ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಣ ಕ್ಷೇತ್ರಕ್ಕೆ ಹಲವು ಮಹತ್ವದ ಘೋಷಣೆಗಳನ್ನು ಮಾಡಿದ್ದಾರೆ. 15,000 ಶಿಕ್ಷಕರ ನೇಮಕಾತಿ, ಪಿಯು ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ, 'ರೋಹಿತ್ ವೇಮುಲ ಕಾಯ್ದೆ' ಜಾರಿ ಹಾಗೂ 800 ಕರ್ನಾಟಕ ಪಬ್ಲಿಕ್ ಶಾಲೆಗಳ ಉನ್ನತೀಕರಣದಂತಹ ಪ್ರಮುಖ ನಿರ್ಧಾರ

ರಾಜ್ಯದ ಸರ್ಕಾರಿ ಶಾಲೆ, ಪಿಯು ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ 15 ಸಾವಿರ ಶಿಕ್ಷಕ ಹುದ್ದೆಗಳ ಭರ್ತಿ, ಪಿಯು ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಮೇಲೆ ಜಾತಿ ಆಧಾರಿತ ದೌರ್ಜನ್ಯ ತಡೆಯಲು ‘ರೋಹಿತ್‌ ವೇಮುಲ ಕಾಯ್ದೆ’ ಜಾರಿ ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೆಲ ಹೊಸ ಕಾರ್ಯಕ್ರಮಗಳು ಸೇರಿ ಹಲವು ಮಹತ್ವದ ನಿರ್ಧಾರ ಘೋಷಿಸಿದ್ದಾರೆ.

ಸರ್ಕಾರಿ ಶಾಲೆಗಳ ಬಲವರ್ದನೆ, ದಾಖಲಾತಿ ಹೆಚ್ಚಿಸುವ ಸಲುವಾಗಿ 1ರಿಂದ 10ನೇ ತರಗತಿ ವರೆಗೆ ಈಗಾಗಲೇ ಇರುವಂತೆ ಇನ್ನು ಮುಂದೆ ಸರ್ಕಾರಿ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೂ ಉಚಿತ ಪಠ್ಯಪುಸ್ತಕ ವಿತರಣೆ, ವಿದ್ಯಾವಿಕಾಸ ಯೋಜನೆಯಡಿ ಪೂರ್ವ ಪ್ರಾಥಮಿಕ(ಎಲ್‌ಕೆಜಿ-ಯುಕೆಜಿ) ವಿದ್ಯಾರ್ಥಿಗಳಿಗೆ ಚಟುವಟಿಕೆ ಪುಸ್ತಕಗಳ ವಿತರಣೆ, 1 ರಿಂದ 10ನೇ ತರಗತಿಯ ಮಕ್ಕಳಿಗೆ ಮೌಲ್ಯ ಶಿಕ್ಷಣ ಪುಸ್ತಕ ವಿತರಿಸಲು ನಿರ್ಧರಿಸಲಾಗಿದೆ.

ಶಾಲೆಗಳಲ್ಲಿ ಮೂಲಸೌಕರ್ಯಕ್ಕೂ ಒತ್ತು ನೀಡಿರುವ ಅವರು, ಸರ್ಕಾರಿ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಕೊಠಡಿ ನಿರ್ಮಾಣ, ಕೊಠಡಿಗಳ ದುರಸ್ತಿ ಕಾಮಗಾರಿಗಳಿಗೆ 565 ಕೋಟಿ, ಶೌಚಾಲಯ ನಿರ್ಮಾಣಕ್ಕೆ 75 ಕೋಟಿ ರು. ಹಾಗೂ ಪೀಠೋಪಕರಣ ಖರೀದಿಗೆ 25 ಕೋಟಿ ರು. ಪ್ರಾಥಮಿಕ ಶಾಲೆಗಳಲ್ಲಿ ದ್ವಿಭಾಷಾ ತರಗತಿ ಜಾರಿಗೆ ಶಿಕ್ಷಕರ ಸಾಮರ್ಥ್ಯ ವೃದ್ಧಿಗಾಗಿ 24 ಕೋಟಿ ರು.ವೆಚ್ಚದಲ್ಲಿ ಇಂಗ್ಲಿಷ್ ಭಾಷಾ ತರಬೇತಿ ಕಾರ್ಯಕ್ರಮ, ಶಾಲಾ ಕಾಲೇಜುಗಳ ನಿರ್ವಹಣೆಗಾಗಿ 125 ಕೋಟಿ ರು. ಅನುದಾನವನ್ನು ಶಾಲಾ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ನೇರವಾಗಿ ವರ್ಗಾಯಿಸುವ ಘೋಷಣೆ ಮಾಡಲಾಗಿದೆ.

ಡಿಜಿಟಲ್‌ ಟೂಟರ್‌ ಸೌಲಭ್ಯ:

ಐಐಟಿ ಧಾರವಾಡದ ಸಹಯೋಗದಲ್ಲಿ 8 ರಿಂದ 12ನೇ ತರಗತಿಯವರೆಗಿನ ಸುಮಾರು 12.28 ಲಕ್ಷ ವಿದ್ಯಾರ್ಥಿಗಳಿಗೆ ಅಂದಾಜು 5 ಕೋಟಿ ರು. ವೆಚ್ಚದಲ್ಲಿ ಕಲಿಕಾ ಪ್ರಕ್ರಿಯೆಯಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಂಡು ವೈಯಕ್ತಿಕ ಸ್ವಯಂ-ಕಲಿಕಾ ಡಿಜಿಟಲ್ ಟೂಟರ್‌ ಸೌಲಭ್ಯ, ವಿದ್ಯಾರ್ಥಿಗಳಲ್ಲಿ ಒತ್ತಡ ನಿವಾರಿಸಿ ಮಾನಸಿಕ ಆರೋಗ್ಯ ಸುಧಾರಿಸಲು 204 ಬಿಆರ್‌ಸಿ ಕೇಂದ್ರಗಳಲ್ಲಿ ತಲಾ ಒಬ್ಬ ಅರ್ಹ ಮಾನಸಿಕ ಆರೋಗ್ಯ ಸಲಹೆಗಾರರ ನೇಮಕ, ವಿಜಯಪುರದ ಸೈನಿಕ ಶಾಲೆ ಹಾಸ್ಟೆಲ್ ಕಟ್ಟಡಗಳನ್ನು ಹಂತ ಹಂತವಾಗಿ ಪುನರ್ ನಿರ್ಮಿಸಲು 10 ಕೋಟಿ ರು. ಒದಗಿಸಲು ತೀರ್ಮಾನಿಸಲಾಗಿದೆ.

ʻಉತ್ತಮ ಕಲಿಕೆ ಉಜ್ವಲ ಭವಿಷ್ಯʼಎಂಬ ಘೋಷವಾಕ್ಯದೊಂದಿಗೆ ಒಂದೇ ಸೂರಿನಡಿ ಪೂರ್ವ ಪ್ರಾಥಮಿಕದಿಂದ 12ನೇ ತರಗತಿ ವರೆಗೆ ಗುಣಮಟ್ಟದ ಶಿಕ್ಷಣ ನೀಡಲು ಏಷ್ಯನ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ ನೆರವಿನೊಂದಿಗೆ 500 ಶಾಲೆಗಳು, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ನಿಧಿಯಿಂದ 200 ಶಾಲೆಗಳು ಹಾಗೂ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ(ಎಂಇಆರ್‌ಸಿ) ನಿಧಿಯಿಂದ 100 ಶಾಲೆಗಳು ಒಟ್ಟಾರೆ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ(ಕೆಪಿಎಸ್‌) ಉನ್ನತೀಕರಿಸಲಾಗುವುದು. ಇದಕ್ಕಾಗಿ ಒಟ್ಟಾರೆ 3,900 ಕೋಟಿ ರು.ಗಳನ್ನು ಮುಂದಿನ ಮೂರು ವರ್ಷಗಳಲ್ಲಿ ವೆಚ್ಚ ಮಾಡಲಾಗುವುದು. ವರ್ಗಾವಣೆ ಕೌನ್ಸೆಲಿಂಗ್ ವೇಳೆ ಕೆಪಿಎಸ್‌ ಶಿಕ್ಷಕರ ಹುದ್ದೆಗಳನ್ನು ಮಹತ್ವದ ಹುದ್ದೆಗಳೆಂದು ಪರಿಗಣಿಸಿ ಮೊದಲ ಆದ್ಯತೆಯಲ್ಲಿ ಭರ್ತಿ ಮಾಡಲಾಗುವುದು ಹಾಗೂ ಆ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕ ಹುದ್ದೆಗಳ ನೇಮಕಾತಿಗೆ ಆದ್ಯತೆ ನೀಡಲು ನಿರ್ಧರಿಸಲಾಗಿದೆ.

----

ರಾಜ್ಯದ ವಿವಿಧೆಡೆ 8 ಹೊಸ ಪದವಿ; ಕಾಲೇಜು, \B\Bವಚನ ವಿವಿ ಸ್ಥಾಪನೆ

ರಾಜ್ಯದ ವಿವಿಧೆಡೆ ಒಟ್ಟು ಎಂಟು ಹೊಸ ಪದವಿ ಕಾಲೇಜುಗಳನ್ನು ಸ್ಥಾಪಿಸುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಅವರು, ಬಸವಕಲ್ಯಾಣದಲ್ಲಿ ಖಾಸಗಿ ವಚನ ವಿಶ್ವವಿದ್ಯಾಲಯ ಪ್ರಾರಂಭಿಸಲು 25 ಎಕರೆ ಜಮೀನು ನೀಡಲಾಗುವುದು. ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲೆ ನಡೆಯುವ ʻಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯʼವನ್ನು ನಿಲ್ಲಿಸಲು ʻರೋಹಿತ್ ವೇಮುಲ ಕಾಯ್ದೆʼಯನ್ನು ಜಾರಿಗೆ ತರಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಿದ್ದಾರೆ.

ಉನ್ನತ ಶಿಕ್ಷಣ ಇಲಾಖೆಯಿಂದ ವಿಜಯಪುರ ಜಿಲ್ಲೆಯ ಚಡಚಣ, ಬೆಳಗಾವಿ ಗ್ರಾಮಾಂತರ ಹಾಗೂ ಮೈಸೂರು ನಗರದ ನರಸಿಂಹರಾಜ ಕ್ಷೇತ್ರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ಕೆಕೆಆರ್‌ಡಿಬಿ ಮ್ಯಾಕ್ರೋ ಅನುದಾನದಿಂದ ಪ್ರಥಮ ದರ್ಜೆ ಕಾಲೇಜು ಸ್ಥಾಪಿಸುವ ಘೋಷಣೆ ಮಾಡಿದ್ದಾರೆ. ಕೆಕೆಆರ್‌ಡಿಬಿಯಿಂದ ಕಲಬುರಗಿ ಜಿಲ್ಲೆಯ ನಿಂಬರಗಾ, ಯಾದಗಿರಿ ಜಿಲ್ಲೆಯ ಕಕ್ಕೇರಾ, ರಾಯಚೂರು ಜಿಲ್ಲೆಯ ಅಂಬಾಮಠ ಮತ್ತು ಕೊಪ್ಪಳ ಜಿಲ್ಲೆಯ ಬೇವೂರು ಗ್ರಾಮಗಳಲ್ಲಿ ವಸತಿಯುಕ್ತ ಪ್ರಥಮ ದರ್ಜೆ ಕಾಲೇಜುಗಳನ್ನು ತಲಾ 18 ಕೋಟಿ ರು. ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳ ಬಲವರ್ಧನೆ, ಉತ್ಕೃಷ್ಟತಾ ಕೇಂದ್ರಗಳ ಸ್ಥಾಪನೆ ಹಾಗೂ ಸಂಶೋಧನಾ ಸಾಮರ್ಥ್ಯ ಹೆಚ್ಚಿಸುವ ಸಲುವಾಗಿ ಎಡಿಬಿ ನೆರವಿನೊಂದಿಗೆ 2,500 ಕೋಟಿ ರು. ವೆಚ್ಚದಲ್ಲಿ ʻಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆʼ ಅನುಷ್ಠಾನ. ಈ ಯೋಜನೆಯಡಿ 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು 11 ಪಾಲಿಟೆಕ್ನಿಕ್‌ಗಳನ್ನು ಮಾದರಿ ಸಂಸ್ಥೆಗಳನ್ನಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಮತ್ತು ಸ್ಟಾರ್ಟ್ಅಪ್ ಸಂಸ್ಕೃತಿಯನ್ನು ಪ್ರೋತ್ಸಾಹಿಸಲು ಎಡಿಬಿ ನೆರವಿನೊಂದಿಗೆ 9 ಉತ್ಕೃಷ್ಟತಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದಾರೆ.

ಹಿಂದಿನ ಸಾಲಿನಲ್ಲಿ ಘೋಷಿಸಿದಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಇಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್‌ಗಳು ಮತ್ತು ಯುವಿಸಿಇ ವಿಶ್ವವಿದ್ಯಾಲಯದಲ್ಲಿ ಒಟ್ಟಾರೆ 2,000 ಬೋಧಕ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ಶೀಘ್ರದಲ್ಲಿ ಪೂರ್ಣಗೊಳಿಸುವುದು, ಜೊತೆಗೆ ವಿಶ್ವವಿದ್ಯಾಲಯಗಳಲ್ಲಿ 1,000 ಬೋಧಕ ಹುದ್ದೆಗಳನ್ನು ತರ್ಕಬದ್ಧಗೊಳಿಸಿ ಹಂತ ಹಂತವಾಗಿ ಭರ್ತಿ, ಶೇ.50ಕ್ಕಿಂತ ಹೆಚ್ಚು ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿರುವ 25 ಸರ್ಕಾರಿ ಪದವಿ ಕಾಲೇಜು, ಮೂರು ಪಾಲಿಟೆಕ್ನಿಕ್ ಹಾಗೂ ಮೂರು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೂಲಸೌಕರ್ಯಕ್ಕೆ 31 ಕೋಟಿ ರು. ಒದಗಿಸಲು ತೀರ್ಮಾನಿಸಲಾಗಿದೆ.

1,000ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಒಟ್ಟು 50 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಮೂರು ವರ್ಷಗಳಲ್ಲಿ ಅಗತ್ಯ ಪೀಠೋಪಕರಣ ಹಾಗೂ ಕಟ್ಟಡಗಳ ದುರಸ್ತಿ/ನವೀಕರಣ ಕಾಮಗಾರಿಗಳಿಗೆ 100 ಕೋಟಿ ರು, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿರುವ 75 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, 23 ಪಾಲಿಟೆಕ್ನಿಕ್ ಹಾಗೂ ಐದು ಇಂಜಿನಿಯರಿಂಗ್ ಕಾಲೇಜುಗಳಿಗೆ ಮೂಲ ಸೌಕರ್ಯಕ್ಕೆ ಕೆಕೆಆರ್‌ಡಿಬಿಯಿಂದ ಅನುದಾನ ಒದಗಿಸುವ ಭರವಸೆ ನೀಡಲಾಗಿದೆ.

ಸರ್ಕಾರದ 11 ಪಾಲಿಟೆಕ್ನಿಕ್‌ಗಳಲ್ಲಿ ಹಾಗೂ ಚಿತ್ರದುರ್ಗ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಸ್ತುತ ಹೆಚ್ಚಿನ ಬೇಡಿಕೆ ಹಾಗೂ ಉದ್ಯೋಗಾವಕಾಶವಿರುವ ಕೋರ್ಸುಗಳಾದ ಎಐ, ಮಷಿನ್ ಲರ್ನಿಂಗ್, ಕ್ಲೌಡ್ ಕಂಪ್ಯೂಟಿಂಗ್, ಮೈನಿಂಗ್ ಇಂಜಿನಿಯರಿಂಗ್, ಆಟೋಮೇಷನ್ ಇಂಜಿನಿಯರಿಂಗ್ ಮುಂತಾದ 15 ಹೊಸ ಕೋರ್ಸು ಆರಂಭಿಸಲಾಗುವುದು. ಅನಿಟ್ಯಾಬ್‌.ಓಆರ್‌ಜಿ ಇಂಡಿಯಾ ಹಾಗೂ ರಾಜ್ಯ ಸರ್ಕಾರದ ಪಾಲುದಾರಿಕೆಯೊಂದಿಗೆ ವೃತ್ತಿ ಜೀವನದ ಆರಂಭಿಕ ಹಂತದಲ್ಲಿರುವ ವಿಜ್ಞಾನ, ತಾಂತ್ರಿಕ, ಗಣಿತ ಮತ್ತು ಇಂಜಿನಿಯರಿಂಗ್ (ಸ್ಟೆಮ್‌) ವಿಭಾಗಗಳಲ್ಲಿನ ಆಯ್ದ 3,000 ಮಹಿಳಾ ಪದವೀಧರರಿಗೆ 13.50 ಕೋಟಿ ರು. ವೆಚ್ಚದಲ್ಲಿ ಕೌಶಲ್ಯಾಭಿವೃದ್ಧಿ/ವೃತ್ತಿನಿರತ ತರಬೇತಿ ಜಾರಿ.

ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯವನ್ನು(ಯುವಿಸಿಇ) ಐಐಟಿ ಮಾದರಿಯಲ್ಲಿ 500 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಈಗಾಗಲೇ 100 ಕೋಟಿ ರು. ಒದಗಿಸಲಾಗಿದೆ. ಪ್ರಸಕ್ತ ವರ್ಷದಲ್ಲಿಯೂ 100 ಕೋಟಿ ರು. ಒದಗಿಸಲಾಗುವುದು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿ 10 ಮತ್ತು 12ನೇ ತರಗತಿಗಳನ್ನು ವ್ಯಾಸಂಗ ಮಾಡಿ 2025-26ನೇ ಸಾಲಿನಿಂದ ಉನ್ನತ ಶಿಕ್ಷಣ ಮುಂದುವರೆಸುತ್ತಿರುವ 37,000 ವಿದ್ಯಾರ್ಥಿನಿಯರಿಗೆ ವಾರ್ಷಿಕ 30,000 ರು. ವಿದ್ಯಾರ್ಥಿ ವೇತನವನ್ನು ಅಜೀಂ ಪ್ರೇಮ್ಜಿ ಫೌಂಡೇಶನ್‌ನಿಂದ ಹಾಗೂ ಉಳಿದ ವಿದ್ಯಾರ್ಥಿನಿಯರಿಗೆ ರಾಜ್ಯ ಸರ್ಕಾರದಿಂದ ʻದೀಪಿಕಾ ವಿದ್ಯಾರ್ಥಿ ವೇತನʼ ಯೋಜನೆಯಡಿ ನೀಡಲಾಗುತ್ತಿದೆ. ಇದನ್ನು ಪ್ರಸಕ್ತ ಸಾಲಿನಲ್ಲಿಯೂ ಮುಂದುವರೆಸಲಾಗುವುದು ಎಂದು ಸಿದ್ದರಾಮಯ್ಯ ಪ್ರಕಟಿಸಿದ್ದಾರೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅತಿಥಿ ಉಪನ್ಯಾಸಕರುಗಳಿಗೆ 90 ದಿನಗಳ ಮಾತೃತ್ವ ರಜೆ ಸೌಲಭ್ಯ, ಹೆಸರುಘಟ್ಟದ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ನಡೆಸಲಾಗುತ್ತಿರುವ ಸೌಂಡ್ ರೆಕಾರ್ಡಿಂಗ್ ಮತ್ತು ಇಂಜಿನಿಯರಿಂಗ್ ಹಾಗೂ ಸಿನಿಮಾಟೋಗ್ರಫಿ ಕೋರ್ಸುಗಳಿಗೆ ಅಗತ್ಯವಿರುವ ಆಧುನಿಕ ಉಪಕರಣ, ಧಾರವಾಡ ಮತ್ತು ಬೆಂಗಳೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗಾಗಿ ತಲಾ 10 ಕೋಟಿ ರು. ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಹಾಗೂ ಅಧ್ಯಯನ ಕೇಂದ್ರ ಸ್ಥಾಪನೆ, ಕರ್ನಾಟಕದಲ್ಲಿ ಎನ್‌ಸಿಸಿ ಉತ್ತೇಜಿಸಲು ಪ್ರಸ್ತುತ ಇರುವ 96,000 ಎನ್‌ಸಿಸಿ ಕೆಡೆಟ್‌ಗಳ ಕಾರ್ಯಬಲವನ್ನು ಮುಂದಿನ ಎರಡು ವರ್ಷಗಳಲ್ಲಿ 10,000 ಗಳಷ್ಟು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.