ಶಿಸ್ತಿನ ಹೆಸರಿನಲ್ಲಿ ರಾಜಣ್ಣ ದುರ್ಲಾಭ ಮಾಡಿಕೊಳ್ಳುತ್ತಿದ್ದಾರೆ, ಸುಮಾರು 250 ಪೊಲೀಸರಿಗೆ ಕಿರುಕುಳ ಕೊಟ್ಟಿದ್ಧಾರೆಂದು ಶಶಿಧರ್ ಆರೋಪಿಸಿದರು. ಅಷ್ಟೇ ಅಲ್ಲ, ರಾಜಣ್ಣನವರು ವಿವಿಧ ಕಾರಣಗಳನ್ನು ಮುಂದಿಟ್ಟು ಪೊಲೀಸರನ್ನು ಸಸ್ಪೆಂಡ್ ಮಾಡುತ್ತಾರೆ. ನಂತರ ಆ ಅಮಾನತನ್ನು ವಾಪಸ್ ಪಡೆದುಕೊಳ್ಳಲು ಹಣ ಪೀಕಿಸುತ್ತಾರೆ ಎಂದು ಪೊಲೀಸ್ ಮಹಾಸಂಘದ ಅಧ್ಯಕ್ಷರು ವಿವರಿಸಿದರು.
ಬೆಂಗಳೂರು(ಆ. 30): ಶಿವಮೊಗ್ಗದ ಕೆಎಸ್'ಆರ್'ಪಿ ಕಮಾಂಡೆಂಟ್ ಟಿ.ಕೆ.ರಾಜಣ್ಣ ವಿರುದ್ಧ ಆರ್ಡರ್ಲಿ ಬಳಕೆ ಸೇರಿದಂತೆ ಹಲವು ಆರೋಪಗಳು ಕೇಳಿಬರುತ್ತಿವೆ. ಆರ್ಡರ್ಲಿಯನ್ನು ನಿಷೇಧಿಸಲಾಗಿದ್ದರೂ ಪೇದೆಗಳನ್ನು ಜೀತದ ರೀತಿಯಲ್ಲಿ ಬಳಕೆ ಮಾಡುತ್ತಿದ್ದಾರೆಂಬ ಗುರುತರ ಆಪಾದನೆಯನ್ನು ರಾಜಣ್ಣ ಎದುರಿಸುತ್ತಿದ್ದಾರೆ. ಈ ಕುರಿತು ಸುವರ್ಣನ್ಯೂಸ್ ಜೊತೆ ಮಾತನಾಡಿದ ರಾಜ್ಯ ಪೊಲೀಸ್ ಮಹಾಸಂಘದ ಅಧ್ಯಕ್ಷ ಶಶಿಧರ್ ವೇಣುಗೋಪಾಲ್ ಅವರು ಟಿಕೆ ರಾಜಣ್ಣನವರನ್ನು ವಿಕೃತ ಮನಸ್ಸಿನ ವ್ಯಕ್ತಿ ಎಂದು ಬಣ್ಣಿಸಿದರು.
ಶಿಸ್ತಿನ ಹೆಸರಿನಲ್ಲಿ ರಾಜಣ್ಣ ದುರ್ಲಾಭ ಮಾಡಿಕೊಳ್ಳುತ್ತಿದ್ದಾರೆ, ಸುಮಾರು 250 ಪೊಲೀಸರಿಗೆ ಕಿರುಕುಳ ಕೊಟ್ಟಿದ್ಧಾರೆಂದು ಶಶಿಧರ್ ಆರೋಪಿಸಿದರು. ಅಷ್ಟೇ ಅಲ್ಲ, ರಾಜಣ್ಣನವರು ವಿವಿಧ ಕಾರಣಗಳನ್ನು ಮುಂದಿಟ್ಟು ಪೊಲೀಸರನ್ನು ಸಸ್ಪೆಂಡ್ ಮಾಡುತ್ತಾರೆ. ನಂತರ ಆ ಅಮಾನತನ್ನು ವಾಪಸ್ ಪಡೆದುಕೊಳ್ಳಲು ಹಣ ಪೀಕಿಸುತ್ತಾರೆ ಎಂದು ಪೊಲೀಸ್ ಮಹಾಸಂಘದ ಅಧ್ಯಕ್ಷರು ವಿವರಿಸಿದರು.
ಇನ್ನು, ಶಿವಮೊಗ್ಗದ ಪೊಲೀಸರಲ್ಲಿ ಇರುವ ಆರ್ಡರ್ಲಿ ಪದ್ಧತಿ ಬಗ್ಗೆ ಸುವರ್ಣನ್ಯೂಸ್'ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆಯೇ ಮಾಚೇನಹಳ್ಳಿಯಲ್ಲಿನ ಕೆಎಸ್'ಆರ್'ಪಿ ಕ್ಯಾಂಪ್'ನಲ್ಲಿ ಕರೆಂಟ್ ಕಟ್ ಮಾಡಿದ ಪ್ರಸಂಗ ಬೆಳಕಿಗೆ ಬಂದಿದೆ. ಇದೇ ವೇಳೆ, ಸುವರ್ಣನ್ಯೂಸ್ ಜೊತೆ ಮಾತನಾಡಿದ ಕಮಾಂಡೆಂಟ್ ಟಿ.ಕೆ.ರಾಜಣ್ಣ ತಾನು ಯಾವುದೇ ಆರ್ಡರ್ಲಿ ಪದ್ಧತಿ ಬಳಕೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಕ್ಯಾಂಪ್'ನಲ್ಲಿ ನಡೆಯುವ ಮಾಮೂಲಿಯ ಕ್ರಿಟಿಕ್ ಅಷ್ಟೇ. ಸ್ವಚ್ಛತಾ ಕಾರ್ಯದಲ್ಲಿ ಪೊಲೀಸರನ್ನು ಅನಿವಾರ್ಯವಾಗಿ ಬಳಸಿಕೊಂಡಿದ್ದೇವೆ ಎಂದು ಟಿ.ಕೆ.ರಾಜಣ್ಣ ಸ್ಪಷ್ಟನೆ ನೀಡಿದರು. ಅಷ್ಟೇ ಅಲ್ಲ, ತನ್ನ ವಿರುದ್ಧ ಯಾರೋ ಬೇಕಂತಲೇ ಪಿತೂರಿ ಮಾಡಿರಬಹುದು ಎಂದು ಈ ವರದಿ ಬಗ್ಗೆ ರಾಜಣ್ಣ ಸಂದೇಹ ವ್ಯಕ್ತಪಡಿಸಿದರು.
ಅಂದಹಾಗೆ, ಕೆಎಸ್'ಆರ್'ಪಿ ಕಮಾಂಡೆಂಟ್ ಆಗಿರುವ ಟಿ.ಕೆ.ರಾಜಣ್ಣನವರು ಆ. 31, ನಾಳೆ ನಿವೃತ್ತಿಯಾಗುತ್ತಿದ್ದಾರೆ.