ಜಿಲ್ಲಾ ಕುರುಬರ ಸಂಘ ಹಾಗೂ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ನೇತೃತ್ವದಲ್ಲಿ ಸಾವಿರಾರು ಕುರಿಗಳೊಂದಿಗೆ ಬೃಹತ್ ರ್ಯಾಲಿ ನಡೆಯಿತು. ನಂತರ ರ್ಯಾಲಿಯು ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರವೇಶಿಸಲು ಮುಂದಾಗುತ್ತಿದ್ದಂತೆ ಪೊಲೀಸರು ಅನುಮತಿ ನಿರಾಕರಿಸಿದರು. ಆಗ ರ್ಯಾಲಿ ಹಿಂಸಾತ್ಮಕ ರೂಪ ಪಡೆದುಕೊಂಡಿತು.
ಬಾಗಲಕೋಟೆ: ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಮೀಸಲಾತಿ ಹೆಚ್ಚಿಸಬೇಕು ಎಂದು ಆಗ್ರಹಿಸಿ ನಡೆಸುತ್ತಿದ್ದ ಪ್ರತಿಭಟನೆಯ ಸ್ಥಳಕ್ಕೆ ಮನವಿ ಸ್ವೀಕರಿಸಲು ಜಿಲ್ಲಾಧಿಕಾರಿ ಬರಲಿಲ್ಲ ಎಂದು ಆಕ್ರೋಶಗೊಂಡ ಪ್ರತಿಭಟನಾಕಾರರು ಡೀಸಿ ಕಚೇರಿಗೇ ನುಗ್ಗಿ ದಾಂಧಲೆ ನಡೆಸಿದ ಘಟನೆ ನಿನ್ನೆ ಶನಿವಾರ ನಡೆದಿದೆ.
ಜಿಲ್ಲಾ ಕುರುಬರ ಸಂಘ ಹಾಗೂ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಸಂಘಟನೆ ನೇತೃತ್ವದಲ್ಲಿ ಸಾವಿರಾರು ಕುರಿಗಳೊಂದಿಗೆ ಬೃಹತ್ ರ್ಯಾಲಿ ನಡೆಯಿತು. ನಂತರ ರ್ಯಾಲಿಯು ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರವೇಶಿಸಲು ಮುಂದಾಗುತ್ತಿದ್ದಂತೆ ಪೊಲೀಸರು ಅನುಮತಿ ನಿರಾಕರಿಸಿದರು. ಆಗ ರ್ಯಾಲಿ ಹಿಂಸಾತ್ಮಕ ರೂಪ ಪಡೆದುಕೊಂಡಿತು. ಜಿಲ್ಲಾಡಳಿತದ ಆವರಣದಲ್ಲಿ ಸೇರಿದ್ದ ಕುರುಬ ಸಮಾಜದ ಮುಖಂಡರು, ಸಂಘಟನೆ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಹಳ ಸಮಯವಾದರೂ ಜಿಲ್ಲಾಧಿಕಾರಿ ಪಿ.ಎ. ಮೇಘಣ್ಣವರ ಮನವಿ ಸ್ವೀಕರಿಸಲು ಆಗಮಿಸದ ಹಿನ್ನೆಲೆ ಆಕ್ರೋಶಗೊಂಡ ಧಾರವಾಡ ಮನಸೂರು ರೇವಣ್ಣ ಸಿದ್ದೇಶ್ವರ ಮಠದ ಬಸವರಾಜ ದೇವರು ಮತ್ತು ಉದ್ರಿಕ್ತ ಗುಂಪು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಯ ಪೀಠೋಪಕರಣ, ನಾಮಫಲಕ, ಕಿಟಕಿಯ ಗಾಜುಗಳನ್ನು ಪುಡಿ ಪುಡಿ ಮಾಡಿದರು.
ಬಸವ ದೇವರು ಅಸ್ವಸ್ಥ:
ಉದ್ರಿಕ್ತರನ್ನು ಕಚೇರಿಯಿಂದ ಹೊರಗೆ ಹಾಕಲು ಪೊಲೀಸರು ಲಾಠಿ ಪ್ರಯೋಗ ಮಾಡಬೇಕಾಯಿತು. ಬಳಿಕ ಡೀಸಿ ಕಚೇರಿ ಒಳಗೆ ಕುಳಿತ ಒಂದಿಷ್ಟು ಮುಖಂಡರು ಡೀಸಿ ವಿರುದ್ಧ ಘೋಷಣೆ ಕೂಗಿದರು. ನಂತರ ಪೊಲೀಸರು ಉದ್ರಿಕ್ತರನ್ನು ಸಮಾಧಾನ ಪಡಿಸಿ, ಪರಿಸ್ಥಿತಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಈ ವೇಳೆ ಧಾರವಾಡದ ಬಸವರಾಜ ದೇವರು ಅಸ್ವಸ್ಥಗೊಂಡರು. ತಕ್ಷಣವೇ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು.
ಬಳಿಕ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಅವರಿಗೆ ಮನವಿ ಸಲ್ಲಿಸಿದ ಮುಖಂಡರು, ರ‌್ಯಾಲಿ ವಿಕೋಪಕ್ಕೆ ತಲುಪಿ ಪೀಠೋಪಕರಣ ಧ್ವಂಸ ಮಾಡಿದ್ದಕ್ಕೆ ವಿಷಾದ ವ್ಯಕ್ತಪಡಿಸಿದರು.
ಡೀಸಿ ಪ್ರತಿಕ್ರಿಯೆ:
ಜಿಲ್ಲಾಧಿಕಾರಿ ಪಿ.ಎ.ಮೇಘಣ್ಣವರ ಪ್ರತಿಕ್ರಿಯಿಸಿ, ದಾಂಧಲೆ ಘಟನೆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಕೂಲಕುಂಶವಾಗಿ ಪರಿಶೀಲಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಒಂದು ಸಭೆಯಲ್ಲಿ ಭಾಗಿಯಾಗಿದ್ದೆ. ಹೀಗಾಗಿ ಮನವಿ ಸ್ವೀಕರಿಸಲು ತಡವಾಯಿತು ಎಂದು ಹೇಳಿದರು.
ಮೊದಲು ಜಿಲ್ಲಾಧಿಕಾರಿಗೆ ಮನವಿ ನೀಡುತ್ತೇವೆ ಎಂದು ಮುಖಂಡರು ತಿಳಿಸಿರಲಿಲ್ಲ. ಆಮೇಲೆ ಏಕಾಏಕಿ ಜಿಲ್ಲಾಧಿಕಾರಿಗೆ ಮನವಿಯನ್ನು ನೀಡುತ್ತೆವೆ ಎಂದರು. ಅವರು ಬರೋದು ಸ್ವಲ್ಪ ತಡವಾಯಿತು. ಅಷ್ಟರಲ್ಲಿ ಒಂದಿಷ್ಟು ಜನ ದಾಂಧಲೆ ಮಾಡಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ ತಿಳಿಸಿದ್ದಾರೆ.
ಡೀಸಿ ಕಚೇರಿಯ ಎದುರು ಮನವಿ ಕೊಡುವ ಸಂದರ್ಭದಲ್ಲಿ ಸಮಾಜದ ಮುಖಂಡರು ಪ್ರಚೋದನಾತ್ಮಕ ಭಾಷಣ ಮಾಡಿದ್ದರಿಂದ ಇಂತಹ ಅನಾಹುತ ನಡೆದಿದೆ. ಎಲ್ಲರೂ ತಮ್ಮ ಜವಾಬ್ದಾರಿ ಮತ್ತು ಶಿಸ್ತಿನಿಂದ ವರ್ತಿಸಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ.
- ಎಚ್.ವಿಶ್ವನಾಥ, ಮಾಜಿ ಸಂಸದ
ಕನ್ನಡಪ್ರಭ ವಾರ್ತೆ
epaperkannadaprabha.com
