುಗಳನ್ನು ರದ್ದು ಮಾಡುವಂತೆ ಶಿಫಾರಸು ಮಾಡಿದ್ದೇ ನಿಜವಾಗಿದ್ದರೆ, ಖಾಸಗಿ ಉದ್ಯಮಿಗಳನ್ನು ಹೊರಗಿಟ್ಟು ಮಂಡಳಿಯ ಸಭೆ ನಡೆಸುವುದಾಗಲೀ, ಶಿಫಾರಸು ಮಂಡಿಸುವುದಾಗಲೀ ಮಾಡಲು ಆರ್'ಬಿಐ ಕಾನೂನಿನಲ್ಲಿ ಅವಕಾಶವೇ ಇಲ್ಲ. ಹಾಗಾಗಿ ಇದನ್ನು ಗೌಪ್ಯ ಅಥವಾ ರಹಸ್ಯ ಕ್ರಮ ಎಂದು ಹೇಳಲು ಹೇಗೆ ಸಾಧ್ಯ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ರೂಪದ ವಿಶ್ಲೇಷಣೆ ಇಲ್ಲಿದೆ.

ಲೇಖಕರು: ಕೆ.ವಿ. ಧನಂಜಯ್‌, ಸುಪ್ರೀಂಕೋರ್ಟ್ ವಕೀಲರು

ನರೇಂದ್ರ ಮೋದಿಯವರ ಕೇಂದ್ರ ಸರ್ಕಾರ ನವೆಂಬರ್‌ 8ರಂದು ಇತಿಹಾಸದಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ದಿಢೀರನೇ 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿತು. ಈ ಕ್ರಮಕ್ಕೆ ಅಗತ್ಯ ತಯಾರಿಗಳು ಪ್ರಧಾನಿ ಮತ್ತು ರಿಸವ್‌ರ್‍ ಬ್ಯಾಂಕ್‌ ಗವರ್ನರ್‌ ಹೊರತುಪಡಿಸಿ ಮೂರನೆಯವರಿಗೆ ತಿಳಿಯದಂತೆ ರಹಸ್ಯವಾಗಿ ನಡೆದಿವೆ ಎನ್ನಲಾಗಿತ್ತು. ಈ ರಹಸ್ಯ ನಿರ್ಧಾರದಿಂದಾಗಿ ನೋಟು ರದ್ದತಿಯ ಬಳಿಕದ ಸಮಸ್ಯೆಗಳನ್ನು ಎದುರಿಸಲು ತಯಾರಿ ಮಾಡಿಕೊಳ್ಳಲಾಗಿಲ್ಲ. ಆದ್ದರಿಂದ ಇದರಿಂದಾಗಿ ಆಗುತ್ತಿರುವ ಎಲ್ಲ ಸಾವು, ನೋವು, ಆರ್ಥಿಕ ಮುಗ್ಗಟ್ಟು, ಸಾಮಾಜಿಕ ಬಿಕ್ಕಟ್ಟು ಮತ್ತು ಹಸಿವು, ದುಡಿಮೆಯ ನಷ್ಟಗಳೆಲ್ಲವನ್ನು ಜನತೆ ಒಳ್ಳೆಯ ಉದ್ದೇಶಕ್ಕಾಗಿ ಸಹಿಸಿಕೊಳ್ಳಬೇಕು ಮತ್ತು ಅದು ಅನಿವಾರ್ಯ ಎಂದೇ ಹೇಳಲಾಗಿತ್ತು. ಜನ ಕೂಡ ಇದನ್ನು ನಂಬಿ ದೇಶದ ಒಳಿತಿಗಾಗಿ ತಮ್ಮೆಲ್ಲಾ ಸಂಕಟ, ನೋವುಗಳನ್ನು ಸಹಿಸಿಕೊಂಡಿದ್ದರು.

ಆದರೆ, ನೀವು ಈ ನೋಟು ರದ್ದತಿಯ ಕುರಿತ ಅಧಿಸೂಚನೆಯನ್ನು ನೋಡಿದರೆ, ಈ ವಿಷಯದಲ್ಲಿ ಇಡೀ ದೇಶಕ್ಕೇ ಹೇಗೆ ಸುಳ್ಳು ಹೇಳಲಾಗಿದೆ, ಜನರನ್ನು ವಂಚಿಸ­ಲಾಗಿದೆ ಎಂಬುದನ್ನು ಕಂಡು ಆಘಾತಕ್ಕೊಳಗಾಗದೇ ಇರಲಾರಿರಿ. ಭಾರತೀಯ ರಿಸವ್‌ರ್‍ ಬ್ಯಾಂಕ್‌ನ ಸೆಂಟ್ರಲ್‌ ಬೋರ್ಡ್‌ ಶಿಫಾರಸುಗಳ ಜಾರಿಯ ನಿಟ್ಟಿನಲ್ಲಿ ಈ ನೋಟು ರದ್ದತಿ ಕ್ರಮ ಕೈಗೊಳ್ಳಲಾಗಿದೆ ಎಂದು ಆ ಅಧಿಸೂಚನೆ ಹೇಳಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ; ರಿಸವ್‌ರ್‍ ಬ್ಯಾಂಕಿನ ಈ ಸೆಂಟ್ರಲ್‌ ಬೋರ್ಡ್‌ ದೇಶದ ಕಾರ್ಪೊರೇಟ್‌ ಕಂಪನಿಗಳ ಉದ್ಯಮಿಗಳನ್ನೂ ಒಳಗೊಂಡಿದೆ ಎಂಬುದು.

ನವೆಂಬರ್‌ 8ರಂದು ಹೊರಡಿಸಲಾದ ಈ ಅಧಿಸೂಚನೆ­ಯನ್ನು ಕೇಂದ್ರ ಹಣಕಾಸು ಸಚಿವಾಲಯದ ವೆಬ್‌ತಾಣದಲ್ಲಿ ಪ್ರಕಟಿಸಲಾಗಿದೆ (http://finmin.nic.in/172521.pdf). ಆ ಅಧಿಸೂಚನೆ ಹೀಗೆ ಆರಂಭವಾಗುತ್ತದೆ;
ಭಾರತೀಯ ರಿಸವ್‌ರ್‍ ಬ್ಯಾಂಕಿನ ಸೆಂಟ್ರಲ್‌ ಬೋರ್ಡ್‌ ನಿರ್ದೇಶಕರು ಈಗ ಚಲಾವಣೆಯಲ್ಲಿರುವ .500 ಮತ್ತು .1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವಂತೆ ಶಿಫಾರಸು ಮಾಡಿದ್ದಾರೆ ಮತ್ತು ಆ ಹಿನ್ನೆಲೆಯಲ್ಲಿ ಈ ನೋಟುಗಳ ಚಲಾವಣೆಯನ್ನು ರದ್ದುಮಾಡಲಾಗಿದೆ.
ಈ ಅಧಿಸೂಚನೆಯಲ್ಲಿ ಎರಡು ಅಂಶಗಳನ್ನು ಗಮನಿಸಬೇಕು. ಒಂದು; ಭಾರತೀಯ ರಿಸವ್‌ರ್‍ ಬ್ಯಾಂಕಿನ ಸೆಂಟ್ರಲ್‌ ಬೋರ್ಡ್‌ ನಿರ್ದೇಶಕರು; ಅಂದರೆ, ರಿಸವ್‌ರ್‍ ಬ್ಯಾಂಕ್‌ನ ಕೇಂದ್ರ ನಿರ್ದೇಶಕರ ಮಂಡಳಿ. ಮತ್ತೊಂದು; ಆ ಮಂಡಳಿಯು ಮಾಡಿರುವ ಶಿಫಾರಸು. ಅಂದರೆ, ಕೇಂದ್ರ ನಿರ್ದೇಶಕರ ಮಂಡಳಿಯು 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ರದ್ದತಿಗೆ ಶಿಫಾರಸು ಮಾಡಿದೆ ಎಂಬುದು ಅಧಿಸೂಚನೆಯ ಈ ಉಲ್ಲೇಖಿತ ಭಾಗದ ಸಾರ. ಹಾಗಿದ್ದರೆ, ಈ ಕೇಂದ್ರ ನಿರ್ದೇಶಕರ ಮಂಡಳಿಯಲ್ಲಿ ಯಾವ ವ್ಯಕ್ತಿಗಳು ಇದ್ದಾರೆ? 

ನವೆಂಬರ್‌ 8ರ ಆ ಅಧಿಸೂಚನೆ ಮುಂದುವರಿದು ಹೇಳುತ್ತದೆ; 1) ಭಾರತೀಯ ರಿಸವ್‌ರ್‍ ಬ್ಯಾಂಕ್‌ ಕಾಯ್ದೆ­(1934)ಯ 26(2) ವಿಧಿಯನುಸಾರ ಕೇಂದ್ರ ನಿರ್ದೇಶಕರ ಮಂಡಳಿ ನೀಡಿರುವ ಶಿಫಾರಸಿನಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ಮತ್ತು 1) 500 ಮತ್ತು 1000 ರೂ. ಮುಖ­ಬೆಲೆಯ ನೋಟುಗಳನ್ನು ರದ್ದು ಮಾಡಿದೆ. ಅಂದರೆ, ಭಾರ­ತೀಯ ರಿಸವ್‌ರ್‍ ಬ್ಯಾಂಕ್‌ ಕಾಯ್ದೆಯ 26(2) ವಿಧಿ; ಮೊದಲನೆಯದಾಗಿ, ಚಾಲ್ತಿಯಲ್ಲಿರುವ ಮುಖಬೆಲೆಯ ನೋಟನ್ನು ರದ್ದು ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಅಧಿಕಾರವನ್ನು ಕೇಂದ್ರ ನಿರ್ದೇಶಕರ ಮಂಡಳಿಗೆ ನೀಡಿದೆ. ಮತ್ತು ಎರಡನೆಯದಾಗಿ; ಹೀಗೆ ಕೇಂದ್ರ ನಿರ್ದೇಶಕರ ಮಂಡಳಿ ನೀಡುವ ಶಿಫಾರಸು­ಗಳನ್ನು ಜಾರಿಗೆ ತರುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡಿದೆ ಎಂಬುದನ್ನು ಯಾರಾದರೂ ಊಹಿಸಬಹುದು. ಹೌದು, ಆ ಊಹೆ ನಿಜ. ಕೇಂದ್ರ ಸರ್ಕಾರ ಈಗ ಅಳವಡಿಸಿಕೊಂಡಿರುವ ಪ್ರಕ್ರಿಯೆ ಕೂಡ ಇದೇ ಮತ್ತು ನವೆಂಬರ್‌ 8ರ ರಿಸವ್‌ರ್‍ ಬ್ಯಾಂಕ್‌ ಅಧಿಸೂಚನೆ ಕೂಡ ಇದನ್ನೇ ಹೇಳಿದೆ.

ಭಾರತೀಯ ರಿಸವ್‌ರ್‍ ಬ್ಯಾಂಕಿನ ಸಾಮಾನ್ಯ ನಿಯಮಾವಳಿಗಳ (1949) (https://www.rbi.org.in/commonman/upload/english/content/pdfs/70981.pdf) ಪ್ರಕಾರ, ತುರ್ತು ಸಭೆಯೂ ಸೇರಿದಂತೆ ಮಂಡಳಿಯ ಯಾವುದೇ ಬಗೆಯ ಸಭೆ, ಚಟುವಟಿಕೆಗಳ ಕುರಿತು ಕೇಂದ್ರ ನಿರ್ದೇಶಕರ ಮಂಡಳಿಯ ಎಲ್ಲಾ ನಿರ್ದೇಶಕರಿಗೆ ಕನಿಷ್ಠ ಒಂದು ತಿಂಗಳ ಮುನ್ನವೇ ತಿಳಿವಳಿಕೆ ಪತ್ರ ನೀಡಬೇಕು. ಆಯಾ ಸಂದರ್ಭದಲ್ಲಿ ಭಾರತದಲ್ಲಿ ಲಭ್ಯ ಇರುವ ಎಲ್ಲಾ ಸದಸ್ಯರಿಗೆ ಸಭೆಯ ಮತ್ತು ಸಭೆಯಲ್ಲಿ ಚರ್ಚಿಸಲಿರುವ ವಿಷಯಗಳ ಮಾಹಿತಿಯನ್ನು ನೀಡಬೇಕು. ಅಲ್ಲದೆ, ಖಾಸಗಿ ಉದ್ಯಮ ವಲಯವನ್ನು ಪ್ರತಿನಿಧಿಸುವ ನಾಲ್ವರು ನಿರ್ದೇಶಕರಿಗೂ ಇದೇ ರೀತಿ ತುರ್ತು ಸಭೆಯ ಅಗತ್ಯ ಮತ್ತು ವಿಷಯದ ಕುರಿತು ಮಾಹಿತಿ ನೀಡಬೇಕು. ಆ ಹಿನ್ನೆಲೆಯಲ್ಲಿ ನೋಟು ರದ್ದತಿ ಕುರಿತು ಆರ್‌ಬಿಐ ಕೇಂದ್ರ ನಿರ್ದೇಶಕರ ಮಂಡಳಿ ಕೇಂದ್ರ ಸರ್ಕಾರಕ್ಕೆ ನೀಡಿರುವ ಶಿಫಾರಸು ಅತ್ಯಂತ ಗೌಪ್ಯದ ಕ್ರಮವಾಗಿರಲು ಸಾಧ್ಯವೇ ಇಲ್ಲ. ಏಕೆಂದರೆ, ಈ ಶಿಫಾರಸನ್ನು ಸಿದ್ಧಪಡಿಸುವಲ್ಲಿ ಮತ್ತು ಅಂತಿಮಗೊಳಿಸಿ ಸರ್ಕಾರಕ್ಕೆ ಕಳಿಸುವಲ್ಲಿ ಮಂಡಳಿಯ ಖಾಸಗಿ ಉದ್ಯಮಿಗಳು ಕೂಡ ಭಾಗಿಯಾಗಿದ್ದಾರೆ. ಈ ಅಂಶವನ್ನು ಕೇಂದ್ರ ಸರ್ಕಾರ ತಳ್ಳಿಹಾಕುವುದಾದರೆ, ನಾನು ಅದನ್ನು ಸವಾಲಾಗಿ ಸ್ವೀಕರಿಸಬಲ್ಲೆ.

ಕೇಂದ್ರ ನಿರ್ದೇಶಕ ಮಂಡಳಿಯ ಖಾಸಗಿ ಉದ್ಯಮಿಗಳ ಸಹಭಾಗಿತ್ವದಲ್ಲೇ ಆ ಮಂಡಳಿಯ ಸಭೆ, ನಿರ್ಧಾರ, ಶಿಫಾರಸು ನಡೆಯುವುದು ಕಾನೂನುಬದ್ಧ ಕ್ರಮವಾಗಿರುವಾಗ, ಮತ್ತು ಆರ್‌ಬಿಐ ಕಾಯ್ದೆಯಲ್ಲೇ ಅವಕಾಶವಿರುವ ರಹಸ್ಯವಲ್ಲದ ನೋಟು ರದ್ದತಿ ಪ್ರಕ್ರಿಯೆಯನ್ನು ಗೌಪ್ಯವಾಗಿ ಕೈಗೊಂಡ ಕ್ರಮ ಎಂದು ಮೋದಿಯವರ ಕೇಂದ್ರ ಸರ್ಕಾರ ಹೇಗೆ ಹೇಳುತ್ತದೆ? ಅಂದರೆ, ಖಾಸಗಿ ಉದ್ಯಮಿಗಳನ್ನು ಹೊರಗಿಟ್ಟು ಮಂಡಳಿಯ ಸಭೆ ನಡೆಸುವುದಾಗಲೀ, ಶಿಫಾರಸು ಮಂಡಿಸುವುದಾಗಲೀ ಮಾಡಲು ಆರ್‌ಬಿಐ ಕಾನೂನಿನಲ್ಲಿ ಅವಕಾಶವೇ ಇಲ್ಲ. ಹಾಗಾಗಿ ಇದನ್ನು ಗೌಪ್ಯ ಅಥವಾ ರಹಸ್ಯ ಕ್ರಮ ಎಂದು ಹೇಳಲು ಹೇಗೆ ಸಾಧ್ಯ?

ಸರ್ಕಾರದ ನಿರ್ಧಾರಕ್ಕೆ ತಡೆ ಸಿಗುವುದು ಬಹುತೇಕ ಖಚಿತ:
ಆರ್‌'ಬಿಐ ಕಾಯ್ದೆಯ ಪ್ರಕಾರ ನೋಟುಗಳ ಅಮಾನ್ಯತೆಗೆ ಮಾತ್ರ ಅವಕಾಶವಿದ್ದು; ಇತ್ತೀಚೆಗೆ ಒಮ್ಮೆ 2005ನೇ ಸಾಲಿನ .500 ನೋಟುಗಳನ್ನು ಬ್ಯಾಂಕ್‌ ಕೌಂಟರಿನಲ್ಲಿ ಬದಲಾಯಿಸಿಕೊಳ್ಳಲು ಮೂರು ತಿಂಗಳ ಕಾಲಾವಕಾಶ ನೀಡಿದ ಮಾದರಿಯಲ್ಲಿ; ಸೀಮಿತ ಸಂಖ್ಯೆಯ ನೋಟುಗಳನ್ನು ಸೀಮಿತ ಅವಧಿಯಲ್ಲಿ ಬದಲಾಯಿಸಿಕೊಳ್ಳಬಹುದು. ಹಾಗಾಗಿ, ಭಯೋತ್ಪಾದನಾ ಚಟುವಟಿಕೆಗಳಲ್ಲಿ ಭಾಗಿಯಾದವರ ಹಣಕಾಸನ್ನು ಬರಿದು ಮಾಡುವ ನಿಟ್ಟಿನಲ್ಲಿ ನಮ್ಮ ಆರ್‌ಬಿಐ ಕೇಂದ್ರ ನಿರ್ದೇಶಕರ ಮಂಡಳಿಯ ಕೇಂದ್ರ ಸರ್ಕಾರಕ್ಕೆ ಇಂತಹ ಭಾರೀ ವಿನೂತನ ಮಾದರಿಯನ್ನು ತೋರಿಸಿಕೊಟ್ಟಿದೆ ಎಂದು ನಂಬಿಕೊಳ್ಳಬೇಕಿಲ್ಲ. ವಿಪರ್ಯಾಸವೆಂದರೆ, ಆರ್‌ಬಿಐನ ನೋಟು ರದ್ದತಿಯ ಈ ಪ್ರಕ್ರಿಯೆಯ ಮಿತಿಯನ್ನು 1978ರಲ್ಲೇ ಅಂದಿನ ಸರ್ಕಾರ ಅರ್ಥಮಾಡಿಕೊಂಡಿತ್ತು ಮತ್ತು ನೋಟು ರದ್ದತಿಯ ವಿಭಿನ್ನ ಮಾದರಿಯನ್ನು ಜಾರಿಗೆ ತರಲು ಪೂರಕವಾಗಿ ಅದು ಅಗತ್ಯ ಹೊಸ ಕಾನೂನನ್ನೂ ರೂಪಿಸಿತ್ತು. ವಿಚಿತ್ರವೆಂದರೆ, ಈ ಬಾರಿ ಕೇಂದ್ರ ಸರ್ಕಾರ, 1978ರ ನೋಟು ರದ್ದತಿ ಪ್ರಕ್ರಿಯೆಯನ್ನು ಗಮನಿಸದೇ ಎಡವಿದೆ. ಪ್ರಮಾಣ ಮತ್ತು ಪರಿಣಾಮಗಳ ಹಿನ್ನೆಲೆಯಲ್ಲಿ ಈ ಬಾರಿ ಮಾಡಲಾಗಿರುವ ನೋಟು ರದ್ದತಿಗೆ ಆರ್‌ಬಿಐ ಕಾಯ್ದೆಯಲ್ಲಿ ಅವಕಾಶವೇ ಇಲ್ಲ. ತೀರಾ ಸಣ್ಣ ಪ್ರಮಾಣದಲ್ಲಿ, ನಾಗರಿಕರ ಮೇಲೆ ಹಲವು ನಿಬಂಧನೆಗಳನ್ನು ಹೇರುವ ಮೂಲಕ ಮಾಡಲಾದ 1978ರ ನೋಟು ರದ್ದತಿಯನ್ನು ಕೂಡ ಆಗ ಪ್ರತ್ಯೇಕ ಕಾನೂನು ತಿದ್ದುಪಡಿ ಸುಗ್ರೀವಾಜ್ಞೆ ಹೊರಡಿಸಲಾಗಿತ್ತು (https://indiankanoon.org/doc/1547/). ಆರ್‌ಬಿಐ ಕಾಯ್ದೆಯ 26ನೇ ವಿಧಿಯಲ್ಲಿ ಹೇಳಲಾಗಿರುವ ರೀತಿಗೆ ಭಿನ್ನವಾದ ಮತ್ತು ಸ್ವತಂತ್ರವಾದ ಕಾನೂನು ಅಡಿ 1978ರಲ್ಲಿ ನೋಟು ರದ್ದತಿ ಕ್ರಮ ಜಾರಿಗೆ ಬಂದಿತ್ತು. ಆದರೆ, ನಾಲ್ಕು ದಶಕಗಳ ಹಿಂದೆಯೇ ನೋಟು ರದ್ದತಿ ಕ್ರಮ ಜಾರಿಗೆ ಅಸಮರ್ಪಕ ಎಂದು ನಿರ್ಧರಿಸಲಾಗಿದ್ದ ಅದೇ 26ನೇ ವಿಧಿಯ ಅಡಿಯಲ್ಲೇ ಈಗಿನ ಸರ್ಕಾರ ಅತ್ಯಂತ ದೊಡ್ಡ ಪ್ರಮಾಣದ ಹಣವನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿದೆ. ಈ ಕಾರಣಗಳಿಗಾಗಿ, ನವೆಂಬರ್‌ 8ರ ಅಧಿಸೂಚನೆಗೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಬೀಳಲಿದೆ ಮತ್ತು ಅಂತಿಮವಾಗಿ ರದ್ದಾಗಲಿದೆ ಎಂದು ನಾನು ನಂಬುತ್ತೇನೆ. ಸರಿಯಾದ ಅರ್ಜಿ ಸಲ್ಲಿಸಿದಲ್ಲಿ (ಈಗಿನ ಅರ್ಜಿ ತೀರಾ ದುರ್ಬಲವಾಗಿದೆ) ದೇಶದ 24 ಹೈಕೋರ್ಟುಗಳಲ್ಲಾಗಲೀ, ಸುಪ್ರೀಂ ಕೋರ್ಟಿನಲ್ಲಾಗಲೀ ಈ ಅಧಿಸೂಚನೆಯನ್ನು ಎತ್ತಿಹಿಡಿಯುವ ಸಾಧ್ಯತೆಗಳು ವಿರಳ. ಹಾಗೊಂದು ವೇಳೆ ಅಧಿಸೂಚನೆ ರದ್ದಾದಲ್ಲಿ, ಆ ಪ್ರಮಾದಕ್ಕೆ ನೇರವಾಗಿ ಕೇಂದ್ರ ಸರ್ಕಾರವೇ ಹೊಣೆ, ಅದರ ಅತ್ಯಂತ ಹೀನಾಯ ಕೆಲಸಕ್ಕಾಗಿ!

ನೋಟು ರದ್ದತಿಗೆ ಶಿಫಾರಸು ಮಾಡಿರುವ ನಿರ್ದೇಶಕ ಮಂಡಳಿ:
ಆರ್‌ಬಿಐ ಕಾಯ್ದೆಯ 8ನೇ ವಿಧಿಯನ್ವಯ ಭಾರತೀಯ ರಿಸವ್‌ರ್‍ ಬ್ಯಾಂಕ್‌ನ ಕೇಂದ್ರ ನಿರ್ದೇಶಕ ಮಂಡಳಿಯನ್ನು ರಚಿಸಲಾಗಿದೆ. ಈ ಆರ್‌ಬಿಐ ಕಾಯ್ದೆಯ ಪೂರ್ಣಪಾಠ ಅದರ ವೆಬ್‌ತಾಣದಲ್ಲಿ, (https://rbidocs.rbi.org.in/rdocs/Publications/PDFs/RBIAM230609.pdf) ಲಭ್ಯವಿದೆ (ಸಮಗ್ರವಾಗಿ ಇನ್ನೂ ಅಪ್‌ಡೇಟ್‌ ಆಗಿಲ್ಲವಾದರೂ ನಮ್ಮ ಉದ್ದೇಶಕ್ಕೆ ಅಗತ್ಯ ಮಾಹಿತಿ ಸಿಗುತ್ತದೆ). ಆ ಮಾಹಿತಿಯಂತೆ, ಈ ಕೇಂದ್ರ ನಿರ್ದೇಶಕರ ಮಂಡಳಿ ಒಟ್ಟು 21 ಮಂದಿ ನಿರ್ದೇಶಕರನ್ನು ಒಳಗೊಂಡಿದೆ. ಆ ಪೈಕಿ ನಾಲ್ವರು ಕಡ್ಡಾಯವಾಗಿ ಖಾಸಗಿ ವಲಯದ ಪ್ರತಿನಿಧಿಗಳಾಗಿರುತ್ತಾರೆ (ಆರ್‌ಬಿಐ ಕಾಯ್ದೆಯ 8, 9 ಮತ್ತು 10ನೇ ವಿಧಿ). ಆರ್‌ಬಿಐನ ತನ್ನ ವೆಬ್‌ತಾಣದಲ್ಲಿ ತನ್ನ ಕೇಂದ್ರ ನಿರ್ದೇಶಕ ಮಂಡಳಿಯ ಎಲ್ಲಾ ನಿರ್ದೇಶಕರ ಪೂರ್ಣ ಪಟ್ಟಿಯನ್ನು ಪ್ರಕಟಿಸಿಲ್ಲ. ಆದರೂ ಅದು ಪ್ರಕಟಿಸಿರುವ ಕೇಂದ್ರ ನಿರ್ದೇಶಕರ ಮಂಡಳಿಯಲ್ಲಿ ಈ ಕೆಳಗಿನ ಕೆಲವು ಖಾಸಗಿ ಉದ್ಯಮಿಗಳೂ ಇದ್ದಾರೆ (https://www.rbi.org.in/scripts/bs_viewcontent.aspx?Id=2453).

ನಟರಾಜನ್‌ ಚಂದ್ರಶೇಖರನ್‌ - ಟಿಸಿಎಸ್'ನ ಪ್ರಸ್ತುತ ಸಿಇಒ ಮತ್ತು ಎಂಡಿ
ಇವರು ಸದ್ಯ ಟಾಟಾ ಕನ್ಸಲ್ಟೆನ್ಸಿ ಸವೀರ್‍ಸಸ್‌ (ಟಿಸಿಎಸ್‌)ನ ಎಂಡಿ ಮತ್ತು ಸಿಇಒ ಆಗಿದ್ದಾರೆ. ಜಾಗತಿಕ ಸಾಫ್ಟ್‌ವೇರ್‌ ಮತ್ತು ಉದ್ಯಮ ವ್ಯವಹಾರದಲ್ಲಿ ಅವರಿಗೆ 28ಕ್ಕೂ ಹೆಚ್ಚು ವರ್ಷಗಳ ಅನುಭವವಿದೆ. ನಾಸ್ಕಾಮ್‌ ಮುಖ್ಯಸ್ಥರಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ವಲ್ಡ್‌ರ್‍ ಎಕಾನಮಿಕ್‌ ಫೋರಂ ದೆವೋಸ್‌ಗೆ 2015-16ರಲ್ಲಿ ಐಟಿ ಉದ್ಯಮ ವಿಭಾಗದ ಮುಖ್ಯಸ್ಥರೂ ಆಗಿದ್ದರು. ಇಂಡೋ-ಅಮೆರಿಕ ಸಿಇಒ ಫೋರಂ ಸದಸ್ಯರೂ ಕೂಡ. ಜೊತೆಗೆ, ಆಸ್ಪ್ರೇಲಿಯಾ, ಬ್ರಿಟನ್‌ ಮತ್ತು ಜಪಾನ್‌ನೊಂದಿಗಿನ ಭಾರತದ ದ್ವಿಪಕ್ಷೀಯ ಉದ್ಯಮ ಕಾರ್ಯಪಡೆಯ ಸದಸ್ಯರೂ ಆಗಿದ್ದಾರೆ. ಇದು ಆರ್‌ಬಿಐ ವೆಬ್‌ತಾಣ ನಟರಾಜನ್‌ ಚಂದ್ರಶೇಖರ್‌ ಅವರ ಬಗ್ಗೆ ನೀಡಿರುವ ವಿವರ. ಟಿಸಿಎಸ್‌ನ ವೆಬ್‌ತಾಣ (http://www.tcs.com/investors/corp_governance/pages/default.aspx) ಕೂಡ ಅವರು ಟಿಸಿಎಸ್‌ನ ಪ್ರಸ್ತುತ ಸಿಇಒ ಮತ್ತು ಎಂಡಿ ಎಂಬುದನ್ನು ಖಚಿತಪಡಿಸುತ್ತದೆ.

ನಚಿಕೇತ್‌ ಎಂ ಮೊರ್‌ - ಖಾಸಗಿ ಸಂಸ್ಥೆಯ ಉದ್ಯೋಗಿ
ಇವರು 1987-2007ರವರೆಗೆ ಐಸಿಐಸಿಐನಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ, 2001-07ರವರೆಗೆ ಅದರ ನಿರ್ದೇಶಕ ಮಂಡಳಿಯಲ್ಲಿಯೂ ಇದ್ದರು. 2007-11ರವರೆಗೆ ಐಸಿಐಸಿಐ ಫೌಂಡೇಶನ್‌ ಸ್ಥಾಪಕ ಅಧ್ಯಕ್ಷರಾಗಿ ಕೆಲಸ ಮಾಡಿದರು ಮತ್ತು ಐಎಫ್‌ಎಂಆರ್‌ ಟ್ರಸ್ಟ್‌ ಆಡಳಿತ ಮಂಡಳಿಯ ಮುಖ್ಯಸ್ಥರಾಗಿಯೂ ಅವರು ಇದೇ ಅವಧಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಎಫ್‌ಐಎನ್‌ಒ ಮಂಡಳಿಯ ಮುಖ್ಯಸ್ಥರೂ ಆಗಿದ್ದರು. ಸದ್ಯ ಅವರು ಸಿಎಆರ್‌ಇ(ಕೇರ್‌) ಇಂಡಿಯಾದ ಮುಖ್ಯಸ್ಥರಾಗಿದ್ದಾರೆ. ಅಲ್ಲದೆ, ಹಿಂದೆ ಅವರು ವಿಪ್ರೋದ ನಿರ್ದೇಶಕರಲ್ಲಿ ಒಬ್ಬರಾಗಿಯೂ ಐದು ವರ್ಷ ಕಾಲ ಸೇವೆ ಸಲ್ಲಿಸಿದ್ದಾರೆ. ಫಿಕ್ಸೆಡ್‌ ಇನ್‌ಕಮ್‌ ಮನಿ ಮಾರ್ಕೆಟ್‌ ಅಂಡ್‌ ಡೆರಿವೇಟಿವ್‌್ಸ ಅಸೋಸಿಯೇಷನ್‌ ಆಫ್‌ ಇಂಡಿಯಾದ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಇದು ಆರ್‌ಬಿಐ ವೆಬ್‌ತಾಣದಲ್ಲಿ ನಚಿಕೇತ್‌ ಕುರಿತು ಇರುವ ವಿವರ. ಆದರೆ, ಇಂಟರ್‌ನೆಟ್‌ನಲ್ಲಿ ನಚಿಕೇತ್‌ ಎಂ ಮೊರ್‌ ಎಂದು ಹುಡುಕಿದರೆ, ಅವರ ಬಗ್ಗೆ ಸಿಗುವ ಮಾಹಿತಿ ಇನ್ನಷ್ಟುಕುತೂಹಲಕರ. ಅಂತರ್ಜಾಲದ ಪ್ರಕಾರ, ಸದ್ಯ ನಚಿಕೇತ್‌ ಎಂ ಮೊರ್‌ ಅವರು ಬಿಲ್‌ ಅಂಡ್‌ ಮೆಲಿಂದಾ ಗೇಟ್ಸ್‌ ಫೌಂಡೇಶನ್‌ನ ಭಾರತದ ನಿರ್ದೇಶಕರಾಗಿದ್ದಾರೆ. ಈ ವಿಷಯವನ್ನು ಬಿಲ್‌ ಅಂಡ್‌ ಮೆಲಿಂದಾ ಗೇಟ್ಸ್‌ ಫೌಂಡೇಷನ್‌ ವೆಬ್‌ತಾಣ (http://www.gatesfoundation.org/Where-We-Work/India-Office/) ಕೂಡ ಹೇಳುತ್ತದೆ.

ಭರತ್‌ ನರೊತ್ತಮ್‌ ದೋಷಿ - ಮಹೀಂದ್ರಾ ಆಡಳಿತ ಮಂಡಳಿ ಸದಸ್ಯರು
ಇವರು ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಲಿಮಿಟೆಡ್‌ನ ಮಾಜಿ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಮತ್ತು ಗ್ರೂಪ್‌ ಸಿಎಫ್‌ಒ. 2008ರ ಏಪ್ರಿಲ್‌ನಿಂದ ಮಹಿಂದ್ರಾ ಅಂಡ್‌ ಮಹಿಂದ್ರಾ ಫೈನಾನ್ಸಿಯಲ್‌ ಸವೀರ್‍ಸಸ್‌ ಲಿಮಿಟೆಡ್‌ನ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ ಮಹಿಂದ್ರಾ ಇಂಟರ್‌ ಟ್ರೇಡ್‌ ಲಿಮಿಟೆಡ್‌ನ ಮುಖ್ಯಸ್ಥರಾಗಿದ್ದು, ಗೋದ್ರೇಜ್‌ ಕನ್ಸೂಮರ್‌ ಪ್ರಾಡಕ್ಟ್$್ಸ ಲಿಮಿಟೆಡ್‌ನ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಅಲ್ಲದೆ, ಅವರು ಮಹಿಂದ್ರಾದ ವಿವಿಧ ಶಿಕ್ಷಣ ಟ್ರಸ್ಟ್‌ ಮತ್ತು ಫೌಂಡೇಶನ್‌ಗಳ ಆಡಳಿತ ಮಂಡಳಿಯಲ್ಲಿದ್ದಾರೆ. ಕಳೆದ 35 ವರ್ಷಗಳಿಂದ ಚೇಂಬ​ರ್‍ಸ್ ಆಫ್‌ ಕಾಮರ್ಸ್‌ ಆ್ಯಂಡ್‌ ಇಂಡಸ್ಟ್ರಿಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವು ತಜ್ಞರ ಸಮಿತಿಗಳಲ್ಲಿ ಕೆಲಸ ಮಾಡಿದ್ದಾರೆ. 2009-10ರಲ್ಲಿ ಬಾಂಬೆ ಚೇಂಬರ್‌ ಆಫ್‌ ಕಾಮರ್ಸ್‌ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇದು ಆರ್‌ಬಿಐ ವೆಬ್‌ತಾಣದಲ್ಲಿ ಭರತ್‌ ನುರೊತ್ತಮ್‌ ದೋಷಿ ಅವರ ಬಗ್ಗೆ ದೊರೆಯುವ ವಿವರದ ಸಂಕ್ಷಿಪ್ತ ಮಾಹಿತಿ.

(ಕನ್ನಡಪ್ರಭ)