ಶಿವಮೊಗ್ಗ :  ಭಾರತೀಯ ಜನತಾ ಪಾರ್ಟಿಗೆ ಅನ್ಯ ಪಕ್ಷದಿಂದ ಒಬ್ಬ ಸೇರ್ಪಡೆಗೊಂಡರೆ ಅದನ್ನು ‘ಆಪರೇಷನ್‌ ಕಮಲ’ ಎಂದು ಬಿಂಬಿಸಲಾಗುತ್ತದೆ. ಅದೇ ರಾಮನಗರದಲ್ಲಿ ನಡೆದ ಕುತಂತ್ರದ ರಾಜಕಾರಣಕ್ಕೆ ಏನೆಂದು ಹೆಸರಿಸಬೇಕು ಬೇಕೆಂದು ಶಾಸಕ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಬಿಜೆಪಿಯ ಚಂದ್ರಶೇಖರ್‌ ಒಳ್ಳೆಯ ಅಭ್ಯರ್ಥಿಯಾಗಲಿಲ್ಲ. ಕುತಂತ್ರ ರಾಜಕಾರಣ ಮಾಡಿ ಪಕ್ಷ ತೊರೆದಿದ್ದಾರೆ. ಇದು ನಮಗೆ ಪಾಠವಾಗಿದೆ ಎಂದರು.

ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಎಚ್ಚರ ವಹಿಸಬೇಕಿದೆ. ಈ ಘಟನೆ ಮುಂದೆ ಇಟ್ಟುಕೊಂಟ್ಟು ಮುಂದಿನ ದಿನಗಳಲ್ಲಿ ಟಿಕೆಟ್‌ ನೀಡಲಾಗುವುದು. ಕಾಂಗ್ರೆಸ್‌ ಪಕ್ಷವೇ ಅವರನ್ನು ಬಿಜೆಪಿಗೆ ಕಳುಹಿಸಿ ಪುನಃ ಅವರನ್ನು ವಾಪಸ್‌ ಕರೆಸಿಕೊಂಡಿದೆ. ಈ ರೀತಿ ಕುತಂತ್ರ ರಾಜಕಾರಣ ಯಾವುದೇ ಕಾರಣಕ್ಕೂ ಒಳ್ಳೆಯದಲ್ಲ ಎಂದು ಹೇಳಿದರು.

1989ರಲ್ಲಿ ನಾಲ್ವರು ಶಾಸಕರನ್ನು ಹೊಂದಿದ್ದ ಬಿಜೆಪಿ ಇಂದು 104 ಶಾಸಕರನ್ನು ಹೊಂದಿದೆ. ಬೇರೆ ಬೇರೆ ಪಕ್ಷಗಳಿಂದ ಬಂದ ಅನೇಕರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಹಾಗಾಗಿ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಬಂದಿದ್ದ ಚಂದ್ರಶೇಖರ್‌ ಅವರಿಗೆ ಪಕ್ಷದಿಂದ ಟಿಕೆಟ್‌ ನೀಡಲಾಗಿತ್ತು. ಆದರೆ, ಅವರು ಡಿ.ಕೆ.ಸಹೋದರರ ಕುತಂತ್ರ ರಾಜಕಾರಣದಿಂದ ಕಾಂಗ್ರೆಸ್‌ಗೆ ಮರಳಿದ್ದಾರೆ ಎಂದು ಹೇಳಿದರು.