ಮಂಡ್ಯ [ಆ.03]: ಪ್ರತಿನಿತ್ಯ ವರ್ಗಾವಣೆ ದಂಧೆ ನಡೆಯುತ್ತಿದ್ದು,  ಒಕ್ಕಲಿಗ ಅಧಿಕಾರಿಗಳನ್ನ ಯಡಿಯೂರಪ್ಪ ಚೆಂಡಾಡ್ತಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಗುರುವಾರ 11 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ರೆ, ನಿನ್ನೆ [ಶುಕ್ರವಾರ ] 6 ಐಪಿಎಸ್ ಅಧಿಕಾರಿಗಳನ್ನು ಬಿಎಸ್ ವೈ ಸರ್ಕಾರ ಎತ್ತಂಗಡಿ ಮಾಡಿತ್ತು. ಇದನ್ನು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶುರುವಾಯ್ತು ವರ್ಗಾವಣೆ ಪರ್ವ: ಗುರುವಾರ 11, ಶುಕ್ರವಾರ 6 IPS ಅಧಿಕಾರಿಗಳ ಎತ್ತಂಗಡಿ

ಇಂದು [ಶನಿವಾರ] ಮಂಡ್ಯದಲ್ಲಿ ಮಾತನಾಡಿದ ಕುಮಾರಸ್ವಾಮಿ,  ರವಿಕಾಂತೇಗೌಡರನ್ನ ಯಾಕಪ್ಪ ಎತ್ತಂಗಡಿ ಮಾಡಿದೆ?. ಯಾವ ತಪ್ಪು ಕೆಲಸ ಮಾಡಿದ್ದಕ್ಕೆ ತೆಗೆದೆ?. ಕುಮಾರಸ್ವಾಮಿ ಅಭಿಮಾನಿ ಅಂತಾ ಎತ್ತಂಗಡಿ ಮಾಡಿದ್ದಾ? ಎಂದು ಪ್ರಶ್ನೆಗಳ ಮೂಲಕ ಬಿಎಸ್ ವೈಗೆ ತಿವಿದರು.

ಬಡ ಕುಟುಂಬಗಳಿಗಾಗಿ ನಾನು ರಾಜಕೀಯ ಮಾಡಿದ್ದು,  ಯಡಿಯೂರಪ್ಪ ರೀತಿ ಜೈಲಿಗೋಗಲು ರಾಜಕೀಯ ಮಾಡಿಲ್ಲ ನಿಮ್ಮ ಯಡಿಯೂರಪ್ಪನೂ ಬರಲ್ಲ, ಸಿದ್ದರಾಮಯ್ಯನೂ ಬರಲ್ಲ. ಬಡ ಕುಟುಂಬಗಳ ನೆರವಿಗೆ ನನ್ನ ಬಿಟ್ಟು ಬೇರೆ ಯಾರೂ ಬರಲ್ಲ ಎಂದು ಮಾರ್ಮಿಕವಾಗಿ ಮಾತನಾಡಿದರು.

ರಾಜಕೀಯದಿಂದ ಇಷ್ಟೊತ್ತಿಗೆ ನಿವೃತ್ತಿ ಘೋಷಿಸುತ್ತಿದ್ದೆ. ಲಕ್ಷಾಂತರ ಕಾರ್ಯಕರ್ತರಿಗಾಗಿ ಇನ್ನೂ ಇದ್ದೀನಿ. ನನಗೆ ದೇವೇಗೌಡರ ರೀತಿ ಇಳಿವಯಸ್ಸಲ್ಲೂ ರಾಜಕೀಯ ಮಾಡುವ ಹಂಗಿಲ್ಲ ಎಂದರು.

ಇನ್ನು ಇದೇ ವೇಳೆ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿ, ಇನ್ಮುಂದೆ ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ ಎಂದು  ಕಾರ್ಯಕರ್ತರಿಗೆ ಅಭಯ ನೀಡಿದರು.