ಕಾರವಾರ[ಡಿ.30] ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಈ ಪ್ರಕರಣ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಶಾಲಾ ಬಾಲಕರು ನಿಜಕ್ಕೂ ಶೌರ್ಯ ಪ್ರಶಸ್ತಿಗೆ ಅರ್ಹರು. ನಡೆಯಬಹುದಾಗಿದ್ದ ದೊಡ್ಡ ರೈಲ್ವೆ ಅವಘಡವನ್ನು ಪುಟ್ಟ ಮಕ್ಕಳು ತಪ್ಪಿಸಿದ್ದಾರೆ.

ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಿದ್ದನ್ನು ಗಮನಿಸಿದ ನೆಲ್ಲಿಕೇರಿ ಶಾಲೆಯ ವಿದ್ಯಾರ್ಥಿಗಳಾದ ಮಂಜುನಾಥ ಹಾಗೂ ಶಶಿಕುಮಾರ್ ಎಂಬಿಬ್ಬ ಬಾಲಕರು ರೈಲ್ವೆ ಸಿಬ್ಬಂದಿಗೆ ತಿಳಿಸಿ, ಸಂಭವನೀಯ ಅವಘಡಗಳನ್ನು ತಪ್ಪಿಸಿದ್ದಾರೆ.

ಲಾರಿ ಡ್ರೈವರ್ ರೂಪದ ದೇವರನ್ನೊಮ್ಮೆ ನೋಡಿ: ಪ್ರಯಾಣಿಕರ ಜೀವ ಉಳಿಸಿದ್ಹೇಗೆ?

ಮೂರೂರು ರಸ್ತೆಯಲ್ಲಿನ ಬಿಸಿಎಂ ಹಾಸ್ಟೆಲ್ ನಲ್ಲಿರುವ 9ನೇ ತರಗತಿ ವಿದ್ಯಾರ್ಥಿ ಮಂಜುನಾಥ ನಾರಾಯಣ ರೆಡ್ಡಿ ಹಾಗೂ 8 ನೇ ತರಗತಿ ವಿದ್ಯಾರ್ಥಿ ಶಶಿಕುಮಾರ ವಿನಾಯಕ ನಾಯ್ಕ ಸಮಯಪ್ರಜ್ಞೆ ತೋರಿದ ಬಾಲಕರಾಗಿದ್ದಾರೆ.

ಕಾಡು ಹಣ್ಣುಗಳನ್ನು ಆರಿಸಲು ಹಳಕಾರ ಬೆಟ್ಟಕ್ಕೆ ತೆರಳುತ್ತಿದ್ದ ವೇಳೆ ಟ್ರಾಕ್ ಬದಲಾವಣೆ ಜಾಗದಲ್ಲಿ ಹಳಿ ತುಂಡಾಗಿರುವುದನ್ನು ಗಮನಿಸಿದ್ದಾರೆ. ಕೂಡಲೇ ಈ ಕುರಿತು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಇದರಿಂದ ಜಾಗೃತಗೊಂಡ ರೈಲ್ವೆ ಸಿಬ್ಬಂದಿ ಮುಂಬೈ ರೈಲನ್ನು ಮುಂದೆ ಹೋಗದಂತೆ ತಡೆದಿದ್ದಾರೆ. ಮಕ್ಕಳ ಕೆಲಸಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಾಯುವಿಹಾರಕ್ಕೆ ಬಂದಿದ್ದ ಸ್ಥಳೀಯ ವಿನೋದ ಖೋಡೆ ಎನ್ನುವವರು ಈ ಬಾಲಕರು ರೇಲ್ವೆ ಹಳಿಯ ಮೇಲೆ ನಿಂತಿರುವುದನ್ನು ನೋಡಿ, ರೈಲು ಬರುವ ಸಮಯವಾಗಿದೆ ಹಳಿಯಿಂದ ದೂರ ಹೋಗಿ ಎಂದು ಕೂಗಿದ್ದಾರೆ. ಆದರೆ ಅವರ ಮಾತಿಗೆ ಉತ್ತರವನ್ನೂ ನೀಡದ ಮಕ್ಕಳು ಅಲ್ಲಿಂದ ಸುಮಾರು 400  ಮೀ.ದೂರ ಇರುವ ಕುಮಟಾ ರೇಲ್ವೆ ನಿಲ್ದಾಣದ ಕಡೆ ಓಡಿದ್ದಾರೆ.

ನೇರವಾಗಿ ರೇಲ್ವೆ ಸ್ಟೇಶನ್‌ಗೆ ಹೋಗಿ ಅಲ್ಲಿನ ಸಿಬ್ಬಂದಿಗೆ ಹಳಿ ಬಿರುಕು ಬಿಟ್ಟಿರುವುದನ್ನು ಗಮನಕ್ಕೆ ತಂದಿದ್ದಾರೆ. ಗ್ಯಾಂಗ್‌ಮನ್ ಅಲರ್ಟ್‌ ಆಗಿ ಬರುತ್ತಿರುವ ಎಲ್ಲ ರೈಲಿಗೂ ಸಿಗ್ನಲ್ ತೋರಿಸಿ ತುಂಬಾ ನಿಧಾನವಾಗಿ ಚಲಿಸುವಂತೆ ನೋಡಿಕೊಂಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಬಾಲಕರು ತಿಳಿಸಿದ್ದು ನಿಜವಾಗಿತ್ತು. ನಂತರ ತಡ ರಾತ್ರಿ ಹಳಿ ಸರಿಪಡಿಸುವ ತನಕ ಬಂದ ಎಲ್ಲ ರೈಲೂ ಕೂಡ ತುಂಬ ನಿಧಾನವಾಗಿ ಚಲಿಸುವಂತೆ ಸಿಗ್ನಲ್ ನೀಡಲಾಯಿತು. ಇದರಿಂದ ಸಂಭವಿಸಬಹುದಾದ ದುರಂತ  ತಪ್ಪಿದಂತಾಗಿದೆ.

ಬಾಲಕರು ಹಳಿ ಬಿರುಕು ಬಿಟ್ಟಿರುವುದನ್ನು ಗಮನಕ್ಕೆ ತಂದಿರುವುದು ಶ್ಲಾಘನೀಯ. ಅವರು ಅಭಿನಂದನಾರ್ಹರು ಎಂದು  ಕೊಂಕಣ ರೈಲ್ವೆ ಪ್ರಾದೇಶಿಕ ವ್ಯವಸ್ಥಾಪಕ ಅಸೀಮ್ ಸುಲೇಮಾನ್ ತಿಳಿಸಿದ್ದಾರೆ.