Asianet Suvarna News Asianet Suvarna News

ಬಸ್ ನಿಲ್ದಾಣದಲ್ಲಿ 1 ರು.ಗೆ 1 ಲೀಟರ್ ಶುದ್ಧ ನೀರು

ಇನ್ನು ಮುಂದೆ ಪ್ರಯಾಣಿಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿಗೆ ಪರದಾಡುವ ಪ್ರಮೇಯವಿಲ್ಲ. ಏಕೆಂದರೆ, ಶೀಘ್ರದಲ್ಲೇ ಬಸ್ ನಿಲ್ದಾಣಗಳಲ್ಲಿ ಕೇವಲ 1ರು.ಗೆ 1ಲೀಟರ್ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ.

KSRTC passengers to get drinking water at Rs 1 per ltr

ಬೆಂಗಳೂರು: ಇನ್ನು ಮುಂದೆ ಪ್ರಯಾಣಿಕರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣಗಳಲ್ಲಿ ಕುಡಿಯುವ ನೀರಿಗೆ ಪರದಾಡುವ ಪ್ರಮೇಯವಿಲ್ಲ. ಏಕೆಂದರೆ, ಶೀಘ್ರದಲ್ಲೇ ಬಸ್ ನಿಲ್ದಾಣಗಳಲ್ಲಿ ಕೇವಲ 1ರು.ಗೆ 1ಲೀಟರ್ ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ.

ಪ್ರಯಾಣಿಕರ ಸಂಖ್ಯೆ ವೃದ್ಧಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣಗಳಲ್ಲಿ ಗುಣಮಟ್ಟದ ಮೂಲ ಸೌಕರ್ಯ ಒದಗಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಮೊದಲಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಕೆಲಸ ಕೈಗೆತ್ತಿಕೊಂಡಿದೆ. ನಿಗಮದ ವ್ಯಾಪ್ತಿಯ ಮಂಡ್ಯ, ಮಂಗಳೂರು, ದಾವಣಗೆರೆ, ಶಿವಮೊಗ್ಗ ಹಾಗೂ ಪುತ್ತೂರು ವಿಭಾಗಗಳ ಆಯ್ದ ೧೫ ತಾಲೂಕು ಬಸ್ ನಿಲ್ದಾಣಗಳಲ್ಲಿ ‘ಶುದ್ಧ ಕುಡಿಯುವ ನೀರಿನ ಘಟಕ’ ಸ್ಥಾಪಿಸಲು ನಿರ್ಧರಿಸಿದೆ.

ಕೆಎಸ್‌ಆರ್‌ಟಿಸಿ ಹಾಗೂ ಭಾರತ್ ಪೆಟ್ರೋಲಿಯಂ  ಕಾರ್ಪೊರೇಷನ್ (ಬಿಪಿಸಿಎಲ್) ಸಹಯೋಗದಲ್ಲಿ ಆಯ್ದ ಬಸ್ ನಿಲ್ದಾಣಗಳಲ್ಲಿ ಈ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಮಾರ್ಚ್ ವೇಳೆಗೆ ನಿಗಮದ ವ್ಯಾಪ್ತಿಯ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಚಿಂತಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.

ಎಲ್ಲೆಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ?

ಮಂಡ್ಯ ವಿಭಾಗದ ನಾಗಮಂಗಲ, ಮಳವಳ್ಳಿ, ಶ್ರೀರಂಗಪಟ್ಟಣ, ಮೇಲುಕೋಟೆ, ಕೆ.ಆರ್.ಪೇಟೆ, ದಾವಣಗೆರೆ ವಿಭಾಗದ ಹರಪನಹಳ್ಳಿ, ಹರಿಹರ, ಹೊನ್ನಾಳಿ, ಜಗಳೂರು, ಶಿವಮೊಗ್ಗ ವಿಭಾಗದ ಭದ್ರಾವತಿ, ಹಿರಿಯೂರು, ಪುತ್ತೂರು ವಿಭಾಗದ ಧರ್ಮಸ್ಥಳ, ಸುಬ್ರಮಣ್ಯ ಹಾಗೂ ಕುಂದಾಪುರದ ತಾಲೂಕು ಬಸ್ ನಿಲ್ದಾಣಗಳಲ್ಲಿ ಈ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

24 ಸಾವಿರ ಲೀಟರ್ ಸಾಮರ್ಥ್ಯದ ಘಟಕ 

ಈ ಬಸ್ ನಿಲ್ದಾಣಗಳಲ್ಲಿ ದಿನದ ೨೪ ತಾಸು ಶುದ್ಧ ಕುಡಿಯುವ ನೀರು ಲಭ್ಯವಾಗಲಿದೆ. ಘಟಕವು ೨೪ ಸಾವಿರ ಲೀಟರ್ ಸಾಮರ್ಥ್ಯ ಹೊಂದಿರಲಿದೆ. ಇದರಲ್ಲಿ ಗಂಟೆಗೆ ೧೦೦ ಲೀಟರ್ ಶುದ್ಧ ನೀರನ್ನು ಪಡೆಯಬಹುದು. ಪ್ರತಿ ಲೀಟರ್‌ಗೆ 1 ರು. ಪಾವತಿಸಬೇಕು. ಪ್ರಯಾಣಿಕರು ನಿಗದಿತ ಮೊತ್ತ ಪಾವತಿಸಿ ತಮಗೆ ಅಗತ್ಯವಿರುವಷ್ಟು ನೀರನ್ನು ಪಡೆಯಬಹುದು. ಬಸ್ ನಿಲ್ದಾಣಗಳಲ್ಲಿ ಹಗಲು ಮತ್ತು ರಾತ್ರಿಯೂ ಪ್ರಯಾಣಿಕರು ಪ್ರಯಾಣಿಸುವುದರಿಂದ ಘಟಕಗಳ ನಿರ್ವಹಣೆಗೆ ನಿಗಮದಿಂದ ಸೂಕ್ತ ತರಬೇತಿ ಪಡೆದ ಸಿಬ್ಬಂದಿ ನಿಯೋಜಿಸಲಾಗುವುದು. ಇವರು ಪಾಳಿ ಲೆಕ್ಕದಲ್ಲಿ ದಿನದ ೨೪ ತಾಸು ಕಾರ್ಯ ನಿರ್ವಹಿಸಲಿದ್ದಾರೆ ಎಂದು ವಿವರಿಸಿದರು.

ಸುಲಿಗೆಗೆ ಕಡಿವಾಣ 

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರನ ಘಟಕ ಸ್ಥಾಪಿಸುತ್ತಿರುವುದು ಸ್ವಾಗತಾರ್ಹ. ಕೇವಲ ೧ರು.ಗೆ ೧ ಲೀಟರ್ ಗುಣಮಟ್ಟದ ಕುಡಿಯುವ ನೀರು ಸಿಕ್ಕರೆ ಪ್ರಯಾಣಿಕರಿಗೂ ತುಂಬಾ ಅನುಕೂಲವಾಗುತ್ತದೆ. ಬಸ್ ನಿಲ್ದಾಣಗಳಲ್ಲಿರುವ ಅಂಗಡಿಗಳಲ್ಲಿ ಪ್ರಯಾಣಿಕರ ಸುಲಿಗೆ ನಡೆಯುತ್ತಿದೆ. ೧ ಲೀಟರ್ ಮಿನರಲ್ ವಾಟರ್ ಬಾಟಲಿಗೆ ಎಂಆರ್‌ಪಿ ದರ ೧೫ ರು. ಇದ್ದರೂ ಅಂಗಡಿಯವರು ೨೦ ರು.ಗೆ ಮಾರಾಟ ಮಾಡುತ್ತಾರೆ. ೫ ರು. ಹೆಚ್ಚಿನ ಮೊತ್ತ ಏಕೆ ಎಂದು ಪ್ರಶ್ನಿಸಿದರೆ ಜಗಳವಾಡುತ್ತಾರೆ. ಅತ್ಯಂತ ಕನಿಷ್ಠ ದರಕ್ಕೆ ಶುದ್ಧ ಕುಡಿಯುವ ನೀರು ಸಿಗುವುದರಿಂದ ಇಂತವರ ಸುಲಿಗೆಗೆ ಕಡಿವಾಣ ಬೀಳಲಿದೆ. ಹಾಗಾಗಿ ಶುದ್ಧ ಕುಡಿಯುವ ನೀರನ ಘಟಕಗಳನ್ನು ಕೇವಲ ೧೫ ಬಸ್ ನಿಲ್ದಾಣಗಳಿಗೆ ಸೀಮಿತಗೊಳಿಸದೆ ನಿಗಮದ ಎಲ್ಲ ಬಸ್ ನಿಲ್ದಾಣಗಳಿಗೂ ವಿಸ್ತರಿಸಿದರೆ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಪ್ರಯಾಣಿಕ ರಮಾನಂದ್ ಹೇಳಿದರು.

 

Follow Us:
Download App:
  • android
  • ios